ಮುಂಬೈಗೆ ಶರಣಾದ ಟೈಟಾನ್ಸ್

ಕೋಲ್ಕತ: ಅರ್ಜುನ್ ದೇಶ್ವಾಲ್ (10) ಭರ್ಜರಿ ರೈಡಿಂಗ್ ಫಲವಾಗಿ ಮಾಜಿ ಚಾಂಪಿಯನ್ ಯು ಮುಂಬಾ ತಂಡ 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನಲ್ಲಿ ಜಯದ ಹಾದಿ ಹಿಡಿಯಿತು.

ನೇತಾಜಿ ಸುಭಾಷ್​ಚಂದ್ರ ಬೋಸ್ ಒಳಾಂಗಣ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಯು ಮುಂಬಾ ತಂಡ 41-27 ಅಂಕಗಳಿಂದ ತೆಲುಗು ಟೈಟಾನ್ಸ್ ತಂಡವನ್ನು ಸುಲಭವಾಗಿ ಮಣಿಸಿತು. ಈ ಗೆಲುವಿನೊಂದಿಗೆ ಯು ಮುಂಬಾ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿತ ಕಂಡಿತು.

ಬೆಂಗಳೂರು ಚರಣದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಎದುರು 23 ಅಂಕ ಗಳಿಸಿ ಗಮನಸೆಳೆದಿದ್ದ ಟೈಟಾನ್ಸ್ ತಂಡದ ಬಾಹುಬಲಿ ಖ್ಯಾತಿಯ ರೈಡರ್ ಸಿದ್ದಾರ್ಥ್ ದೇಸಾಯಿಗೆ (4) ಸತತವಾಗಿ ಕಡಿವಾಣ ಹಾಕಿದ ಮುಂಬೈ ತಂಡದ ರಕ್ಷಣಾ ಪಡೆ ಮೇಲುಗೈ ಸಾಧಿಸಿತು. ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟ ಮೊದಲಾರ್ಧದಲ್ಲಿ ಉಭಯ ತಂಡಗಳು ತಲಾ 15 ಅಂಕಗಳೊಂದಿಗೆ ಸಮಬಲ ಸಾಧಿಸಿದ್ದವು. ದ್ವಿತೀಯಾರ್ಧದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಮುಂಬೈ 2 ಬಾರಿ ಆಲೌಟ್ ಮಾಡಿ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಟೈಟಾನ್ಸ್ ಪರ ಕನ್ನಡಿಗ ರಾಕೇಶ್ ಗೌಡ (7) ಗಮನಸೆಳೆದರು.

ಅಹಮದಾಬಾದ್​ನಲ್ಲಿ ಅ.19ರಂದು ಫೈನಲ್

7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನ ಫೈನಲ್ ಪಂದ್ಯ ಅಕ್ಟೊಬರ್ 19ರಂದು ಅಹಮಬಾದಾದ್​ನಲ್ಲಿ ನಡೆಯಲಿದೆ. ಜತೆಗೆ ಪ್ಲೇಆಫ್ ಹಂತದ 2 ಎಲಿಮಿನೇಟರ್ ಹಾಗೂ ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 14ರಂದು ಎಲಿಮಿನೇಟರ್ ಪಂದ್ಯಗಳು ಹಾಗೂ ಅಕ್ಟೋಬರ್ 16ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.

Leave a Reply

Your email address will not be published. Required fields are marked *