ಶ್ರೀದೇವಿ ಸಾವಿಗೆ ಪ್ರಿಯಾ ಕಾರಣವಂತೆ!

ಬೆಂಗಳೂರು: ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ನಿಧನರಾಗಿ ವರ್ಷದ ಮೇಲಾಯಿತು. ಇದೀಗ ಅವರ ಸಾವಿಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ! ಅವರ ಸಾವಿಗೆ ದಕ್ಷಿಣ ಭಾರತದ ನಟಿಯೊಬ್ಬರು ಕಾರಣವಂತೆ! ಬರೀ ಶ್ರೀದೇವಿ ಮಾತ್ರವಲ್ಲ, ಇತ್ತೀಚೆಗೆ ತೀರಿಕೊಂಡ ತಮಿಳು ನಟ ಜೆ.ಕೆ. ರಿತೇಶ್ ಸಾವಿಗೂ ಇದೇ ನಟಿ ಕಾರಣ ಎಂದು ಸುದ್ದಿ ಹಬ್ಬಿದೆ!!

ಅಷ್ಟಕ್ಕೂ ಆ ನಟಿ ಯಾರು? ‘ರಾಜಕುಮಾರ’, ‘ಆರೆಂಜ್’ ಚಿತ್ರಗಳಲ್ಲಿ ನಟಿಸಿದ್ದ ಪ್ರಿಯಾ ಆನಂದ್! ಅರೇ ಇದು ನಿಜವೇ? ಇಂಥದ್ದೊಂದು ಪ್ರಶ್ನೆ ಮೂಡಲು ಕಾರಣವಾಗಿದ್ದು ವ್ಯಕ್ತಿಯೊಬ್ಬ ಮಾಡಿದ ಟ್ವೀಟ್! ‘ಶ್ರೀದೇವಿ ನಟಿಸಿದ್ದ ‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರದಲ್ಲಿ ಪ್ರಿಯಾ ಆನಂದ್ ನಟಿಸಿದ್ದರು. ಈಗಾಗಲೇ ಶ್ರೀದೇವಿ ನಿಧನರಾಗಿದ್ದಾರೆ. ‘ಎಲ್​ಕೆಜಿ’ ಚಿತ್ರದಲ್ಲಿ ಜೆ.ಕೆ. ರಿತೇಶ್ ಜತೆಗೂ ಪ್ರಿಯಾ ತೆರೆಹಂಚಿಕೊಂಡಿದ್ದರು. ವಿಪರ್ಯಾಸ ಏನೆಂದರೆ, ರಿತೇಶ್ ಸಹ ಇತ್ತೀಚೆಗಷ್ಟೇ ವಿಧಿವಶರಾಗಿದ್ದಾರೆ. ಹಾಗಾಗಿ, ಪ್ರಿಯಾ ಜತೆ ಯಾರೆಲ್ಲ ನಟಿಸುತ್ತಾರೋ ಅವರೆಲ್ಲ ಸಾವಿಗೀಡಾಗುತ್ತಾರೆ. ಸಹ ಕಲಾವಿದರಿಗೆ ಪ್ರಿಯಾ ಆನಂದ್ ಒಂದು ರೀತಿ ಅಪಶಕುನ ಇದ್ದಂತೆ’ ಎಂದು ಟ್ವೀಟ್ ಮಾಡಿದ್ದಾನೆ.

ಈ ಬಗ್ಗೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ಪ್ರಿಯಾ, ‘ಅಷ್ಟಕ್ಕೂ ನಾನು ನಿಮ್ಮಂಥವರ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಇದೊಂದು ಸೂಕ್ಷ್ಮವಾದ ವಿಚಾರವಾದ್ದರಿಂದ ನಾನು ಮಾತನಾಡುತ್ತಿದ್ದೇನೆ. ಜಾಲತಾಣದಲ್ಲಿ ಈ ರೀತಿ ಸದ್ದು ಮಾಡಿ ಗಮನ ಸೆಳೆಯವುದು ಸುಲಭದ ಕೆಲಸ. ನಿಮ್ಮ ಕಮೆಂಟಿಗೆ ಉತ್ತರಿಸಿ ನಿಮ್ಮನ್ನು ಕೆಳ ಮಟ್ಟಕ್ಕೆ ತರುವವಳು ನಾನಲ್ಲ’ ಎಂದು ಆತನ ಕಾಲೆಳೆದಿದ್ದಾರೆ. ಅನಾಮಿಕ ವ್ಯಕ್ತಿಯ ಕಮೆಂಟಿಗೆ ಎಲ್ಲೆಡೆಯಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಆತ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾನೆ.