ಭಟ್ಕಳ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಾಲೂಕಿನ ಎಲ್ಲ ಸರ್ಕಾರಿ ಕಚೇರಿಗಳಿಗೆ ಆ.14 ಮತ್ತು 15ರಂದು ದೀಪಾಲಂಕಾರ ಮಾಡಬೇಕು. ಉತ್ತಮ ದೀಪಾಲಂಕಾರ ಮಾಡಿದವರಿಗೆ ಬಹುಮಾನ ನೀಡಲಾಗುವುದು ಎಂದು ತಹಸೀಲ್ದಾರ್ ನಾಗರಾಜ ನಾಯ್ಕಡ್ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಏರ್ಪಡಿಸಿದ್ದ ಸ್ವಾತಂತ್ರೊೃೀತ್ಸವ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
15ರ ಬೆಳಗ್ಗೆ 8.30ಕ್ಕೆ ಸರಿಯಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರು ತಾಲೂಕು ಕ್ರೀಡಾಂಗಣದಲ್ಲಿ ಹಾಜರಿರಬೇಕು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಗೌರವಿಸಲಾಗುತ್ತದೆ. ವಿಶೇಷವಾಗಿ ತಾಲೂಕಿನಲ್ಲಿ ಸಾರ್ವಜನಿಕ ಸೇವೆ ಸಲ್ಲಿಸಿದವರಿಗೆ ಹಾಗೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸೇವೆ ಸಲ್ಲಿಸಿದವರಿಗೂ ಗೌರವಿಸಲಾಗುವುದು ಎಂದರು.
ಸರ್ಕಾರಿ ನೌಕರರು ಸಂಬಳದಲ್ಲಿ ದೇಣಿಗೆ ನೀಡಲು ಇಚ್ಛಿಸಿದಲ್ಲಿ ತಹಸೀಲ್ದಾರ್, ತಾಲೂಕು ಪಂಚಾಯಿತಿ ಇಒ ಅವರ ಜಂಟಿ ಬ್ಯಾಂಕ್ ಖಾತೆಗೆ ಸಂದಾಯ ಮಾಡಬಹುದು ಎಂದರು. ಉಪ ತಹಸೀಲ್ದಾರ್ ಸಂತೋಷ ಬಂಡಾರಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.