ಆಯೋಗಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕ ಪತ್ರ: ನಿಟ್ಟುಸಿರುಬಿಟ್ಟ ಪ್ರಜ್ವಲ್

ಹಾಸನ: ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಪ್ರಮಾಣಪತ್ರ ಸಂಬಂಧ ಚುನಾವಣಾ ಆಯೋಗಕ್ಕೆ ನೀಡಿರುವ ದೂರಿನಲ್ಲಿನ ಆಕ್ಷೇಪಗಳ ಬಗ್ಗೆ ಚುನಾವಣಾಧಿಕಾರಿ ಯಾವುದೇ ಕ್ರಮಕೈಗೊಳ್ಳಲು ಆಗುವುದಿಲ್ಲ, ದೂರುದಾರರು ನ್ಯಾಯಾಲಯದ ಮೊರೆ ಹೋಗಬಹುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆಯೋಗಕ್ಕೆ ವರದಿ ನೀಡಿದ್ದು, ಪ್ರಜ್ವಲ್ ನಿಟ್ಟುಸಿರು ಬಿಡುವಂತೆ ಮಾಡಿದೆ.

ಪ್ರಜ್ವಲ್ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿನ ಅಂಶಗಳ ಬಗ್ಗೆ ಆಕ್ಷೇಪಗಳನ್ನು ಪಟ್ಟಿ ಮಾಡಿದ್ದ ದೂರುದಾರ ದೇವರಾಜೇಗೌಡ ಅವರ ಬಹುತೇಕ ಆಕ್ಷೇಪಗಳಿಗೆ ಆದಾಯ ತೆರಿಗೆ ಇಲಾಖೆಯಿಂದ ತನಿಖೆ ಆಗಬೇಕಾಗಿರುತ್ತದೆ ಎನ್ನುವ ಅಭಿಪ್ರಾಯವನ್ನು ಜಿಲ್ಲಾ ಚುನಾವಣಾಧಿಕಾರಿ ಮೇ 18ರಂದು ಸಲ್ಲಿಸಿರುವ ವರದಿಯಲ್ಲಿ ವ್ಯಕ್ತಪಡಿಸಿದ್ದಾರೆ. ದೇವರಾಜೇಗೌಡರ ಆಕ್ಷೇಪಗಳಿಗೆ ಆಯೋಗದ ನಿರ್ದೇಶನದಂತೆ ಕಂಡಿಕೆ ವಾರು ವರದಿ ನೀಡಿರುವ ಡಿಸಿ ಪ್ರಿಯಾಂಕ, ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 125ಎ ಪ್ರಕಾರ ಕ್ರಮಕೈಗೊಳ್ಳುವಂತೆ ಸೂಚಿಸಿದ್ದ ರಾಜ್ಯ ಚು. ಆಯೋಗದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಚು. ಆಯೋಗದ ಏಪ್ರಿಲ್ 26, 2014ರ ಪತ್ರದಲ್ಲಿನ ನಿರ್ದೇಶನಗಳನ್ನು ಉಲ್ಲೇಖಿಸಿದ್ದಾರೆ.

ಕೋರ್ಟ್ ಮೆಟ್ಟಿಲೇರಲು ಸಿದ್ಧತೆ: ಪ್ರಜ್ವಲ್ ಪ್ರಮಾಣಪತ್ರದಲ್ಲಿನ ಆಕ್ಷೇಪಗಳನ್ನು ಮುಂದಿಟ್ಟು ಕೋರ್ಟ್ ಮೆಟ್ಟಿಲೇರಲು ದೂರುದಾರ ದೇವರಾಜೇಗೌಡ ಸಿದ್ಧತೆ ನಡೆಸಿದ್ದಾರೆ. ಮೇ 26ರಂದು ಪ್ರತ್ಯೇಕ ದೂರು ದಾಖಲಿಸಲು ಬಿಜೆಪಿ ಪಾಳಯದಲ್ಲೂ ತಯಾರಿ ನಡೆದಿದೆ.