ಹೊಸ ಭವಿಷ್ಯ, ಹೊಸ ರಾಜಕೀಯ ಪ್ರಾರಂಭಕ್ಕೆ ನನ್ನೊಂದಿಗೆ ಕೈಜೋಡಿಸಿ: ಪ್ರಿಯಾಂಕ ಗಾಂಧಿ ವಾದ್ರಾ

ನವದೆಹಲಿ: ಪಶ್ಚಿಮ ಉತ್ತರಪ್ರದೇಶದ ಕಾಂಗ್ರೆಸ್​ ಉಸ್ತುವಾರಿ ಪ್ರಿಯಾಂಕ ಗಾಂಧಿ ವಾದ್ರಾ, ಪಕ್ಷದ ಬೆಂಬಲಿಗರು ಮತ್ತು ಮತದಾರರಿಗೆ ಸಂದೇಶ ರವಾನಿಸಿದ್ದು, ಎಲ್ಲರೂ ಹೊಸ ರೀತಿಯ ರಾಜಕೀಯವನ್ನು ಪ್ರಾರಂಭಿಸೋಣ. ಇದರಲ್ಲಿ ದುರ್ಬಲನು ಕೂಡ ಪಾಲುದಾರನಾಗಿರುತ್ತಾನೆ ಹೇಳಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದ ಬಳಿಕ ಇದೇ ಮೊದಲ ಬಾರಿಗೆ ಪ್ರಿಯಾಂಕ ಗಾಂಧಿ ವಾದ್ರಾ ಮತ್ತು ಜ್ಯೋತಿರಾದಿತ್ಯ ಸಿಂಧ್ಯ ಇಂದು ಲಖನೌಗೆ ಭೇಟಿ ನೀಡಲಿದ್ದು, ಇವರಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡ ಸಾಥ್‌ ನೀಡಲಿದ್ದಾರೆ.

“ನಾನಿಂದು ಲಖನೌಗೆ ನಿಮ್ಮನ್ನು ಭೇಟಿಯಾಗಲು ಬರುತ್ತಿದ್ದೇನೆ. ನಾವೆಲ್ಲರೂ ಒಟ್ಟಿಗೆ ಸೇರಿ ಹೊಸ ಮಾದರಿಯ ರಾಜಕೀಯವನ್ನು ಪ್ರಾರಂಭಿಸುವ ಭರವಸೆಯನ್ನು ಹೊಂದಿದ್ದೇನೆ. ಈ ರಾಜಕೀಯದಲ್ಲಿ ಎಲ್ಲರೂ ಪಾಲುದಾರರಾಗಿರುತ್ತಾರೆ. ನನ್ನ ಯುವ ಸ್ನೇಹಿತರು, ನನ್ನ ಸೋದರಿಯರು ಮತ್ತು ದುರ್ಬಲರು ಸೇರಿದಂತೆ ಎಲ್ಲರ ಧ್ವನಿಯೂ ಇಲ್ಲಿ ಕೇಳಿಸುತ್ತದೆ,” ಎಂದು ಕಾಂಗ್ರೆಸ್‌ ಶಕ್ತಿ ಆಪ್‌ ಮೂಲಕ ಆಡಿಯೋ ಮೆಸೇಜ್‌ ಮತ್ತು ಮತದಾರರಿಗೆ ಕರೆ ಮಾಡಿ ತಿಳಿಸಿದ್ದಾರೆ.

“ನನ್ನೊಂದಿಗೆ ಬನ್ನಿ. ಎಲ್ಲರೂ ಹೊಸ ಭವಿಷ್ಯ, ಹೊಸ ರಾಜಕೀಯವನ್ನು ರೂಪಿಸೋಣ. ಧನ್ಯವಾದಗಳು,” ಎಂದು ಸಂದೇಶ ಕಳುಹಿಸಿದ್ದಾರೆ.

“ಇನ್ನು ಜ್ಯೋತಿರಾದಿತ್ಯ ಸಿಂಧ್ಯ ಅವರು ಕೂಡ ಸಂದೇಶ ಕಳುಹಿಸಿದ್ದು, ನಾಳೆ ನಾನು ನಿಮ್ಮೊಂದಿಗೆ ಬರುತ್ತಿದ್ದೇನೆ. ಉತ್ತರ ಪ್ರದೇಶದ ಎಲ್ಲ ಯುವಕಜನಾಂಗಕ್ಕೆ ಭವಿಷ್ಯದ ಕುರಿತು ಉತ್ತಮ ಮಾರ್ಗ ಬೇಕಾಗಿದೆ ಮತ್ತು ರಾಜ್ಯಕ್ಕೆ ಬದಲಾವಣೆಯ ಅಗತ್ಯವಿದೆ. ಬನ್ನಿ ನಮ್ಮೊಂದಿಗೆ ಉತ್ತರ ಪ್ರದೇಶದ ಬದಲಾವಣೆಗೆ ಕೈಜೋಡಿಸಿ,” ಎಂದು ಹೇಳಿದ್ದಾರೆ.

ಮೂವರು ನಾಯಕರು ಏರ್‌ಪೋರ್ಟ್‌ನಿಂದ ಪಕ್ಷದ ಕಚೇರಿವರೆಗೆ ತಲುಪವವರೆಗೂ ನಡೆಸುವ ರೋಡ್‌ ಷೋಗಾಗಿ ಕಾಂಗ್ರೆಸ್‌ ಕಾರ್ಯಕರ್ತರು ಎಲ್ಲ ರೀತಿಯ ಸಿದ್ಧತೆಯನ್ನು ಕೈಗೊಂಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ ಉತ್ತರ ಪ್ರದೇಶದಲ್ಲಿ ಪ್ರಚಾರಕ್ಕೆ ಶುರುಮಾಡಿದೆ. ನಾಳೆಯಿಂದ ಮೂರು ದಿನಗಳ ಕಾಲ ಪ್ರಧಾನ ಕಾರ್ಯದರ್ಶಿಗಳು ಪಕ್ಷದ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಲಿದ್ದಾರೆ. (ಏಜೆನ್ಸೀಸ್)

One Reply to “ಹೊಸ ಭವಿಷ್ಯ, ಹೊಸ ರಾಜಕೀಯ ಪ್ರಾರಂಭಕ್ಕೆ ನನ್ನೊಂದಿಗೆ ಕೈಜೋಡಿಸಿ: ಪ್ರಿಯಾಂಕ ಗಾಂಧಿ ವಾದ್ರಾ”

Comments are closed.