ಖಾಸಗಿ ಸುದ್ದಿವಾಹಿನಿ ಪತ್ರಕರ್ತ ಸೆರೆ

ಬೆಂಗಳೂರು: ಖಾಸಗಿ ವಿಡಿಯೋ ಇರುವುದಾಗಿ ವೈದ್ಯರನ್ನು ಬೆದರಿಸಿ 50 ಲಕ್ಷ ರೂ. ಹಣ ಪಡೆಯುವಾಗ ಖಾಸಗಿ ಸುದ್ದಿ ವಾಹಿನಿಯ ಮೆಟ್ರೋ ವಿಭಾಗದ ಮುಖ್ಯಸ್ಥನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

ಹೇಮಂತ್ ಕಶ್ಯಪ್ (38) ಬಂಧಿತ. ಮತ್ತೊಬ್ಬ ಆರೋಪಿ ಮಂಜುನಾಥ್ ಸೇರಿ ಇನ್ನಿತರರ ಬಂಧನಕ್ಕೆ ಬಲೆ ಬೀಸಲಾಗಿದೆ. ಇವರ ವಿರುದ್ಧ ಸದಾಶಿವನಗರದ ವೈದ್ಯ ಡಾ. ರಮಣ್​ರಾವ್ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಖಾಸಗಿ ವಿಡಿಯೋ ಇರುವುದಾಗಿ ವೈದ್ಯರಿಗೆ ಮಂಜುನಾಥ್ ಬೆದರಿಕೆ ಒಡ್ಡಿದ್ದ. ಹೆದರಿದ ವೈದ್ಯರು, 2 ಲಕ್ಷ ರೂ. ಕೊಟ್ಟು ಕಳುಹಿಸಿದ್ದರು.

ಕೆಲ ದಿನಗಳ ಬಳಿಕ ಮತ್ತೆ ಹಣ ಕೇಳಿದಾಗ 2 ಲಕ್ಷ ರೂ. ಮತ್ತು 1 ಲಕ್ಷ ರೂ. ಕೊಟ್ಟಿದ್ದರು. ಹಲವರ ಹೆಸರಿನಲ್ಲಿ ಹಣಕ್ಕೆ ಬೆದರಿಕೆ ಬಂದಾಗ ವೈದ್ಯರು, ತಮ್ಮಆಪ್ತ ಪೊಲೀಸರ ಬಳಿ ಸಲಹೆ ಪಡೆದಿದ್ದರು. ಜತೆಗೆ ಈ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರಿಗೆ ಮಾಹಿತಿ ನೀಡಿದ್ದರು.

ಡಿಸಿಎಂ ಅವರು ಸಿಎಂ ಜತೆ ಚರ್ಚೆ ನಡೆಸಿ ಪೊಲೀಸರಿಗೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದ್ದರು. ಅದರಂತೆ ವೈದ್ಯರಿಂದ ದೂರು ಪಡೆದ ಸದಾಶಿವನಗರ ಪೊಲೀಸರು, ಆರೋಪಿಗಳ ಬಂಧನಕ್ಕೆ ಕಾರ್ಯತಂತ್ರ ರೂಪಿಸಿದ್ದರು. ಮಂಗಳವಾರ ರಾತ್ರಿ 7.30ಕ್ಕೆ ಹಣ ಕೊಡುವುದಾಗಿ ಹೇಳಿ ವೈದ್ಯರು ಸ್ಯಾಂಕಿ ಕೆರೆಯ ಬಳಿಗೆ ಕರೆದಿದ್ದರು. ಹಣ ಪಡೆಯಲು ಸ್ಯಾಂಕಿ ಕೆರೆ ಬಳಿಗೆ ಹೋದಾಗ ರೆಡ್​ಹ್ಯಾಂಡ್ ಆಗಿ ಹೇಮಂತ್​ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಬಂಧಿಸಿದ್ದಾರೆ.

ವಿಚಾರಣೆ ವೇಳೆ ಬೇರೆ ಸುದ್ದಿವಾಹಿನಿ ಹೆಸರು ಹೇಳಿಕೊಂಡು ಬೆದರಿಕೆ ಒಡ್ಡಿರುವುದು ಬೆಳಕಿಗೆ ಬಂದಿದೆ. ವೈದ್ಯರ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 384, 385, 506 ಅಡಿ ಎಫ್​ಐಆರ್ ದಾಖಲಿಸಿ ಕ್ರಮ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಗಣ್ಯರ ಕುಟುಂಬಕ್ಕೆ ಆಪ್ತ ವೈದ್ಯರು ಸದಾಶಿವನಗರದ ಪದ್ಮಶ್ರೀ ಪುರಸ್ಕೃತ ಡಾ.ರಮಣ್ ರಾವ್ ವರನಟ ಡಾ. ರಾಜ್​ಕುಮಾರ್ ಅವರ ಖಾಸಗಿ ವೈದ್ಯರಾಗಿದ್ದರು. ಪ್ರಸ್ತುತ ಸಹ ಡಾ.ರಾಜ್ ಕುಟುಂಬಸ್ಥರಿಗೆ ಆತ್ಮೀಯವಾಗಿದ್ದು, ಡಿಸಿಎಂ ಡಾ.ಜಿ. ಪರಮೇಶ್ವರ್ ಸೇರಿ ಅನೇಕ ರಾಜಕಾರಣಿಗಳು ಹಾಗೂ ಗಣ್ಯರ ಕುಟುಂಬಗಳಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ.