ಜೂ.ಇಂದಿರಾ ರಂಗಪ್ರವೇಶ

>

| ಕೆ.ರಾಘವ ಶರ್ಮ

ನವದೆಹಲಿ: ಲೋಕಸಭೆ ಸಮರಕ್ಕೆ 3 ತಿಂಗಳು ಬಾಕಿ ಇರುವಂತೆಯೇ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಶುರುವಾಗಿದೆ. ಕಾಂಗ್ರೆಸ್​ಗೆ ನೆಹರು ಕುಟುಂಬದ ಮತ್ತೊಂದು ಕುಡಿ ಸೇರ್ಪಡೆಯಾಗಿದೆ. ಈವರೆಗೆ ತೆರೆಯ ಹಿಂದಿದ್ದುಕೊಂಡೇ ಪಕ್ಷದ ಸಂಘಟನೆ, ರಾಜಕೀಯ ಚಟುವಟಿಕೆಗಳಲ್ಲಿ ಕೈಜೋಡಿಸುತ್ತಿದ್ದ ಪ್ರಿಯಾಂಕಾ ಗಾಂಧಿ ಸೋದರ ರಾಹುಲ್ ಗಾಂಧಿಯ ಸತತ ವೈಫಲ್ಯವನ್ನು ಮೆಟ್ಟಿನಿಲ್ಲುವ ಕೊನೆಯ ಅಸ್ತ್ರವಾಗಿ ಕಾಂಗ್ರೆಸ್ ಬತ್ತಳಿಕೆ ಸೇರಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗುವ ಮೂಲಕ ಮುಖ್ಯವಾಹಿನಿ ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶ ಮಾಡಿದ್ದಾರೆ. ಈ ಬೆಳವಣಿಗೆ ಸಹಜವಾಗಿಯೇ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ. ಅಮೇಠಿ ಮತ್ತು ರಾಯ್ಬರೇಲಿ ಕ್ಷೇತ್ರಗಳಿಗೆ ಸೀಮಿತವಾಗಿದ್ದ ಪ್ರಿಯಾಂಕಾ ಹೊಸ ಜವಾಬ್ದಾರಿ ಬಳಿಕ ಸಂಪೂರ್ಣ ಉತ್ತರ ಪ್ರದೇಶ ಮತ್ತು ಅದರಾಚೆಗೂ ಪ್ರಭಾವ ಬೀರುವ ನಿರೀಕ್ಷೆ ಗರಿಗೆದರಿದೆ. ಪ್ರಧಾನಿ ನರೇಂದ್ರ ಮೋದಿಗೆ ಪರ್ಯಾಯವಾಗಿ ರಾಹುಲ್ ಗಾಂಧಿಯನ್ನು ಜನ ಒಪ್ಪುತ್ತಾರೆಯೇ ಎಂಬ ಕಾಂಗ್ರೆಸ್ಸಿಗರ ಕಳವಳದ ನಡುವೆ ಪ್ರಿಯಾಂಕಾ ಪ್ರವೇಶ ಕುತೂಹಲ ಮೂಡಿಸಿದೆ.

ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಾಮ್ಯತೆಯ ವ್ಯಕ್ತಿತ್ವ, ವಾಕ್ಚಾತುರ್ಯ ಮತ್ತು ಜನಾಕರ್ಷಣೆ ಸಾಮರ್ಥ್ಯವಿರುವುದರಿಂದಾಗಿ ಪ್ರಿಯಾಂಕಾ ಗಾಂಧಿ ಪಕ್ಷದಲ್ಲಿ ಅಧಿಕೃತವಾಗಿ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂಬ ಆಗ್ರಹ ಮೊದಲಿನಿಂದಲೇ ಇತ್ತು. 2014ರ ಲೋಕಸಭೆ ಚುನಾವಣೆಯನ್ನು ಹೀನಾಯವಾಗಿ ಸೋತಾಗ ‘ಪ್ರಿಯಾಂಕಾ ಲಾವೋ ಕಾಂಗ್ರೆಸ್ ಬಚಾವೋ’ ಎಂಬ ಘೊಷಣೆಗಳೂ ಜೋರಾಗಿದ್ದವು.

ಹಾಗಿದ್ದರೂ, ಸೋನಿಯಾ ರಾಹುಲ್​ಗೆ ಅಧ್ಯಕ್ಷ ಸ್ಥಾನ ನೀಡಿ, ಪ್ರಿಯಾಂಕಾ ರಾಜಕೀಯ ಪ್ರವೇಶದ ನಿಗೂಢತೆ ಮುಂದುವರಿಸಿದ್ದರು. ಸೋನಿಯಾ ಗಾಂಧಿ ಅವರ ಅನಾರೋಗ್ಯ ಕಾರಣದಿಂದಾಗಿ ಪ್ರಿಯಾಂಕಾಗೆ ಮಹತ್ವದ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಪಕ್ಷಾಧ್ಯಕ್ಷರಾಗಿ ರಾಹುಲ್ ಗಾಂಧಿ ವಿಫಲರಾಗಿರುವುದರಿಂದಲೇ ಪ್ರಿಯಾಂಕಾ ಬಂದಿದ್ದಾರೆಂದು ಬಿಜೆಪಿ ವ್ಯಂಗ್ಯವಾಡುತ್ತಿದ್ದರೂ, ರಾಹುಲ್ ಆಕರ್ಷಣೆಯನ್ನು ಮೀರುವ ಪ್ರಭಾವಳಿ ಪ್ರಿಯಾಂಕಾಗಿದೆ ಎಂಬುದು ಬಿಜೆಪಿ ನಾಯಕರಿಗೆ ಗೊತ್ತಿಲ್ಲದ್ದೇನಲ್ಲ. ಮೋದಿ ಸರ್ಕಾರದ ವಿರುದ್ಧದ ಪ್ರಚಾರದ ಕಾಂಗ್ರೆಸ್ ತಂತ್ರಗಾರಿಕೆಯ ಮುಂದುವರಿದ ಭಾಗವೇ ಪ್ರಿಯಾಂಕಾ ರಾಜಕೀಯ ಪ್ರವೇಶ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್ ಲೆಕ್ಕಾಚಾರವೇನು?

‘ಲೋಕಸಭೆ ಚುನಾವಣೆಯಲ್ಲಿ ಮೋದಿ-ಷಾ ವಿರುದ್ಧದ ಸಮರದಲ್ಲಿ ರಾಹುಲ್ ಏಕಾಂಗಿಯಾಗಬಾರದು. ಪ್ರಿಯಾಂಕಾ ಚರಿಷ್ಮಾ ಕೂಡ ಸೇರಿದಲ್ಲಿ ಕಾಂಗ್ರೆಸ್ ಪ್ರಭಾವವಿರುವ ಕ್ಷೇತ್ರಗಳಲ್ಲಿ ಗೆಲುವು ಸುಲಭವಾಗುತ್ತದೆ’ ಎಂಬುದು ಈ ನಿರ್ಧಾರದ ಹಿಂದಿನ ಲೆಕ್ಕಾಚಾರ. ಸೋನಿಯಾ ಪ್ರತಿನಿಧಿಸಿರುವ ರಾಯ್ಬರೇಲಿ ಕ್ಷೇತ್ರದಿಂದ ಈ ಬಾರಿ ಪ್ರಿಯಾಂಕ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

  • ಪ್ರಿಯಾಂಕಾ ಹೊಸ ಮುಖವಾದ್ದರಿಂದ ಜನರನ್ನು ಆಕರ್ಷಿಸಬಹುದೆಂಬ ಲೆಕ್ಕಾಚಾರ
  • ಇಂದಿರಾ ಗಾಂಧಿ ಹೋಲಿಕೆಯೂ ಮತದಾರರ ಒಲವು ಹೆಚ್ಚಿಸಬಹುದೆಂಬ ತಂತ್ರಗಾರಿಕೆ

ಯುಪಿ ಗೆಲ್ಲುವ ತಂತ್ರ

ದಿಲ್ಲಿ ಗದ್ದುಗೆ ಏರಲು ಉತ್ತರ ಪ್ರದೇಶ ಹೆಬ್ಬಾಗಿಲು. ಈ ಕಾರಣಕ್ಕಾಗಿಯೇ ಮಾಯಾವತಿ-ಅಖಿಲೇಶ್ ಮೈತ್ರಿ ಮಂತ್ರ ಜಪಿಸಿದ್ದಾರೆ. ಎಸ್​ಪಿ, ಬಿಎಸ್​ಪಿಯಂತೆ ಕಾಂಗ್ರೆಸ್ ಕೂಡ ರಾಜ್ಯದಿಂದ ಬಿಜೆಪಿಯನ್ನು ಹೊರಗಟ್ಟುವ ತಂತ್ರ ಹೂಡುತ್ತಿದೆ. ಹೆಚ್ಚೆಚ್ಚು ಸೀಟುಗಳನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ಮತಗಳನ್ನು ವಿಭಜಿಸುವ ಮೂಲಕ ಬಿಜೆಪಿಗೆ ಸೋಲುಣಿಸಲೆಂದೇ ಪ್ರಿಯಾಂಕಾ ಗಾಂಧಿಗೆ ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ ವಹಿಸಲಾಗಿದೆ. ಪೂರ್ವ ಉತ್ತರ ಪ್ರದೇಶದಲ್ಲಿ ವಾರಾಣಸಿ, ಅಮೇಠಿ, ರಾಯ್ಬರೇಲಿ ಸೇರಿ 40 ಕ್ಷೇತ್ರಗಳಿದ್ದು, 2014ರಲ್ಲಿ ಬಹುಪಾಲನ್ನು ಬಿಜೆಪಿಯವರೇ ಗೆದ್ದುಕೊಂಡಿದ್ದರು ಮತ್ತು ಕೇಂದ್ರದಲ್ಲಿ ಆರು ಸಚಿವರು ಈ ಭಾಗಕ್ಕೆ ಸೇರಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಪ್ರಮಾಣ ಶೇ. 7.5ಕ್ಕೆ ಕುಸಿದಿದ್ದಲ್ಲದೆ 2017ರ ವಿಧಾನಸಭೆ ಚುನಾವಣೆಯಲ್ಲಿ ಶೇ.6.2ಕ್ಕೆ ತಗ್ಗಿತ್ತು. 2009ರಲ್ಲಿ 23 ಸೀಟು ಗೆದ್ದಿದ್ದ ಕಾಂಗ್ರೆಸ್, ಮೋದಿ ಪ್ರಭಾವಳಿಯಿಂದಾಗಿ 2 ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲೆಡೆ ಅಸ್ತಿತ್ವ ಕಳೆದುಕೊಂಡಿತ್ತು. ಪಶ್ಚಿಮ ಉತ್ತರ ಪ್ರದೇಶದಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತಗಳು ಎಸ್​ಪಿ-ಬಿಎಸ್​ಪಿ ಪಾಲಾಗುವ ಲೆಕ್ಕಾಚಾರಗಳಿರುವುದರಿಂದ ಬಿಜೆಪಿಯನ್ನು ಬೆಂಬಲಿಸಿದ ಪೂರ್ವ ಉತ್ತರ ಪ್ರದೇಶದ ಮೇಲ್ವರ್ಗದ ಮತಗಳನ್ನು ಸೆಳೆಯಲೆಂದೇ ಪ್ರಿಯಾಂಕಾ ಅಖಾಡಕ್ಕೆ ಧುಮುಕಿದ್ದಾರೆನ್ನಲಾಗಿದೆ. ಕಳೆದ ವರ್ಷದ ಗೋರಖ್​ಪುರ ಲೋಕಸಭೆ ಕ್ಷೇತ್ರದ (ಯೋಗಿ ಆದಿತ್ಯನಾಥ್ ಪ್ರತಿನಿಧಿಸಿದ್ದ ಕ್ಷೇತ್ರ) ಉಪ ಚುನಾವಣೆಯಲ್ಲಿ ಎಸ್​ಪಿ-ಬಿಎಸ್​ಪಿ ಮೈತ್ರಿ ಅಭ್ಯರ್ಥಿ ಗೆದ್ದಿದ್ದರೂ, ಮೇಲ್ವರ್ಗದ ಮತಗಳನ್ನು ಕಾಂಗ್ರೆಸ್ ತನ್ನೆಡೆಗೆ ಸೆಳೆದುಕೊಂಡಿದ್ದರಿಂದ ಇದು ಸಾಧ್ಯವಾಗಿತ್ತು. ಹೀಗಾಗಿ ಪ್ರಿಯಾಂಕಾಗಮನ ಉಪ್ರದಲ್ಲಿ ಬಿಜೆಪಿ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಬಹುದು.

ಮೋದಿ-ಯೋಗಿಗೆ ಸವಾಲು

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪ್ರಧಾನಿ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸ್ಟಾರ್ ಪ್ರಚಾರಕರು. ರಾಹುಲ್ ವರ್ಸಸ್ ಮೋದಿ ಫೈಟ್ ಎಂಬ ಚರ್ಚೆ ಚಾಲ್ತಿಯಲ್ಲಿದ್ದರೂ, ಮುಂದಿನ ದಿನಗಳಲ್ಲಿ ಮೋದಿ ವರ್ಸಸ್ ಪ್ರಿಯಾಂಕಾ ಎಂಬ ಚರ್ಚೆಗಳೂ ಗರಿಗೆದರಬಹುದು. ಒಂದುವೇಳೆ ಬೇರೆ ರಾಜ್ಯಗಳಲ್ಲೂ ಪ್ರಿಯಾಂಕಾ ಪ್ರಚಾರ ಕೈಗೊಂಡಲ್ಲಿ ಬಿಜೆಪಿ ಮತ್ತಷ್ಟು ಗ್ರೌಂಡ್​ವರ್ಕ್ ಮಾಡಬೇಕಾಗಬಹುದು.

ಮಹಾಮೈತ್ರಿಯ ಕಣ್ಣು

ಕಾಂಗ್ರೆಸ್ ಹೊರತುಪಡಿಸಿದ ಮಹಾಮೈತ್ರಿಕೂಟ ರಚಿಸಿ ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಪ್ರಾದೇಶಿಕ ಪಕ್ಷಗಳಲ್ಲೂ ಪ್ರಿಯಾಂಕಾ ಬಗ್ಗೆ ಕುತೂಹಲವಿದೆ. ಜನರು ರಾಹುಲ್​ಗಿಂತ ಹೆಚ್ಚಾಗಿ ಪ್ರಿಯಾಂಕಾರನ್ನು ಸ್ವೀಕರಿಸಬಲ್ಲರು ಎಂಬ ಅಭಿಪ್ರಾಯ ಪ್ರಾದೇಶಿಕ ನಾಯಕರಲ್ಲಿದೆ. ಆದರೆ, ಪ್ರಿಯಾಂಕಾ ಬಂದರೆಂದ ಮಾತ್ರಕ್ಕೆ ಕಾಂಗ್ರೆಸ್ ಜತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳಲು ಪ್ರಾದೇಶಿಕ ಪಕ್ಷಗಳು ಸಮ್ಮತಿಸುತ್ತವೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಪ್ರಿಯಾಂಕಾ ಗಾಂಧಿಯನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದೇನೆ. ಇದರರ್ಥ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಪ್ರತಿಷ್ಠಾಪಿಸುವ ಉದ್ದೇಶ ಸ್ಪಷ್ಟವಾಗಿದೆ. ದೆಹಲಿಯಲ್ಲಿ ಕಾಂಗ್ರೆಸ್​ನ ಮಹಾಮೈತ್ರಿ ಸರ್ಕಾರ ಹಾಗೂ ಉತ್ತರಪ್ರದೇಶದಲ್ಲಿ ಕಾಂಗ್ರೆಸ್​ನ ಏಕಪಕ್ಷ ಸರ್ಕಾರ ರಚನೆಯಾಗಲಿದೆ. ಬಿಜೆಪಿಗೆ ಭಯ ಆರಂಭವಾಗಿದೆ.

| ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ

ಓರ್ವ ವ್ಯಕ್ತಿ ಅಥವಾ ಒಂದು ಕುಟುಂಬ ಏನು ಬಯಸುತ್ತದೆ ಎಂಬ ಆಧಾರದ ಮೇಲೆ ಬಿಜೆಪಿಯಲ್ಲಿ ಯಾವುದೇ ನಿರ್ಧಾರವಾಗುವುದಿಲ್ಲ. ಸಾಕಷ್ಟು ನಿದರ್ಶನಗಳಲ್ಲಿ ಕುಟುಂಬವೇ ಪಕ್ಷವಾಗಿದೆ. ಆದರೆ ಬಿಜೆಪಿಯಲ್ಲಿ ಪಕ್ಷವೇ ಕುಟುಂಬವಿದ್ದಂತೆ.

| ನರೇಂದ್ರ ಮೋದಿ, ಪ್ರಧಾನಿ

ಪ್ರಿಯಾಂಕಾ ಬಲವೇನು?

ಕಳೆದ 15 ವರ್ಷಗಳಿಂದ ಅಮೇಠಿ ಮತ್ತು ರಾಯ್ಬರೇಲಿ ಕ್ಷೇತ್ರಗಳ ಮತದಾರರು ಪ್ರಿಯಾಂಕಾ ವರ್ಚಸ್ಸಿಗೆ ಜೈ ಎಂದಿದ್ದಾರೆ. ಅಳೆದು ತೂಗಿ ಮಾತನಾಡುವ ಅವರು, ರಾಹುಲ್ ಗಾಂಧಿಯಂತೆ ಹಾಸ್ಯದ ವಸ್ತುವಾಗಿಲ್ಲ. ಇಂದಿರಾ ಗಾಂಧಿ ಮಾದರಿಯ ರಾಜಕೀಯ ಗಾಂಭೀರ್ಯ ಮತ್ತು ನಗುಮುಖದಲ್ಲಿ ಮತಗಳನ್ನು ಸೆಳೆಯುವ ಶಕ್ತಿಯಿದೆ ಎಂದು ರಾಜಕೀಯ ಪಂಡಿತರು ಹೇಳುತ್ತಾರೆ.

ಪ್ರಿಯಾಂಕಾ ನೇಮಕದ ಮೂಲಕ ರಾಹುಲ್ ಗಾಂಧಿ ವಿಫಲರಾಗಿದ್ದಾರೆ ಎಂದು ಘೋಷಿಸಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ವಂಶಪಾರಂಪರ್ಯ ರಕ್ಷಿಸಿಕೊಳ್ಳುವುದೇ ಕಾಂಗ್ರೆಸ್​ನ ಉದ್ದೇಶ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

| ಸಂಬಿತ್ ಪಾತ್ರಾ, ಬಿಜೆಪಿ ರಾಷ್ಟ್ರೀಯ ವಕ್ತಾರ

ಪತಿ ವಿರುದ್ಧದ ಆರೋಪದ್ದೇ ಚಿಂತೆ

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿರಬಹುದು. ಆದರೆ, ಪತಿ ರಾಬರ್ಟ್ ವಾದ್ರಾ ವಿರುದ್ಧ ಭೂ ಒತ್ತುವರಿ, ಹಣಕಾಸು ಅವ್ಯವಹಾರಗಳ ಆರೋಪಗಳಿರುವುದರಿಂದ ಪ್ರಿಯಾಂಕಾ ಗಾಂಧಿ ಪತಿಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಪ್ರಧಾನಿ ಮೋದಿಯನ್ನು ಪ್ರಶ್ನಿಸುವ ಮುನ್ನ ‘ನಿಮ್ಮ ಮನೆಯವರ ವ್ಯವಹಾರಗಳ ಬಗ್ಗೆ ಏನಂತೀರಿ’ ಎಂಬ ಬಿಜೆಪಿಯ ಪ್ರಶ್ನೆಗೆ ಏನು ಉತ್ತರ ನೀಡಿಯಾರು ಎಂಬುದನ್ನು ಕಾದು ನೋಡಬೇಕು. ವಾದ್ರಾ ಆಪ್ತರ ವಿರುದ್ಧ ಜಾರಿ ನಿರ್ದೇಶನಾಲಯ ದಾಳಿ ಹೆಚ್ಚಿಸಿರುವುದು ಕೂಡ ಪ್ರಿಯಾಂಕಾ ರಾಜಕೀಯ ಎಂಟ್ರಿಗೆ ಪ್ರೇರೇಪಿಸಿರಬಹುದು ಎನ್ನಲಾಗಿದೆ.

  • ಕುಟುಂಬ ರಾಜಕಾರಣದ ಆಪಾದನೆ ಮತ್ತೆ ಚರ್ಚೆಯ ಮುನ್ನೆಲೆಗೆ ಬರಬಹುದು
  • ಲೋಕಸಭೆ ಚುನಾವಣೆಯಲ್ಲಿ ಸೋತರೆ ರಾಜಕೀಯ ಭವಿಷ್ಯ ಮಂಕಾಗಬಹುದು
  • ಹಿರಿಯ ಕಾಂಗ್ರೆಸ್ಸಿಗರನ್ನು ವಿಶ್ವಾಸಕ್ಕೆ, ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸವಾಲು