ಉತ್ತರಕ್ಕೆ ಪ್ರಿಯಾಂಕಾ ಪ್ರವೇಶ

ಲಖನೌ: ಉತ್ತರಪ್ರದೇಶ ರಾಜಕೀಯಕ್ಕೆ ಅಧಿಕೃತವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರವೇಶವಾಗಿದ್ದು, ಹೊಸ ಲೆಕ್ಕಾಚಾರ ಆರಂಭವಾಗಿದೆ. ಎಐಸಿಸಿ ಅಧ್ಯಕ್ಷ ಹಾಗೂ ಸಹೋದರ ರಾಹುಲ್ ಗಾಂಧಿ ಜತೆ ಲಖನೌ ವಿಮಾನ ನಿಲ್ದಾಣದಿಂದ ಉತ್ತರಪ್ರದೇಶ ಕಾಂಗ್ರೆಸ್ ಕಚೇರಿವರೆಗೆ ಸೋಮವಾರ ಭರ್ಜರಿ ರೋಡ್​ಶೋ ನಡೆಸುವ ಮೂಲಕ ಸಕ್ರಿಯ ರಾಜಕೀಯಕ್ಕೆ ಪ್ರಿಯಾಂಕಾ ಧುಮುಕಿದರು. ಸುಮಾರು 12 ಕಿ.ಮೀ ರೋಡ್​ಶೋನಲ್ಲಿ ಅಣ್ಣ-ತಂಗಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ(ಪಶ್ಚಿಮ ಉ.ಪ್ರ) ಜ್ಯೋತಿರಾದಿತ್ಯ ಸಿಂಧಿಯಾ ಜತೆಯಾದರು. ಮಧ್ಯಾಹ್ನ 1 ಗಂಟೆಗೆ ಆರಂಭವಾದ ರೋಡ್​ಶೋ, ಸಂಜೆ 5 ಗಂಟೆಗೆ ಅಂತ್ಯವಾಯಿತು. ರೋಡ್​ಶೋ ಮುಗಿಸಿ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ರಾಹುಲ್, ‘ ಮಾಯಾವತಿ, ಅಖಿಲೇಶ್ ಬಗ್ಗೆ ನಮಗೆ ಗೌರವ ಇದೆ. ಆದರೆ ಕಾಂಗ್ರೆಸ್ ತನ್ನ ಎಲ್ಲ ಯತ್ನಗಳನ್ನು ನಡೆಸಿಯೇ ಲೋಕಸಭಾ ಚುನಾವಣೆಯಲ್ಲಿ ಹೋರಾಟ ನಡೆಸಲಿದೆ. ರಾಜ್ಯದ ರಾಜಕೀಯ ಚಿತ್ರಣ ಬದಲಿಸುತ್ತೇವೆ’ ಎಂದರು. ಆದರೆ ಪ್ರಿಯಾಂಕಾ ಗಾಂಧಿ ಮಾತ್ರ ಜನರತ್ತ ಕೈ ಬೀಸುತ್ತ, ವೈಯಕ್ತಿಕ ಮಾತುಕತೆಯಲ್ಲಿ ನಿರತರಾಗಿದ್ದರು. ಭಾಷಣಕ್ಕಿಂತ ಜನರೊಡನೆ ಬೆರೆಯಲು ಹೆಚ್ಚಿನ ಆದ್ಯತೆ ನೀಡಿದರು.

ಹೊಸ ರಾಜಕೀಯಕ್ಕೆ ಕರೆ: ಲಖನೌಗೆ ಬರುವ ಮುಂಚೆ ಕಾಂಗ್ರೆಸ್​ನ ಶಕ್ತಿ ಆಪ್ ಮೂಲಕ ಕಾರ್ಯಕರ್ತರಿಗೆ ಸಂದೇಶ ನೀಡಿದ್ದ ಪ್ರಿಯಾಂಕಾ, ನಾವೆಲ್ಲರೂ ಸೇರಿ ಹೊಸ

ರೀತಿಯ ರಾಜಕೀಯಕ್ಕೆ ಮುನ್ನುಡಿ ಬರೆಯೋಣ. ಈ ರಾಜಕೀಯದಲ್ಲಿ ಯುವಕರು, ಸಹೋದರಿಯರು, ದೀನರು ಹಾಗೂ ಎಲ್ಲರ ಮಾತುಗಳಿಗೂ ಅವಕಾಶ ಸಿಗಲಿದೆ. ನನ್ನೊಡನೆ ರಾಜಕೀಯಕ್ಕೆ ಬನ್ನಿ, ಹೊಸ ಭವಿಷ್ಯ ಬರೆಯೋಣ’ ಎಂದಿದ್ದಾರೆ.

ಚಹಾ ಕಪ್ ಬದಲು ದೇಶ ಕೊಟ್ರು!

ಪ್ರತಿಪಕ್ಷಗಳ ಮಹಾಮೈತ್ರಿಯು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರುವ ಅವಸರದಲ್ಲಿ ಮತ್ತೆ ಪೇಚಿಗೆ ಸಿಲುಕಿದೆ. ಟಿಡಿಪಿ ಧರಣಿ ಸಂದರ್ಭದಲ್ಲಿ ಮೋದಿ ಟೀಕಿಸುವ ನೆಪದಲ್ಲಿ ಅವಹೇಳನಕಾರಿ ಭಿತ್ತಿಪತ್ರ ಇರಿಸಿದ್ದು ವಿವಾದಕ್ಕೆ ಗುರಿಯಾಗಿದೆ. ‘ಯಾರ ಕೈನಲ್ಲಿ ಎಂಜಲು ಚಹಾ ಕಪ್ ನೀಡಬೇಕಿತ್ತೋ, ಅವರ ಕೈಗೆ ಜನರು ದೇಶವನ್ನು ನೀಡಿದ್ದಾರೆ’ ಎಂದು ಅದರಲ್ಲಿ ಬರೆಯಲಾಗಿತ್ತು. ಇದರ ಬಗ್ಗೆ ಟೀಕೆ ವ್ಯಕ್ತವಾದ ಬಳಿಕ ಟಿಡಿಪಿ ಮುಖಂಡರು ಅದನ್ನು ತೆಗೆದುಹಾಕಿದರು.

ಪ್ರಿಯಾಂಕಾ ಟ್ವಿಟರ್ ಖಾತೆ

ಸಕ್ರಿಯ ರಾಜಕಾರಣಕ್ಕೆ ಬರುತ್ತಿದ್ದಂತೆ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವಿಟರ್​ಗೂ ಕಾಲಿಟ್ಟಿದ್ದಾರೆ. @priyanka gandhi ಹೆಸರಿನ ಖಾತೆ ತೆರೆದಿದ್ದಾರೆ. ಮೊದಲ ದಿನವೇ ಸುಮಾರು 90 ಸಾವಿರ ಹಿಂಬಾಲಕರನ್ನು ಪಡೆದಿದ್ದಾರೆ. ಅವರು ಖುದ್ದಾಗಿ ರಾಹುಲ್ ಗಾಂಧಿ ಸೇರಿ 7 ಕಾಂಗ್ರೆಸ್ ನಾಯಕರನ್ನು ಫಾಲೋ ಮಾಡುತ್ತಿದ್ದಾರೆ.

ದೆಹಲೀಲಿ ನಾಯ್ಡು ಧರಣಿ

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ದೆಹಲಿಯಲ್ಲಿ ಸೋಮವಾರ ದಿನಪೂರ್ತಿ ಧರಣಿ ನಡೆಸಲಾಯಿತು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿ ಪ್ರತಿಪಕ್ಷಗಳ ಬಹುತೇಕ ನಾಯಕರು ನಾಯ್ಡುಗೆ ಬೆಂಬಲ ಸೂಚಿಸಿದರು. ಏತನ್ಮಧ್ಯೆ ಮಹಾಗಠಬಂಧನದ ಎರಡನೇ ಸಮಾವೇಶವು ಕೇಜ್ರಿವಾಲ್ ನೇತೃತ್ವದಲ್ಲಿ ದೆಹಲಿಯಲ್ಲಿ ಮಂಗಳವಾರ ನಡೆಯಲಿದೆ.