ಪ್ರಿಯಾಂಕಾ ಚಿತ್ರಕ್ಕೆ ದೇವಕಿ ಶೀರ್ಷಿಕೆ

ಬೆಂಗಳೂರು: ‘ಮಮ್ಮಿ’ ಚಿತ್ರದ ನಂತರ ಅದರ ನಿರ್ದೇಶಕ ಲೋಹಿತ್ ಮತ್ತೊಮ್ಮೆ ಪ್ರಿಯಾಂಕಾ ಉಪೇಂದ್ರ ಅವರೊಂದಿಗೆ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಆ ಚಿತ್ರಕ್ಕೆ ‘ಹೌರಾಬ್ರಿಡ್ಜ್’ ಅಂಥಲೂ ನಾಮಕರಣ ಮಾಡಿ, ಬಹಳ ಮುತುವರ್ಜಿಯಿಂದ ಶೂಟಿಂಗ್ ಸಹ ಮುಗಿಸಿಕೊಂಡಿದ್ದರು. ಇನ್ನೇನು ಸಿನಿಮಾ ತೆರೆಗೆ ಬರುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ಚಿತ್ರತಂಡದಿಂದ ಬ್ರೇಕಿಂಗ್ ನ್ಯೂಸ್​ವೊಂದು ಹೊರಬಿದ್ದಿದೆ. ಏನದು? ಚಿತ್ರದ ಶೀರ್ಷಿಕೆ ಬದಲಾವಣೆ!

ಹೌದು, ಪ್ರಿಯಾಂಕಾ-ಲೋಹಿತ್ ಕಾಂಬಿನೇಷನ್​ನ ಈ ಸಿನಿಮಾಕ್ಕೆ ‘ಹೌರಾಬ್ರಿಡ್ಜ್’ ಬದಲಾಗಿ ‘ದೇವಕಿ’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ‘ದೇವಕಿ’ ಮೂಲಕ ಮೊದಲ ಬಾರಿಗೆ ‘ರಿಯಲ್ ಸ್ಟಾರ್’ ಉಪೇಂದ್ರ-ಪ್ರಿಯಾಂಕಾ ಅವರ ಪುತ್ರಿ ಐಶ್ವರ್ಯಾ ಉಪೇಂದ್ರ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಇದೇ ಬುಧವಾರ ಚಿತ್ರದ ಫಸ್ಟ್​ಲುಕ್ ಮತ್ತು ಟೀಸರ್ ಕೂಡ ಬಿಡುಗಡೆ ಆಗಲಿದೆ. ಮೊದಲ ಚಿತ್ರದಲ್ಲೇ ತಾಯಿಯೊಂದಿಗೆ ಐಶ್ವರ್ಯಾ ನಟಿಸಿರುವುದು ವಿಶೇಷ. ಅಷ್ಟಕ್ಕೂ ಶೀರ್ಷಿಕೆ ಬದಲಾವಣೆ ಮಾಡಿದ್ದು ಯಾಕೆ? ‘ಇಡೀ ಸಿನಿಮಾ ಚಿತ್ರೀಕರಣ ಸಂಪೂರ್ಣವಾಗಿ ಕೊಲ್ಕತ್ತದಲ್ಲೇ ನಡೆದಿದೆ. ಮೊದಲು ‘ಹೌರಾ ಬ್ರಿಡ್ಜ್’ ಎಂದು ಶೀರ್ಷಿಕೆ ಫೈನಲ್ ಮಾಡಿದ್ದೆವು. ಶೂಟಿಂಗ್ ಮುಗಿದ ಮೇಲೆ ಪೋಸ್ಟ್ ಪ್ರೊಡಕ್ಷನ್ ಮಾಡುವಾಗ ‘ದೇವಕಿ’ ಶೀರ್ಷಿಕೆಯೇ ಸೂಕ್ತ ಎನಿಸಿ, ಅದನ್ನೇ ಫಿಕ್ಸ್ ಮಾಡಿದೆವು. ಚಿತ್ರದ ಕಥಾನಾಯಕಿ ಪಾತ್ರವು ದೇವಕಿ ಎಂದೇ ಇದೆ. ಅಲ್ಲದೆ, ದೇವಕಿ ಎಂಬುದು ಎಲ್ಲ ಕಡೆಗೂ ಸಲ್ಲುವಂತಹ ಹೆಸರಾಗಿದೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಲೋಹಿತ್. ಮೊದಲ ಪ್ರಯತ್ನದಲ್ಲೇ ಹಾರರ್ ಸಿನಿಮಾ ಮಾಡಿದ್ದ ನಿರ್ದೇಶಕರು, ಈ ಬಾರಿ ಯಾವ ಜಾನರ್​ಗೆ ಕೈ ಹಾಕಿದ್ದಾರೆ ಎಂಬ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ. ಎಚ್.ಸಿ. ವೇಣು ಛಾಯಾಗ್ರಹಣ ಮಾಡಿದ್ದು, ನೋಬಿನ್ ಪೌಲ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮುಖ್ಯಪಾತ್ರವೊಂದರಲ್ಲಿ ಕಿಶೋರ್ ನಟಿಸುತ್ತಿದ್ದಾರೆ. ಸದ್ಯ ಕನ್ನಡ-ತಮಿಳು ಭಾಷೆಗಳಲ್ಲಿ ಸಿನಿಮಾ ಸಿದ್ಧಗೊಂಡಿದ್ದು, ಏಕಕಾಲದಲ್ಲಿ ತೆರೆಗೆ ಬರಲಿದೆ. ಇದರ ಜತೆಗೆ ತೆಲುಗು ಮತ್ತು ಬೆಂಗಾಲಿ ಭಾಷೆಗಳಲ್ಲೂ ಸಿನಿಮಾವನ್ನು ತೆರೆಕಾಣಿಸುವುದಕ್ಕೆ ಮಾತುಕತೆಗಳು ನಡೆಯುತ್ತಿವೆ. ರವೀಶ್ ಮತ್ತು ಅಕ್ಷಯ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.