ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ: ಪ್ರಿಯಾ ದತ್​, ರಾಜ್​ ಬಬ್ಬರ್​ಗೆ ಅವಕಾಶ

ನವದೆಹಲಿ: ಉತ್ತರ ಪ್ರದೇಶ ಮತ್ತು ಗುಜರಾತ್​ನ ವಿವಿಧ ಕ್ಷೇತ್ರಗಳು ಒಳಗೊಂಡಂತೆ ಕೆಲದಿನಗಳ ಹಿಂದೆ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್​ ಇದೀಗ ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ಉಳಿದ ಲೋಕಸಭಾ ಕ್ಷೇತ್ರಗಳ 27 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉತ್ತರ ಪ್ರದೇಶ ಕಾಂಗ್ರೆಸ್​ ರಾಜ್ಯಾಧ್ಯಕ್ಷ ರಾಜ್​ ಬಬ್ಬರ್​ ಹಾಗೂ ಬಾಲಿವುಡ್​ ನಟ ಸಂಜಯ್​ ದತ್​ ಸಹೋದರಿ ಪ್ರಿಯಾ ದತ್​ ಅವರ ಹೆಸರು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ರಾಜ್​ ಬಬ್ಬರ್ ಉತ್ತರ ಪ್ರದೇಶದ ಮೊರಾದಾಬಾದ್​ನಿಂದ ಸ್ಪರ್ಧಿಸಲಿದ್ದಾರೆ. ಕೇಂದ್ರದ ಮಾಜಿ ಸಚಿವ ಶ್ರೀಪ್ರಕಾಶ್​ ಜೈಸ್ವಾಲ್​ ಅವರು ಕಾನ್ಪುರದಿಂದ, ಮುಂಬೈ ಉತ್ತರ-ಕೇಂದ್ರ ಕ್ಷೇತ್ರದಿಂದ ಪ್ರಿಯಾ ದತ್​ ಕಣಕ್ಕಿಳಿಯಲಿದ್ದಾರೆ. ಮುಂಬೈ ದಕ್ಷಿಣದಿಂದ ಮಿಲಿಂದ್​ ದಿಯೋರಾ ಸ್ಪರ್ಧಿಸಲಿದ್ದಾರೆ.

ಬಿಜೆಪಿಯಿಂದ ಕಾಂಗ್ರೆಸ್​ಗೆ ಪಕ್ಷಾಂತರಗೊಂಡಿರುವ ಸಾವಿತ್ರಿ ಬಾಯಿ ಪುಲೆ ಉತ್ತರ ಪ್ರದೇಶದ ಭರಿಯಾಚ್​ ಕ್ಷೇತ್ರದಿಂದ ಹಾಗೂ ಬಿಎಸ್​ಪಿಯಿಂದ ಕಾಂಗ್ರೆಸ್​ಗೆ ಬಂದಿರುವ ಕೈಸರ್​ ಜಹಾನ್​ ಸೀತಾಪುರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಉತ್ತರ ಪ್ರದೇಶ ಪೂರ್ವ ವಿಭಾಗದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಆಪ್ತ ವಲಯದಲ್ಲಿರುವ ಲಲಿತೇಶ್​ ಪಾಟಿ ತ್ರಿಪಾಠಿಗೆ ಮಿರ್ಜಾಪುರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್​ ನೀಡಲಾಗಿದೆ. (ಏಜೆನ್ಸೀಸ್​)