ವಾರ್​ಣಾಸಿಯಲ್ಲಿ ಪ್ರಿಯಾಂಕಾ ಗಾಂಧಿ ಠುಸ್ ಪಟಾಕಿ: ಪ್ರಚಾರಕ್ಕೆ ಸೀಮಿತವಾದ ಜ್ಯೂನಿಯರ್ ಇಂದಿರಾ ಸ್ಪರ್ಧೆ

| ರಾಘವ ಶರ್ಮ ನಿಡ್ಲೆ ವಾರಾಣಸಿ

ವಾರಾಣಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧೆ ಕುರಿತ ನಿರೀಕ್ಷೆ ಹುಟ್ಟಿಸಿ ಹಿಂದೆ ಸರಿದ ಕಾಂಗ್ರೆಸ್ ವರಿಷ್ಠರು ಮತ್ತೊಮ್ಮೆ ಪಕ್ಷದ ಕಾರ್ಯಕರ್ತರ ರಣೋತ್ಸಾಹಕ್ಕೆ ತಣ್ಣೀರೆರಚಿದ್ದಾರೆ. ಈಗ ಪ್ರಿಯಾಂಕಾ ಸ್ಪರ್ಧೆ ಇಲ್ಲದಿರುವುದರಿಂದ ಕಾಶಿಯಲ್ಲಿ ಮೋದಿ ಗೆಲುವಿನ ಹಾದಿ ಮತ್ತಷ್ಟು ಸುಗಮವಾಗಿದೆ.

ಉತ್ತರ ಪ್ರದೇಶದಲ್ಲಿ ರಾಜಕೀಯ ಎಡವಟ್ಟುಗಳಿಂದಲೇ ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿರುವ ಕಾಂಗ್ರೆಸ್ ಮತ್ತು ಮಹಾಮೈತ್ರಿ ಪ್ರಿಯಾಂಕಾ ವಿಷಯದಲ್ಲೂ ತಪ್ಪು ಹೆಜ್ಜೆ ಇಟ್ಟು ಬಿಜೆಪಿಗೆ ಮತ್ತೊಂದು ಅಸ್ತ್ರ ನೀಡಿದೆ. ಪ್ರಿಯಾಂಕಾ ಬದಲಿಗೆ ಅಜಯ್ ರಾಯ್ ಹೆಸರು ಘೊಷಿಸಿದ್ದು ಈ ಎಡವಟ್ಟುಗಳ ಮುಂದುವರಿದ ಭಾಗ ಅಷ್ಟೇ. ವಾಸ್ತವದಲ್ಲಿ, ಪ್ರಿಯಾಂಕಾ ಸ್ಪರ್ಧೆ ಬಗ್ಗೆ ಕಾಂಗ್ರೆಸ್ಸಿಗರಲ್ಲೇ ಅನುಮಾನಗಳಿದ್ದವು. ಆದರೆ ಪ್ರಿಯಾಂಕಾ ಪದೇ ಪದೇ ಈ ವಿಷಯವನ್ನು ಸಾರ್ವಜನಿಕವಾಗಿ ರ್ಚಚಿಸಿದ್ದರಿಂದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹೊಸ ನಿರೀಕ್ಷೆ, ಉತ್ಸಾಹ ಇಮ್ಮಡಿಸಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ವಾರಾಣಸಿ ಕ್ಷೇತ್ರ ಪ್ರಿಯಾಂಕಾ ಉಸ್ತುವಾರಿ ಯಾಗಿರುವ ಪೂರ್ವ ಉತ್ತರ ಪ್ರದೇಶದ ವ್ಯಾಪ್ತಿಯಲ್ಲಿರುವುದರಿಂದ ಅವರ ಸ್ಪರ್ಧೆ ಅಕ್ಕಪಕ್ಕದ ಮಿರ್ಜಾಪುರ, ಚಂಡೌಲಿ, ಗಾಜಿಪುರ, ಬದೂಹಿ, ಜೌನ್​ಪುರ ಸೇರಿ ಏಳೆಂಟು ಲೋಕಸಭಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿತ್ತು. ಆದರೆ, ಕಳೆದ ಬಾರಿಯ ಅಭ್ಯರ್ಥಿಯೇ ಕಣಕ್ಕಿಳಿಯುತ್ತಿರುವುದರಿಂದ ಬಲೂನಿನಂತೆ ಉಬ್ಬಿದ್ದ ಪಕ್ಷದ ಕಾರ್ಯಕರ್ತರ ಉತ್ಸಾಹವೀಗ ಪೂರ್ತಿ ತಗ್ಗಿದೆ. ಕಾಂಗ್ರೆಸ್, ಮಹಾಮೈತ್ರಿ ಮುಖಂಡರು ನಾವು ಮೋದಿಗೆ ‘ಟೈಟ್ ಫೈಟ್’ ನೀಡಲಿದ್ದೇವೆ ಎಂದು ಎಷ್ಟೇ ಹೇಳಿದರೂ, ವಾರಾಣಸಿ ಯಲ್ಲಿ ಮೋದಿಯವರದ್ದು ‘ಒನ್ ಸೈಡೆಡ್ ಫೈಟ್’ ಎನ್ನುವುದು ಗಂಗಾ ನದಿಯಷ್ಟೇ ಸತ್ಯ!

ಮೋದಿ ವಿರುದ್ಧ ಕಾಶಿ ವಿಶ್ವನಾಥನ ನೆಲದಲ್ಲಿ ಗೆಲ್ಲುವುದು ಕಷ್ಟ ಎಂಬುದು ಕೈ ವರಿಷ್ಠರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಮೋದಿ ತಮ್ಮ ಗೆಲುವಿಗಾಗಿ ಪರಿಶ್ರಮ ಪಡುವಂತೆ ಮಾಡ ಬೇಕು ಎಂಬುದೇ ಕಾಂಗ್ರೆಸ್ ನಾಯಕರ ಉದ್ದೇಶವಾಗಿದ್ದರೆ ಪ್ರಿಯಾಂಕಾ ವಿಷಯದಲ್ಲಿ ಮೊದಲೇ ಸ್ಪಷ್ಟ ನಿರ್ಧಾರಕ್ಕೆ ಬರುವ ಅವಕಾಶಗಳಿದ್ದವು. ಆದರೆ, ಹೇಗೆ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ವಿರುದ್ಧ ಮೈತ್ರಿ ಮಾಡಿಕೊಳ್ಳುವ ವಿಷಯದಲ್ಲಿ ವಿನಾಕಾರಣ ವಿಳಂಬ ನೀತಿ ಅನುಸರಿಸಲಾಯಿತೋ ಹಾಗೇ ವಾರಾಣಸಿ ವಿಷಯದಲ್ಲೂ ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡಲಾಯಿತು.

ಬಿಜೆಪಿ ಮನೆಮನೆ ಪ್ರಚಾರ: ವಾರಾಣಸಿಯಲ್ಲಿ ಬಿಜೆಪಿ ಕಳೆದೆರಡು ತಿಂಗಳಿಂದ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಘೊಷಣೆ ಮಾಡದ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಪ್ರಚಾರ ಕಾರ್ಯ ಇನ್ನೂ ಆರಂಭವಾಗಿಲ್ಲ. ಬೂತ್ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗಿದ್ದರೂ, ಅಭ್ಯರ್ಥಿ ಯಾರೆಂಬ ಜನರ ಪ್ರಶ್ನೆಗಳಿಗೆ ಕಾರ್ಯಕರ್ತರಲ್ಲಿ ಉತ್ತರವಿರಲಿಲ್ಲ. ಇದರಿಂದ ಇಲ್ಲಿ ನೆಪಕ್ಕೆ ಮಾತ್ರ ಕಾಂಗ್ರೆಸ್ ಸ್ಪರ್ಧಿಸುವಂತಾಗಿದೆ!

ಪ್ರಿಯಾಂಕಾ ಸ್ಪರ್ಧೆ ನಿರಾಕರಣೆ ಏಕೆ?: ಸೋಲಿನೊಂದಿಗೆ ಪ್ರಿಯಾಂಕಾ ಚುನಾವಣಾ ರಾಜಕೀಯ ಆರಂಭಿಸುವುದು ಬೇಡ ಎನ್ನುವುದು ರಾಹುಲ್ ಹಾಗೂ ಸೋನಿಯಾ ಗಾಂಧಿ ಅಭಿಪ್ರಾಯವಾಗಿತ್ತು. ಆದರೆ, ಪ್ರಿಯಾಂಕಾ ತನ್ನ ಸೋಲಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಮೋದಿಗೆ ವಾರಾಣಸಿಯಲ್ಲೇ ಟಕ್ಕರ್ ನೀಡಬೇಕೆನ್ನುವುದು ಪ್ರಿಯಾಂಕಾ ಆಲೋಚನೆ ಆಗಿತ್ತು. ಹೀಗಾಗಿಯೇ, ಅಲ್ಲಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ಹೇಳುತ್ತಾರೆ.

ಒಂದುವೇಳೆ ಪ್ರಿಯಾಂಕಾ ಸ್ಪರ್ಧಿಸುತ್ತಿದ್ದರೆ ಮೋದಿ ಮತ್ತು ಬಿಜೆಪಿಗೆ ವಾರಾಣಸಿ ಮೇಲೆ ಹೆಚ್ಚು ಗಮನ ನೀಡಬೇಕಾದ ಅನಿವಾರ್ಯತೆ ಸಹಜವಾಗಿಯೇ ಸೃಷ್ಟಿಯಾಗುತ್ತಿತ್ತು. ಈ ವಿಚಿತ್ರ ತಂತ್ರಗಾರಿಕೆಯಿಂದ ಕಾಂಗ್ರೆಸ್ ಸಾಧಿಸಿದ್ದೇನು ಎಂಬ ಪ್ರಶ್ನೆಗೆ ಬಹುಶಃ ಕಾಂಗ್ರೆಸ್ಸಿಗರಲ್ಲೇ ಉತ್ತರವಿರಲಿಕ್ಕಿಲ್ಲ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುತ್ತಿರುವ ಅಜಯ್ ರಾಯ್ ಗೆ ಕನಿಷ್ಠ ಮೂರು ತಿಂಗಳ ಮೊದಲೇ ಟಿಕೆಟ್ ಖಾತ್ರಿಪಡಿಸಿದ್ದರೆ, ಪಕ್ಷವನ್ನು ಬೇರು ಮಟ್ಟದಲ್ಲಿ ಗಟ್ಟಿಗೊಳಿಸುವ ಯತ್ನ ಮಾಡಬಹುದಿತ್ತು. 2014ರಲ್ಲಿ 75 ಸಾವಿರ ಮತ ಪಡೆದಿದ್ದ ರಾಯ್ ಮುಂದಿರುವುದು ಕೇವಲ 24 ದಿನಗಳು ಮಾತ್ರ.

ಕಾಂಗ್ರೆಸ್-ಮಹಾಮೈತ್ರಿ ವಿಫಲ

ಪ್ರಧಾನಿ ಮೋದಿ ವಿರುದ್ಧ ಮಹಾಮೈತ್ರಿ ಮತ್ತು ಕಾಂಗ್ರೆಸ್ ಸೇರಿ ಏಕೈಕ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಆರಂಭಿಕ ಹಂತದಲ್ಲಿ ಮಾತುಕತೆ ನಡೆಸಿದ್ದವು. ಆದರೆ, ಕಾಂಗ್ರೆಸ್ ಅನೇಕ ಕ್ಷೇತ್ರಗಳಲ್ಲಿ ಮಹಾಮೈತ್ರಿ ಮತಗಳನ್ನು ವಿಭಜಿಸುತ್ತಿರುವುದರಿಂದ ವಾರಾಣಸಿ

ವಿಷಯದಲ್ಲಿ ಇಬ್ಬರ ಮಧ್ಯೆ ಒಮ್ಮತ ಮೂಡಿಲ್ಲ. ಹೀಗಾಗಿ, ಮಹಾಮೈತ್ರಿ ಅಭ್ಯರ್ಥಿಯಾಗಿ ಶಾಲಿನಿ ಯಾದವ್ ಹೆಸರು ಘೊಷಿಸಲಾಗಿದೆ. ರಾಯ್ ಬರೇಲಿ ಮತ್ತು ಅಮೇಥಿಯಲ್ಲಿ ಮೈತ್ರಿ ಅಭ್ಯರ್ಥಿ ಹಾಕಲಾಗಿಲ್ಲ. ಆದರೆ, ಅದೇ ನೀತಿ ವಾರಾಣಸಿಗೆ ಅನ್ವಯಿಸುವುದರಲ್ಲಿ ಪ್ರತಿಪಕ್ಷಗಳು ವಿಫಲವಾಗಿವೆ.

ಮೋದಿ ಅಲೆ ಮಧ್ಯೆ ಅಜಯ್ ರಾಯ್ ಪ್ರಭಾವಳಿ ಕೆಲಸ ಮಾಡಲು ಸಾಧ್ಯವೇ? ಸೋಲೋ ಗೆಲುವೋ ಪ್ರಿಯಾಂಕಾ ವಿಷಯದಲ್ಲಿ ಪಕ್ಷ ರಿಸ್ಕ್ ತೆಗೆದುಕೊಳ್ಳಬೇಕಿತ್ತು. ಎಸ್​ಪಿ-ಬಿಎಸ್​ಪಿ ಅಭ್ಯರ್ಥಿ ಶಾಲಿನಿ ಯಾದವ್ ಮೇಯರ್ ಚುನಾವಣೆಯನ್ನೇ ಗೆದ್ದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಅವರನ್ನು ಯಾರು ಕೇಳುತ್ತಾರೆ? ಪ್ರಿಯಾಂಕಾ ಬರುತ್ತಿದ್ದರೆ ಚುನಾವಣಾ ಚಿತ್ರಣವೇ ಬದಲಾಗುತ್ತಿತ್ತು.

| ಜಿ.ಪಿ.ಸಿನ್ಹಾ ಬನಾರಸ್ ವಿಶ್ವವಿದ್ಯಾಲಯ ಸಿಬ್ಬಂದಿ

ರಾಹುಲ್ ಗಾಂಧಿ ಸಚಿವರಾಗಿ ಕೆಲಸ ಮಾಡದಿದ್ದರೆ ಅವರ ಆಡಳಿತಾತ್ಮಕ ಸಾಮರ್ಥ್ಯ ಗೊತ್ತಾಗುವುದು ಹೇಗೆ? ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೆ ಅವರ ಚುನಾವಣಾ ಸಾಮರ್ಥ್ಯ ಗೊತ್ತಾಗುವುದು ಹೇಗೆ?

| ಯಶ್ ಸಿಂಗ್ ವಾರಾಣಸಿ ಯುವಕ

ಕಾಂಗ್ರೆಸ್ ಸೋತಿದ್ದೆಲ್ಲಿ?

ಪ್ರಿಯಾಂಕಾ ಸ್ಪರ್ಧೆ ಬೇಡ ಎನ್ನುವುದೇ ಆಗಿದ್ದರೆ ಅವರ ಸ್ಪರ್ಧೆ ಕುರಿತ ಹೇಳಿಕೆಗಳನ್ನು ತೇಲಿಸಿಬಿಡುವ ಅಗತ್ಯವೇ ಇರಲಿಲ್ಲ. ಮೋದಿ ವಿರುದ್ಧ ಸ್ಪರ್ಧಿಸಿ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಪ್ರಚಾರ ಮಾಡಲು ಕಾಂಗ್ರೆಸ್ಸಿಗರೇ ಬಿಜೆಪಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.