More

  ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ

  ಚಿಂತಾಮಣಿ : ವಾಣಿಜ್ಯ ನಗರಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶಿಸಿದರು.
  ರಾಷ್ಟ್ರೀಯ ಮಟ್ಟದ ಸ್ಟಾರ್ ಪ್ರಚಾರಕಿಯ ಮಿಂಚಿನ ಸಂಚಾರವು ಮಧ್ಯಾಹ್ನ 3.45ಕ್ಕೆ ಪ್ರಾರಂಭವಾಗಿ ಮುಕ್ಕಾಲು ಗಂಟೆಯೊಳಗೆ ಮುಕ್ತಾಯ ಕಂಡಿತು.

  ನಗರದ ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರ ವೃತ್ತದಿಂದ ಪ್ರಾರಂಭವಾಗಿ ಗಜಾನನ ವೃತ್ತ, ಜೋಡಿ ರಸ್ತೆ ಸಿಗ್ನಲ್ ವೃತ್ತ, ಚೇಳೂರು ವೃತ್ತದ ಮೂಲಕ ಪ್ರಮುಖ ರಸ್ತೆಯಲ್ಲಿ ರೋಡ್ ಶೋ ಸಾಗಿತು. ರಸ್ತೆಯುದ್ದಕ್ಕೂ ಹೂವಿನ ಸುರಿಮಳೆ, ಘೋಷಣೆಗಳ ಜೈಕಾರ, ಜೂನಿಯರ್ ಇಂದಿರಾ ಗಾಂಧಿ, ಕಾಂಗ್ರೆಸ್ ನಾಯಕಿ ಎಂಬಿತ್ಯಾದಿ ಹೊಗಳಿಕೆಯ ಕೂಗಾಟವು ಗಮನ ಸೆಳೆದವು.

  ಎಲ್ಲರಿಗೂ ನಮಸ್ಕಾರಗಳು: ಭಾಷಣವನ್ನು ಕನ್ನಡದಲ್ಲಿ ಆರಂಭಿಸುವ ಮೂಲಕ ಪ್ರಿಯಾಂಕಗಾಂಧಿ ಗಮನ ಸೆಳೆದರು. ಎಲ್ಲರಿಗೂ ನಮಸ್ಕಾರಗಳು ಎಂದು ಹೇಳುತ್ತಲೇ ಎಲ್ಲರನ್ನೂ ಹುರಿದುಂಬಿಸಿದರು. ಇದಕ್ಕೆ ಕಾರ್ಯಕರ್ತರು ಶಿಳ್ಳೆ, ಘೋಷಣೆಗಳೊಂದಿಗೆ ಸಂತಸ ವ್ಯಕ್ತಪಡಿಸಿದರು.

  ಬಿಜೆಪಿ ಆಡಳಿತ ಜನರಿಗೆ ತೃಪ್ತಿ ಇಲ್ಲ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಇದು ಪಕ್ಕಾ ಗ್ಯಾರಂಟಿ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದರು. ಕೋಲಾರ ರಸ್ತೆಯ ವೃತ್ತದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ಜನರಿಗೆ ತೃಪ್ತಿ ಇಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸದಿರುವುದರ ಜತೆಗೆ ಬಡ ಮತ್ತು ಮಧ್ಯಮ ವರ್ಗದ ಜನರ ವಿಚಾರದಲ್ಲಿ ಅನ್ಯಾಯ ಮಾಡಿದೆ ಎಂದರು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನರ ಸಮಸ್ಯೆಯು ನಿರಂತರವಾಗಿ ಹೆಚ್ಚಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೋಮುವಾದ, ಜನ ವಿರೋಧಿ ಆಡಳಿತ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ ಎಂದು ತಿಳಿಸಿದರು. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿ ಮನೆಗೂ ಗ್ಯಾರಂಟಿ ಕಾರ್ಡ್? ಕೊಟ್ಟಿದೆ. ಮನೆಯ ಯಜಮಾನಿಗೆ 2,000 ರೂ. ನೆರವು ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ ಮತ್ತೆ ಜಾರಿ, ಮಹಿಳೆಯರಿಗೆ ಉಚಿತ ಬಸ್‌ಪಾಸ್ ಸೇರಿದಂತೆ ಹಲವು ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸಲಿದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಬಡ ವರ್ಗದ ಜನರ ಜೀವನ ಸುಧಾರಿಸಲಿದೆ ಎಂದರು. ಕಾಂಗ್ರೆಸ್ ಅಭ್ಯರ್ಥಿ ಡಾ ಎಂ.ಸಿ.ಸುಧಾಕರ್ ಮತ್ತಿತರರು ಇದ್ದರು.

  ನಗರದಲ್ಲಿ ಟ್ರಾಫಿಕ್ ಜಾಮ್: ರೋಡ್ ಶೋ ಹಿನ್ನೆಲೆಯಲ್ಲಿ ಬಾಗೇಪಲ್ಲಿ ವೃತ್ತದಿಂದ ಕೋಲಾರ ಕ್ರಾಸ್‌ವರೆಗೆ ಮಧ್ಯಾಹ್ನ ಕಾಂಗ್ರೆಸ್ ಕಾರ್ಯಕರ್ತರು ತುಂಬಿ ತುಳುಕಾಡುತ್ತಿದ್ದರು. ಇದರ ನಡುವೆ ಜನ ಮತ್ತು ವಾಹನ ಸಂಚಾರ ದಟ್ಟಣೆಯ ನಿಯಂತ್ರಣದ ದೃಷ್ಟಿಯಿಂದ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ, ಕೋಲಾರ ಮಾರ್ಗದ ಬದಲಿಗೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಇಷ್ಟಾದರೂ ನಗರದ ಎಂ.ಜಿ.ರಸ್ತೆ ಮತ್ತು ಬಿ.ಬಿ.ರಸ್ತೆಯಲ್ಲಿ ಹೆಚ್ಚಿನ ಜನಸಂದಣಿಯಿಂದ ಟ್ರಾಫಿಕ್ ಜಾಮ್ ಉಂಟಾಯಿತು.

  ಮುಕ್ಕಾಲು ದಾರಿಗೆ ಮೊಟುಕು: ಬಾಗೇಪಲ್ಲಿ ವೃತ್ತದಿಂದ ಕೋಲಾರ ಕ್ರಾಸ್‌ವರೆಗೆ ರೋಡ್ ಶೋ ಇತ್ತು. ಇದರ ನಡುವೆ ಹವಾಮಾನ ವೈಪರೀತ್ಯದಿಂದ ಪ್ರವಾಸವನ್ನು ರಾಷ್ಟ್ರನಾಯಕಿಗೆ ತರಾತುರಿಯಲ್ಲಿ ಮುಗಿಸುವಂತಾಗಿದ್ದು, ಮಂಡ್ಯದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಹೆಲಿಕಾಪ್ಟರ್ ಬದಲಿಗೆ ಬೆಂಗಳೂರಿಗೆ ವಾಹನದಲ್ಲಿ ಬಂದು, ರಾಜಧಾನಿಯಿಂದ ಹೆಲಿಕಾಫ್ಟರ್‌ನಲ್ಲಿ ಚಿಂತಾಮಣಿಗೆ ಆಗಮಿಸಿದರು. ಮತ್ತೆ ಹೊಸಕೋಟೆ ಕಾರ್ಯಕ್ರಮಕ್ಕೆ ಹೋಗಬೇಕಾಗಿದ್ದರಿಂದ ಚೇಳೂರು ವೃತ್ತ ದಾಟುತ್ತಿದ್ದಂತೆ ಇಲ್ಲಿಯೇ ಭಾಷಣ ಮಾಡುವುದಾಗಿ ಪ್ರಿಯಾಂಕಾ ಗಾಂಧಿ ತಿಳಿಸಿದರು. ಕೊನೆಗೆ ಸ್ವಲ್ಪ ದೂರ ಬಂದು ಕಿಕ್ಕಿರಿದ ಜನರ ನಡುವೆ ಪಕ್ಷದ ಅಭ್ಯರ್ಥಿಗೆ ಬೆಂಬಲ, ಕಾಂಗ್ರೆಸ್ ಸಾಧನೆ ಮತ್ತು ಭರವಸೆಗಳ ಬಗ್ಗೆ ಹೇಳಿ ಮತ್ತೆ ವಾಪಸಾದರು. ಮತ್ತೊಂದೆಡೆ ಸಾಕಷ್ಟು ಕಾರ್ಯಕರ್ತರು ಬಹಿರಂಗ ಸಭೆ ನಿಗದಿಯಾಗಿದ್ದ ಸ್ಥಳಕ್ಕೆ ತೆರಳಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts