ರೋಗಿ ಕರೆದೊಯ್ಯಲು ಬ್ರಿಟನ್‌ನಿಂದ ಮಂಗಳೂರಿಗೆ  ಬಂದಿಳಿದ ಖಾಸಗಿ ಏರ್ ಆಂಬುಲೆನ್ಸ್ !

ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದೇಶಿ ಮಹಿಳೆಯನ್ನು ಕರೆದೊಯ್ಯಲು ಎರಡು ದಿನ ಹಿಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ಏರ್ ಆಂಬುಲೆನ್ಸ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಭಾನುವಾರ ಮಧ್ಯರಾತ್ರಿ ಬ್ರಿಟನ್‌ನ ಇನ್ನೊಂದು ಖಾಸಗಿ ಏರ್ ಆಂಬುಲೆನ್ಸ್ ಮಂಗಳೂರಿಗೆ ಆಗಮಿಸಲಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ.ರಾವ್ ಈ ಮಾಹಿತಿಯನ್ನು ದೃಢಪಡಿಸಿದ್ದು, ಕೊನೇ ಕ್ಷಣದಲ್ಲಿ ಯಾವುದೇ ಬದಲಾವಣೆಗಳು ನಡೆಯದಿದ್ದರೆ ನಗರದ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬ್ರಿಟನ್ ಮಹಿಳೆ ಭಾನುವಾರ ರಾತ್ರಿಯೇ ಏರ್ ಆಂಬುಲೆನ್ಸ್‌ನಲ್ಲಿ ತನ್ನ ಪತಿ ಜತೆಗೆ ಸ್ವದೇಶಕ್ಕೆ ಮರಳಲಿದ್ದಾರೆ.

ಮಧ್ಯರಾತ್ರಿ 12.30ಕ್ಕೆ ಬ್ರಿಟನ್ ಏರ್ ಆಂಬುಲೆನ್ಸ್ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದು, 1.30ಕ್ಕೆ ನಿರ್ಗಮಿಸಲಿದೆ. ಈ ಏರ್ ಆಂಬುಲೆನ್ಸ್ ನಲ್ಲಿ ನಗರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆ್ಯನ್ ಲೆವಿಶ್ ಸ್ಮಿತ್ (80) ಹಾಗೂ ಅವರ ಜತೆಗಿರುವ ಪತಿ ಲೆವಿಶ್ ಸ್ಮಿತ್ ಪ್ರಯಾಣಿಸಲಿದ್ದಾರೆ.

ಎರಡು ವಾರ ಹಿಂದೆ ಬಂದಿದ್ದರು: ಆ್ಯನ್ ಲೆವಿಶ್ ಸ್ಮಿತ್ ಹಡಗಿನಲ್ಲಿ ಪ್ರವಾಸ ನಡೆಸುವ ಸಂದರ್ಭ ಬಿದ್ದು ಗಾಯಗೊಂಡು ಎರಡು ವಾರ ಹಿಂದೆ ಮಂಗಳೂರು ನವಮಂಗಳೂರು ಬಂದರಿನಲ್ಲಿ ಇಳಿದು ನಗರದ ಎ.ಜೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭ ಉಸಿರಾಟ ಸಮಸ್ಯೆ ಕೂಡ ಅವರನ್ನು ಬಾಧಿಸುತ್ತಿತ್ತು ಎಂದು ವೈದ್ಯಕೀಯ ಮೂಲ ತಿಳಿಸಿದೆ. ಇದೀಗ ಮಹಿಳೆ ಸಾಕಷ್ಟು ಗುಣಮುಖರಾಗಿದ್ದು, ವಯೋಸಹಜ ಕೆಲವು ಸಮಸ್ಯೆಗಳನ್ನು ಮಾತ್ರ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಪ್ರವಾಸ ಮೊಟಕುಗೊಳಿಸಿ ಸ್ವದೇಶಕ್ಕೆ ಮರಳಲು ಬಯಸಿದ್ದಾರೆ.

ಕೈಕೊಟ್ಟ ಏರ್ ಆಂಬುಲೆನ್ಸ್: ಜ.24ರಂದು ಸಾಯಂಕಾಲ ಸ್ವದೇಶಕ್ಕೆ ತೆರಳಲಿದ್ದ ವಿದೇಶಿ ದಂಪತಿ ಕುಳಿತಿದ್ದ ಏರ್ ಆಂಬುಲೆನ್ಸ್ ತಾಂತ್ರಿಕ ದೋಷದಿಂದ ಟೇಕಾಫ್ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿದೇಶಿ ದಂಪತಿಯ ಪ್ರಯಾಣ ಮತ್ತೆ ಮುಂದೂಡಲ್ಪಟ್ಟಿತ್ತು. ವಿದೇಶಿ ಏರ್ ಆಂಬುಲೆನ್ಸ್ ತಾಂತ್ರಿಕ ಕಾರಣಗಳಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಕಿಯಾದ ಪ್ರಥಮ ಘಟನೆ ಇದಾಗಿದೆ ಎಂದು ನಿಲ್ದಾಣ ಮೂಲ ತಿಳಿಸಿದೆ. ವಿದೇಶಿ ದಂಪತಿ ಏರ್ ಆಂಬುಲೆನ್ಸ್‌ನಲ್ಲಿ ನಡೆಸಲಿರುವ ಪ್ರಯಾಣಕ್ಕೆ ಸಂಬಂಧಿಸಿದ ಪೂರಕ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಮೂಲ ಸ್ಪಷ್ಟಪಡಿಸಿದೆ.