ಪ್ರಿಯಾಂಕ ಚೋಪ್ರಾ ಭಾರತದಲ್ಲೇ ಮದುವೆಯಾದ ಹಿಂದಿನ ರಹಸ್ಯವೇನು ಗೊತ್ತಾ?

ಮುಂಬೈ: ತಾರಾ ಜೋಡಿಗಳಾದ ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ ಹಾಗೂ ರಣವೀರ್​ ಸಿಂಗ್​-ದೀಪಿಕಾ ಪಡುಕೋಣೆ ಅವರು ತಮ್ಮ ವಿವಾಹ ಕಾರ್ಯವನ್ನು ವಿದೇಶದಲ್ಲಿ ನೆರವೇರಿಸಿಕೊಂಡರು. ಇವರ ಮಧ್ಯೆ ಸ್ವಲ್ಪ ವಿಭಿನ್ನ ಎನಿಸಿಕೊಂಡ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಾಸ್​ ಭಾರತದಲ್ಲೇ ಮದುವೆಯಾದರು. ಇದಕ್ಕೆ ಕಾರಣ ಏನು ಎಂಬುದನ್ನು ಸ್ವತಃ ಪಿಗ್ಗಿಯೇ ವಿವರಿಸಿದ್ದಾರೆ.

ಪಿಗ್ಗಿ ಮತ್ತು ನಿಕ್​ ಕಳೆದ ಡಿಸೆಂಬರ್​ 1-2 ರಂದು ಜೋಧ್​ಪುರದ ಉಮೈದ್​ ಭವನ್​ ಅರಮನೆಯಲ್ಲಿ ಭಾರತೀಯ ಸಂಪ್ರದಾಯದಂತೆ ಅದ್ಧೂರಿಯಾಗಿ ಮದುವೆಯಾದರು. ಆದರೆ, ಪಿಗ್ಗಿಗೆ ಯಾವುದಾದರೂ ಐಲ್ಯಾಂಡ್​ನಲ್ಲಿ ವಿವಾಹವಾಗಲು ಇಷ್ಟವಿತ್ತಂತೆ, ಅದಕ್ಕೆ ಒಪ್ಪದ ನಿಕ್​​ ಭಾರತದಲ್ಲೇ ಸಪ್ತಪದಿ ತುಳಿಯೋಣ ಎಂದು ಹೇಳಿದರಂತೆ. ಈ ವಿಚಾರವನ್ನು ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡಿದ್ದಾರೆ.

ನನಗೆ ಯಾವಾಗಲೂ ಎಲ್ಲದರಿಂದಲೂ ದೂರವಿರುವ ಯಾವುದಾದರೂ ಖಾಸಗಿ ಐಲ್ಯಾಂಡ್​ನಲ್ಲಿ ಮದುವೆ ಆಗಬೇಕೆಂದು ಅಂದುಕೊಳ್ಳುತ್ತಿದೆ. ಅದಕ್ಕಾಗಿ ಸೈಚೆಲ್ಲೇಸ್​, ಮಾಲ್ಡೀವ್ಸ್​ ಹಾಗೂ ಮಾರಿಷಸ್ ದ್ವೀಪದ ಬಗ್ಗೆ ಚಿಂತನೆ ಮಾಡಿದ್ದೆ. ಆದರೆ, ನಿಕ್​ ನಾವೇಕೆ ಮದುವೆಯನ್ನು ಭಾರತದಲ್ಲೇ ಆಗಬಾರದು? ಅವಳ ಮನೆಯಿಂದಲೇ ನನ್ನ ವಧುವನ್ನೇಕೆ ತೆಗೆದುಕೊಳ್ಳಬಾರದು ಎಂದು ಕೇಳಿದರು. ಹೀಗಾಗಿ ನಾವು ಭಾರತದಲ್ಲೇ ಮದುವೆಯಾದೆವು ಎಂದು ಪಿಗ್ಗಿ ಹೇಳಿಕೊಂಡಿದ್ದಾರೆ.

ಪ್ರಿಯಾಂಕ ಚೋಪ್ರಾ ಹೆಸರಿನ ಮುಂದೆ ಜೋನಾಸ್​ ಎಂಬ ಹೆಸರು ಸೇರಿರುವ ಬಗ್ಗೆ ಮಾತನಾಡಿದ ಪಿಗ್ಗಿ ಯಾವಾಗಲು ನನ್ನ ಹೆಸರಿನ ಮುಂದೆ ಅವನ ಹೆಸರನ್ನು ಸೇರಿಸಿಕೊಳ್ಳಲು ಬಯಸುತ್ತೇನೆ. ಇದರಿಂದ ನನ್ನ ಕುಟುಂಬ ಎಂಬ ಭಾವ ಮೂಡುತ್ತದೆ ಎಂದರು. (ಏಜೆನ್ಸೀಸ್​)