ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ

ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ದೇಶಾದ್ಯಾಂತ ಕರೆ ನೀಡಿರುವ ಬಂದ್‌ಗೆ ಖಾಸಗಿ ಆಸ್ಪತ್ರೆಗಳು ಬೆಂಬಲ ಸೂಚಿಸಿವೆ. ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್‌ಗಳಲ್ಲಿ ಶನಿವಾರ ಹೊರ ರೋಗಿ ವಿಭಾಗದಲ್ಲಿ ಸೇವೆ ಸ್ಥಗಿತಗೊಂಡಿದ್ದರಿಂದ ರೋಗಿಗಳು ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ.
ಮುಂಜಾನೆಯಿಂದಲೇ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ, ಕ್ಲಿನಿಕ್‌ಗಳ ವೈದ್ಯರು ಮುಷ್ಕರದಲ್ಲಿ ಭಾಗಿಯಾಗಿದ್ದರು. ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ಸೇವೆ, ಒಳರೋಗಿ ವಿಭಾಗದ ಸೇವೆ ಹೊರತುಪಡಿಸಿ ಉಳಿದ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ಮಣಿಪಾಲ ಕೆಎಂಸಿ ಆಸ್ಪತ್ರೆ ಎಂದಿನಂತೆ ಕಾರ‌್ಯ ನಿರ್ವಹಿಸಿತು. ಮುಷ್ಕರದ ಬಗ್ಗೆ ತಡವಾಗಿ ಮಾಹಿತಿ ಬಂದ ಹಿನ್ನೆಲೆಯಲ್ಲಿ ಹೊರ ಜಿಲ್ಲೆಗಳಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮಸ್ಯೆಯಾಗಬಾರದು ಎಂದು ಆಸ್ಪತ್ರೆ ಸಿಬ್ಬಂದಿ ಮುಷ್ಕರದಲ್ಲಿ ಭಾಗವಹಿಸಿಲ್ಲ.

ಸರ್ಕಾರಿ ಆಸ್ಪತ್ರೆ ಬ್ಯುಸಿ: ಸಾಮಾನ್ಯವಾಗಿ ಶನಿವಾರ ಮತ್ತು ಭಾನುವಾರ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಇರುತ್ತದೆ. ಶನಿವಾರ ಖಾಸಗಿ ವೈದ್ಯರು ಮುಷ್ಕರ ನಡೆಸಿದ್ದರಿಂದ ರೋಗಿಗಳಿಗೆ ಹೆಚ್ಚಿನ ಸಮಸ್ಯೆಯಾಗಿಲ್ಲ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶೀತ, ಜ್ವರದಿಂದ ಬಳಲುತ್ತಿದ್ದ ರೋಗಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹೊರರೋಗಿಗಳ ವಿಭಾಗದಲ್ಲಿ ಎಂದಿಗಿಂತ ಹೆಚ್ಚಿನ ರೋಗಿಗಳು ಕಂಡು ಬಂದರು.
ಆಗಮಿಸಿದ ಎಲ್ಲ ರೋಗಿಗಳಿಗೆ ಚಿಕಿತ್ಸೆ ಒದಗಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ. ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆ ಮೊದಲೇ ಸಿದ್ಧವಾಗಿತ್ತು. ರಜೆಯಲ್ಲಿರುವ ವೈದ್ಯರು ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿತ್ತು. ಯಾವುದೇ ಸಮಸ್ಯೆಯಾಗಿಲ್ಲ ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ ರಾವ್, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರೋಹಿಣಿ, ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ವೈದ್ಯರಿಂದ ಪ್ರತಿಭಟನೆ: ಮಂಗಳೂರಿನಲ್ಲಿ ಕರ್ತವ್ಯ ಬಹಿಷ್ಕರಿಸಿದ ವೈದ್ಯರು, ಐಎಂಎ ಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಐಎಂಎ ಮಂಗಳೂರು ಘಟಕ ಅಧ್ಯಕ್ಷ ಡಾ.ಕೆ.ಆರ್.ಕಾಮತ್, ಉದ್ದೇಶಿತ ಮಸೂದೆ ಪ್ರಜಾಪ್ರಭುತ್ವ ವಿರೋಧಿ, ಒಕ್ಕೂಟ ವ್ಯವಸ್ಥೆಯ ವಿರೋಧಿ, ಬಡವರ ವಿರೋಧಿ ಮತ್ತು ಶ್ರೀಮಂತರ ಪರ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮಾರಕ, ಮೀಸಲಾತಿ ವಿರೋಧಿ, ವೈದ್ಯ ವೃತ್ತಿ ವಿರೋಧಿ ಎಂದು ಟೀಕಿಸಿದರು. ಇದು ಅಧಿಕಾರದ ಕೇಂದ್ರೀಕರಣಕ್ಕೆ ಪೂರಕವಾಗಿದ್ದು, ಮನುಷ್ಯ ವಿರೋಧಿ. ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.
ಆಯುರ್ವೇದ ವೈದ್ಯರಿಗೆ ಅಲ್ಪಾವಧಿ ತರಬೇತಿ ನೀಡಿ ಅಲೋಪತಿಕ್ ಔಷಧ ವಿತರಿಸಲು ಅವಕಾಶ ಮಾಡಿಕೊಡುವುದು ಒಂದೆಡೆ ಆಯುರ್ವೇದ ಪದ್ಧತಿ ಮುಗಿಸುವ ಸಂಚಾದರೆ, ಇನ್ನೊಂದೆಡೆ ಅರೆಜ್ಞಾನದಿಂದ ಚಿಕಿತ್ಸೆ ನೀಡುವುದು ಜನಸಾಮಾನ್ಯರ ಪಾಲಿಗೆ ಮಾರಕವಾಗಲಿದೆ ಎಂದರು.
ಐಎಂಎ ಮಂಗಳೂರು ಘಟಕ ಕಾರ್ಯದರ್ಶಿ ಡಾ.ಉಲ್ಲಾಸ್ ಶೆಟ್ಟಿ, ಚುನಾಯಿತ ಅಧ್ಯಕ್ಷ ಡಾ.ಸಚ್ಚಿದಾನಂದ ರೈ, ಡಾ.ಅಣ್ಣಯ್ಯ ಕುಲಾಲ್ ನೇತೃತ್ವ ವಹಿಸಿದ್ದರು.

ವೈದ್ಯರಿಂದ ಜಿಲ್ಲಾಧಿಕಾರಿಗೆ ಮನವಿ:  ಉಡುಪಿಯಲ್ಲಿ ಭಾರತೀಯ ವೈದ್ಯಕೀಯ ಸಂಘ ಕರಾವಳಿ ಶಾಖೆ ವತಿಯಿಂದ ಬ್ರಹ್ಮಗಿರಿ ಐಎಂಎ ಭವನದಲ್ಲಿ ಶನಿವಾರ ಬೆಳಗ್ಗೆ 10ಕ್ಕೆ ಸಭೆ ನಡೆಯಿತು. 50 ವೈದ್ಯರು ಪಾಲ್ಗೊಂಡಿದ್ದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ಗೆ ಮನವಿ ಸಲ್ಲಿಸಲಾಯಿತು.
ವಿಧೇಯಕದಲ್ಲಿ ನ್ಯಾಷನಲ್ ಮೆಡಿಕಲ್ ಕೌನ್ಸಿಲ್‌ಗೆ ಐದು ಮಂದಿ ವೈದ್ಯರನ್ನು ಚುನಾವಣೆ ಪ್ರಕ್ರಿಯೆ ಮೂಲಕ ನೇಮಕ, ಇತರೆ 20 ಮಂದಿಯನ್ನು ಸರ್ಕಾರ ನಾಮ ನಿರ್ದೇಶನ ಮಾಡುವುದು ಎಂಬ ವಿಚಾರ ತಿದ್ದುಪಡಿ ಮಾಡಬೇಕು. ಸರ್ಕಾರ ನಾಮನಿರ್ದೇಶನ ಮಾಡುವ 20 ಮಂದಿ ರಾಜಕಾರಣಿ, ಐಎಎಸ್ ಅಧಿಕಾರಿಗಳು ಇರಬಹುದು. ಕೌನ್ಸಿಲ್‌ನಲ್ಲಿ ಎಲ್ಲರೂ ವೈದ್ಯರೇ ಇರಬೇಕು ಮತ್ತು ಎಂಬಿಬಿಎಸ್, ಎಂಡಿ ಸೀಟು ಹಂಚಿಕೆ ಕುರಿತಾಗಿ ಆಡಳಿತ ಮಂಡಳಿಗೆ ಸಂಪೂರ್ಣ ಅಧಿಕಾರ ನೀಡಬಾರದು, ಸರ್ಕಾರದ ಹಸ್ತಕ್ಷೇಪ ಇರಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದ್ದು, ಸರ್ಕಾರ ಇದನ್ನು ಸಮ್ಮತಿಸುವ ವಿಶ್ವಾಸ ಇದೆ, ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಉಡುಪಿಯಲ್ಲಿ ಎಲ್ಲ ಆಸ್ಪತ್ರೆಗಳು ಹೊರರೋಗಿ ಸೇವೆ ಬಂದ್ ಮಾಡಿದ್ದೇವೆ. ತುರ್ತು ಚಿಕಿತ್ಸೆ ನೀಡಿದ್ದೇವೆ ಎಂದು ಐಎಂಎ ಸದಸ್ಯ, ಆದರ್ಶ ಆಸ್ಪತ್ರೆ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್ ತಿಳಿಸಿದರು.