ಕಾಂಪೋಸ್ಟ್ ಲಾಭ ಗಳಿಸುವ ಗ್ರಾಪಂಗೆ ಬಹುಮಾನ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಹಸಿ ತ್ಯಾಜ್ಯದಿಂದ ಗೊಬ್ಬರ ಉತ್ಪಾದಿಸಿ ಅತಿ ಹೆಚ್ಚು ಲಾಭ ಮಾಡುವ ಗ್ರಾಮ ಪಂಚಾಯಿತಿಗೆ ಜಿಲ್ಲಾಡಳಿತದಿಂದ ಅಷ್ಟೇ ಪ್ರಮಾಣದ ಬಹುಮಾನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಘೋಷಿಸಿದ್ದಾರೆ.

ಮಂಗಳಾದೇವಿ ರಾಮಕೃಷ್ಣ ಮಠದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5ನೇ ಹಂತದ ಭಾಗವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 200 ಗ್ರಾಮಗಳಲ್ಲಿ ನಡೆಯುವ ‘ಸ್ವಚ್ಛ ಗ್ರಾಮ ಅಭಿಯಾನ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಸಕ್ಕೆ ಮೌಲ್ಯವೃದ್ಧಿಯಾದಾಗ ಜನರು ಸಹಜವಾಗಿ ಇದರ ಬಗ್ಗೆ ಜಾಗೃತರಾಗುತ್ತಾರೆ. ಗ್ರಾಮಗಳಲ್ಲಿ ಉತ್ಪಾದಿಸಿದ ಗೊಬ್ಬರವನ್ನು ಜಿಲ್ಲಾಡಳಿತ ಮತ್ತು ರಾಮಕೃಷ್ಣ ಮಠದ ಜತೆಗೂಡಿ ಸಂಗ್ರಹ ಮತ್ತು ಮಾರಾಟದ ಬಗ್ಗೆ ಪ್ರಯತ್ನಿಸಲಾಗುವುದು ಎಂದರು.

ರಾಮಕೃಷ್ಣ ಮಠ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಅಭಿಯಾನಕ್ಕೆ ಚಾಲನೆ ನೀಡಿದರು.
ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜರುಗಿದ ಸ್ವಚ್ಛ ಗ್ರಾಮ ಅಭಿಯಾನವನ್ನು ಉತ್ತಮವಾಗಿ ಸಂಘಟಿಸಿದ ಬಜ್ಪೆ, ಕೆಮ್ರಾಲು, ಪಡುಪಣಂಬೂರು, ಕಿಲ್ಪಾಡಿ, ವಾಲ್ಪಾಡಿ, ಅತಿಕಾರಿಬೆಟ್ಟು, ಕೇಪು, ಮಂಚಿ, ಪುಣಚ, ಇರ್ವತ್ತೂರು ಗ್ರಾಮ ಪಂಚಾಯಿತಿಗಳನ್ನು ಗೌರವಿಸಲಾಯಿತು.

ದಕ್ಷಿಣ ಕನ್ನಡ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ದ.ಕ. ಜಿಪಂ ಸಿಇಒ ಡಾ.ಆರ್.ಸೆಲ್ವಮಣಿ, ಉಡುಪಿ ಜಿಪಂ ಸಿಇಒ ಸಿಂಧು ಬಿ.ರೂಪೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಎಂಆರ್‌ಪಿಎಲ್ ಜಿಜಿಎಂ ಬಿ.ಎಚ್.ವಿ. ಪ್ರಸಾದ್ ಉಪಸ್ಥಿತರಿದ್ದರು.

200 ಗ್ರಾಮಗಳಲ್ಲಿ ಅಭಿಯಾನ:
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 200 ಗ್ರಾಮಗಳಲ್ಲಿ 2019ರ ಅಕ್ಟೋಬರ್ 2ರವರೆಗೆ ನಡೆಯುವ ಅಭಿಯಾನದಲ್ಲಿ ಎರಡು ಸಾವಿರ ಸ್ವಚ್ಛತಾ ಶ್ರಮದಾನ ನೆರವೇರಲಿದೆ. ಶ್ರಮದಾನಕ್ಕೆ ಬೇಕಾದ ಉಪಕರಣ, ಭಾಗವಹಿಸುವ ಸದಸ್ಯರಿಗೆ ಟೀಶರ್ಟ್‌ಗಳು, ಜಾಗೃತಿ ಕರಪತ್ರ, ಬ್ಯಾನರ್‌ಗಳು, ತ್ಯಾಜ್ಯ ಸಾಗಿಸಲು ವಾಹನದ ವ್ಯವಸ್ಥೆ, ಉಪಾಹಾರವನ್ನು ಮಂಗಳೂರು ರಾಮಕೃಷ್ಣ ಮಿಷನ್ ಒದಗಿಸಲಿದೆ ಎಂದು ಸ್ವಚ್ಛತಾ ಅಭಿಯಾನ ಸಂಚಾಲಕ ಏಕಗಮ್ಯಾನಂದ ಸ್ವಾಮೀಜಿ ಹೇಳಿದರು.

ಬಯಲು ಶೌಚ ಮುಕ್ತವಾಗಿರುವ ಉಭಯ ಜಿಲ್ಲೆಗಳಲ್ಲಿ ಸಮರ್ಪಕ ಘನ ತ್ಯಾಜ್ಯ ನಿರ್ವಹಣೆ ನಡೆಯಬೇಕು. ದಕ್ಷಿಣ ಕನ್ನಡ ಜಿಲ್ಲೆಯ 25 ಗ್ರಾಪಂಗಳಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಯೋಜನೆ ಹಾಕಲಾಗಿದ್ದು, ಜನವರಿಯಲ್ಲಿ ಜಾರಿಯಾಗಲಿದೆ.
– ಡಾ.ಆರ್. ಸೆಲ್ವಮಣಿ ದ.ಕ ಜಿಪಂ ಸಿಇಒ