ಖಾಸಗಿ ಜಾಗಕ್ಕೆ ಬೀದಿದೀಪ ಫೋಕಸ್ !

« ಕಣ್ಣೆದುರೇ ವಿದ್ಯುತ್ ದುರ್ಬಳಕೆ * ದೂರು ಕೊಟ್ಟರೂ ಪಾಲಿಕೆಯಿಂದ ಕ್ರಮವಿಲ್ಲ »

ಭರತ್‌ರಾಜ್ ಸೊರಕೆ ಮಂಗಳೂರು
ವಿದ್ಯುತ್ ನಷ್ಟ ತಪ್ಪಿಸಿ, ಕಡಿಮೆ ವಿದ್ಯುತ್ ಬಳಸಿ ಎಂದು ಸರ್ಕಾರ ಮನವಿ ಮಾಡುತ್ತಿದೆ. ಆದರೆ, ಮಂಗಳೂರು ಮಹಾನಗರ ಪಾಲಿಕೆ ಮಾತ್ರ ವಿದ್ಯುತ್ ತಂತಿ ಮತ್ತು ಬೀದಿದೀಪಗಳ ಅಸಮರ್ಪಕ ನಿರ್ವಹಣೆ ಮೂಲಕ ವಿದ್ಯುತ್ ಪೋಲಾಗುವುದಕ್ಕೆ ಬೆಂಬಲ ನೀಡುತ್ತಿದೆ.
ನಗರದೆಲ್ಲೆಡೆ ಬೀದಿದೀಪಗಳನ್ನು ಖಾಸಗಿ ವ್ಯಕ್ತಿಗಳು ರಾಜಾರೋಷವಾಗಿ ಬಳಸುತ್ತಿದ್ದಾರೆ. ಸಾರ್ವಜನಿಕ ರಸ್ತೆ ಕತ್ತಲು, ಖಾಸಗಿ ಜಾಗ ಮಾತ್ರ ನಿತ್ಯ ಬೆಳಗುತ್ತಿದೆ. ಇಲ್ಲಿ ಮೆಸ್ಕಾಂ ಇಲಾಖೆಯ ಯಾವುದೇ ಪಾತ್ರ ಇಲ್ಲದಿದ್ದರೂ ಪಾಲಿಕೆ ಇಂಜಿನಿಯರ್‌ಗಳು ಮತ್ತು ಸ್ಥಳೀಯ ಕಾರ್ಪೊರೇಟರ್‌ಗಳು ಸಾರ್ವಜನಿಕ ಬೀದಿ ದೀಪವನ್ನು ಯಾರ‌್ಯಾರೋ ದುರ್ಬಳಕೆ ಮಾಡುವುದಕ್ಕೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ದೂರು.
ಬಂದರು, ಪಾಂಡೇಶ್ವರ, ಉರ್ವ, ಬಂಟ್ಸ್‌ಹಾಸ್ಟೆಲ್, ಪಂಪ್‌ವೆಲ್ ಆಸುಪಾಸಿನಲ್ಲಿ ಅತೀ ಹೆಚ್ಚು ಕಡೆ ಬೀದಿದೀಪಗಳನ್ನು ಖಾಸಗಿ ಜಾಗಕ್ಕೆ ತಿರುಗಿಸಲಾಗಿದೆ. ಖಾಸಗಿ ಕಟ್ಟಡಗಳ ಅಂಗಳದ ಅಂಚಿನಲ್ಲಿ ಅಥವಾ ಮನೆಗಳ ಕಾಂಪೌಂಡ್ ಸಮೀಪ ಇರುವ ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಬೀದಿದೀಪಗಳೇ ದುರಪಯೋಗವಾಗುತ್ತಿವೆ. ಒಂದೊಂದು ಕಂಬಗಳಲ್ಲಿ ಮೂರ‌್ನಾಲ್ಕು ದೀಪಗಳನ್ನು ಅಳವಡಿಸಲಾಗಿದ್ದು, ಒಂದು ರಸ್ತೆಗೆ ಮುಖಮಾಡಿದ್ದರೆ, ಉಳಿದವು ವೈಯುಕ್ತಿಕ ಪಾರ್ಕಿಂಗ್ ಜಾಗಕ್ಕೆ, ಅಂಗಳಕ್ಕೆ ತಿರುಗಿಸಲಾಗಿದೆ.

ಖಾಸಗಿ ಬಳಕೆ ಹೇಗೆ?:
ಕಟ್ಟಡ ಅಥವಾ ಕಾಂಪೌಂಡ್ ಅಂಚಿನಲ್ಲಿರುವ ಸಾರ್ವಜನಿಕ ವಿದ್ಯುತ್ ಕಂಬಗಳಲ್ಲಿರುವ ಬೀದಿದೀಪಗಳನ್ನು ತಿರುಗಿಸಿ ತಮ್ಮ ತಮ್ಮ ಜಾಗದತ್ತ ಫೋಕಸ್ ಮಾಡುತ್ತಾರೆ. ಇದರಿಂದ ಸಾರ್ವಜನಿಕರು ರಾತ್ರಿ ದೀಪದಿಂದ ವಂಚಿತರಾಗುತ್ತಾರೆ. ಕವಲು ರಸ್ತೆಗಳ ಸಮೀಪ ಕಂಬದಲ್ಲಿ ಸಾಮಾನ್ಯವಾಗಿ ಎರಡೆರಡು ದೀಪಗಳನ್ನು ಅಳವಡಿಸಿರುತ್ತಾರೆ. ಈ ಪೈಕಿ ಒಂದನ್ನು ಸ್ವಂತ ಜಾಗಕ್ಕೆ ತಿರುಗಿಸಿರುವ ದೀಪಗಳು ನಗರದ ಅಲ್ಲಲ್ಲಿ ಕಂಡುಬರುತ್ತಿವೆ.

ಅಸಮರ್ಪಕ ನಿರ್ವಹಣೆ
ವಿದ್ಯುತ್ ದೀಪ ಮತ್ತು ಸ್ವಿಚ್‌ಗಳ ನಿರ್ವಹಣೆ ಅಸಮರ್ಪಕವಾಗಿದೆ ಎಂಬ ದೂರು ಇಂದು ನಿನ್ನೆಯದಲ್ಲ. ಬಂದರು ಮತ್ತು ರಥಬೀದಿಯ ವಿದ್ಯುತ್ ಕಂಬಗಳಲ್ಲಿ ಗೊಂಚಲು ಗೊಂಚಲು ವಿದ್ಯುತ್ ತಂತಿಗಳು ನೇತಾಡುತ್ತಿವೆ. ಹಳೇ ದೀಪಗಳು ಕಪ್ಪಾಗಿ ಗಲೀಜಾಗಿವೆ. ಅಸಮರ್ಪಕ ನಿರ್ವಹಣೆಯಿಂದ ನಗರದ ಸೌಂದರ್ಯಕ್ಕೂ ಕೇಡಾಗಿದೆ.

ಹ್ಯಾಲೋಜಿನ್, ಮರ್ಕ್ಯೂರಿ
ವಿದ್ಯುತ್ ಉಳಿತಾಯ ಮಾಡಲು ಎಲ್‌ಇಡಿ ದೀಪಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಲಾಗುವುದು ಎಂದು ಪ್ರತಿ ಬಾರಿ ಪಾಲಿಕೆ ಮೇಯರ್ ಹೇಳುತ್ತಾರೆ ಹೊರತು ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಮುಖ್ಯರಸ್ತೆಗಳಲ್ಲಿ ಮಾತ್ರ ಎಲ್‌ಇಡಿ ದೀಪಗಳಿವೆ. ಉಳಿದಂತೆ ಒಳ ರಸ್ತೆಗಳಲ್ಲಿ ಅಧಿಕ ವಿದ್ಯುತ್ ಬಳಸುವ ದೀಪಗಳಾದ ಹ್ಯಾಲೋಜಿನ್, ಮರ್ಕ್ಯೂರಿ, ಟ್ಯೂಬ್ ಲೈಟ್‌ಗಳಿವೆ.

 

ಮಂಗಳೂರು ಮಹಾನಗರ ಪಾಲಿಕೆ ಸಾರ್ವಜನಿಕರನ್ನು ಕತ್ತಲಲ್ಲಿರಿಸಿ, ಖಾಸಗಿ ವ್ಯಕ್ತಿಗಳ ಜಾಗಕ್ಕೆ ಬೀದಿದೀಪಗಳನ್ನು ತಿರುಗಿಸಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಇಂಜಿನಿಯರ್‌ಗಳಿಗೆ ತಿಳಿಸಿದ್ದೇನೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ.
ಜೋಸೆಫ್ ಡಿಸೋಜ ಸಾಮಾಜಿಕ ಕಾರ್ಯಕರ್ತ