ಟ್ರೋಲ್ ಕೆಂಗಣ್ಣಿಗೆ ಗುರಿಯಾದ ಪ್ರಿಯಾ

ನಮ್ಮ ಟೈಮ್ ಚೆನ್ನಾಗಿದ್ದರೆ ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ. ಅದೇ ಟೈಮ್ ಕೆಟ್ಟಾಗ ಏನೇ ಮಾಡಿದರೂ ವಿವಾದ ಭುಗಿಲೇಳುತ್ತದೆ. ಈ ಮಾತಿಗೆ ಜ್ವಲಂತ ಉದಾಹರಣೆ ನಟಿ ಪ್ರಿಯಾ ಪ್ರಕಾಶ್ ವಾರಿಯರ್! ಒಂದು ವರ್ಷದ ಹಿಂದೆ ಅವರು ನಟಿಸಿದ್ದ ‘ಒರು ಅಡಾರ್ ಲವ್’ ಚಿತ್ರದ ‘ಮಾಣಿಕ್ಯ ಮಲರಾಯ ಪೂವಿ..’ ಗೀತೆ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿ ಒಂದು ದಿನ ಕಳೆಯುವುದರೊಳಗೆ 50 ಸಾವಿರ ಲೈಕ್ಸ್ ಗಿಟ್ಟಿಸಿತ್ತು. ಆ ಹಾಡಿನಲ್ಲಿ ಪ್ರಿಯಾ ಕಣ್ಣು ಹೊಡೆದ ಪರಿಗೆ ರಾತ್ರೋರಾತ್ರಿ ಅವರು ನ್ಯಾಷನಲ್ ಕ್ರಷ್ ಎಂಬ ಬಿರುದು ಗಿಟ್ಟಿಸಿಕೊಂಡರು. ಇಂಟರ್​ನೆಟ್​ನಲ್ಲಿ ಜನರು ಅವರನ್ನು ಹಾಡಿ ಹೊಗಳಿದರು. ಆಗ ಅವರ ಟೈಮ್ ಚೆನ್ನಾಗಿತ್ತು. ಆದರೆ ಈಗ ಅವರಿಗೆ ಅದೃಷ್ಟ ಕೈಕೊಟ್ಟಂತಿದೆ. ಅವರ ಹೊಸ ಸಿನಿಮಾ ‘ಶ್ರೀದೇವಿ ಬಂಗ್ಲೋ’ ಟ್ರೇಲರ್ ಮೊನ್ನೆತಾನೇ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಟ್ರೋಲ್​ಗೆ ಕಾರಣವಾಗಿದ್ದಾರೆ ಪ್ರಿಯಾ. ಬಾತ್​ಟಬ್​ನಲ್ಲಿ ಬಿದ್ದು ಕೊನೆಯುಸಿರೆಳೆದ ನಟಿ ಶ್ರೀದೇವಿ ಬದುಕಿಗೂ ‘ಶ್ರೀದೇವಿ ಬಂಗ್ಲೋ’ ಚಿತ್ರಕ್ಕೂ ಸಾಮ್ಯತೆ ಇದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಅದೇ ಕಾರಣಕ್ಕೆ ಶ್ರೀದೇವಿ ಅಭಿಮಾನಿಗಳು ಈ ಚಿತ್ರತಂಡದ ಮೇಲೆ ಮುಗಿಬಿದ್ದಿದ್ದಾರೆ. ಕಳೆದ ವರ್ಷ ಪ್ರಿಯಾಗೆ ಜೈ ಜೈ ಎನ್ನುತ್ತಿದ್ದವರೆಲ್ಲ ಈಗ ಛೀ ಛೀ ಎನ್ನುತ್ತಿದ್ದಾರೆ! ಈವರೆಗೂ ‘ಶ್ರೀದೇವಿ ಬಂಗ್ಲೋ’ ಟ್ರೇಲರ್​ಗೆ 18 ಸಾವಿರ ಮಂದಿ ಡಿಸ್​ಲೈಕ್ ಬಟನ್ ಒತ್ತಿದ್ದಾರೆ. ಕಮೆಂಟ್ ಬಾಕ್ಸ್​ನಲ್ಲಂತೂ ತೆಗಳಿಕೆಯ ಸುರಿಮಳೆ.

‘ಈ ಚಿತ್ರದಿಂದ ಮೊದಲು ಪ್ರಿಯಾರನ್ನು ತೆಗೆದುಹಾಕಿ. ಶ್ರೀದೇವಿ ಪಾತ್ರಕ್ಕೆ ಇಂಥವರನ್ನು ಆಯ್ಕೆ ಮಾಡಿದರೆ ಅದು ಶ್ರೀದೇವಿಗೆ ಅವಮಾನ ಮಾಡಿದಂತೆ’ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಚ್ಚರಿ ಎಂದರೆ, ಕೇರಳದಲ್ಲಿರುವ ಸಿನಿಪ್ರಿಯರೇ ಈ ಟ್ರೇಲರ್​ಗೆ ಸಾಧ್ಯವಾದಷ್ಟು ಡಿಸ್​ಲೈಕ್ ಬರುವಂತೆ ಆನ್​ಲೈನ್ ಅಭಿಯಾನ ಶುರುಮಾಡಿದ್ದಾರೆ! ಇಷ್ಟೆಲ್ಲ ಆದರೂ ಇದು ಶ್ರೀದೇವಿ ಬದುಕಿಗೆ ಸಂಬಂಧಿಸಿದ ಸಿನಿಮಾವೇ ಅಥವಾ ಇಲ್ಲವೇ ಎಂಬುದನ್ನು ಚಿತ್ರತಂಡ ಒಪ್ಪಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀದೇವಿ ಪತಿ, ನಿರ್ವಪಕ ಬೋನಿ ಕಪೂರ್ ಚಿತ್ರತಂಡಕ್ಕೆ ನೋಟಿಸ್ ನೀಡಿದ್ದಾರೆ. -ಏಜೆನ್ಸೀಸ್