ಬಾಲಿವುಡ್ ನಟ, ಚಿರಯುವಕ ಅನಿಲ್ ಕಪೂರ್ ಪ್ರೀತಿಯ ಬಲೆಗೆ ಸಿಲುಕಿದ್ದಾರೆ..!
‘ಇದೇನಿದು.. ವಯಸ್ಸು 63, ಈಗ್ಯಾಕೆ ಇವರಿಗೆ ಪ್ರೀತಿ-ಪ್ರೇಮ? ಅಷ್ಟಕ್ಕೂ ಇವರು ಯಾರ ಪ್ರೀತಿ ಬಲೆಯಲ್ಲಿ ಬಿದ್ದಿದ್ದಾರೆ’ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡದೇ ಇರದು. ಆದರೆ ಅನಿಲ್ಕಪೂರ್ಗೆ ಲವ್ ಆಗಿದ್ದು ಯಾವುದೇ ನಟಿ ಮೇಲಲ್ಲ, ಬದಲಾಗಿ ‘ಮಲಂಗ್’ ಚಿತ್ರದ ಮೇಲೆ. ಹೌದು, ‘ಚಿತ್ರದಲ್ಲಿ ಆದಿತ್ಯರಾಯ್ ಕಪೂರ್-ದಿಶಾ ಪಟಾನಿ ಕೆಮೆಸ್ಟ್ರಿ ನೋಡಿ ಮತ್ತೆ ನನಗೆ ಪ್ರೀತಿ ಬಲೆಯಲ್ಲಿ ಸಿಲುಕಬೇಕು ಅನಿಸುತ್ತಿದೆ’ ಎಂದಿದ್ದಾರೆ ಅನಿಲ್ ಕಪೂರ್.
ಫೆ.7ರಂದು ಬಿಡುಗಡೆ ಆಗಲಿರುವ ‘ಮಲಂಗ್’ ಚಿತ್ರ ನೋಡಿರುವ ಅನಿಲ್ ಕಪೂರ್, ತಮ್ಮ ಯೌವನದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ‘ಚಿತ್ರದ ಪ್ರತಿ ಸೀನ್ ಕೂಡ ಖುಷಿ ಕೊಟ್ಟಿದೆ. ನಾನೂ ಪ್ರೀತಿಯಲ್ಲಿ ಬೀಳಬೇಕು, ನಟ-ನಟಿಯ ಪಾತ್ರದಂತೆ ಪ್ರೇಯಸಿಯೊಂದಿಗೆ ಮೋಜು-ಮಸ್ತಿ ಮಾಡಬೇಕು, ಬೈಕ್ನಲ್ಲಿ ಸುತ್ತಾಡಬೇಕೆಂದು ಮನಸ್ಸಾಗಿದೆ’ ಎಂದಿದ್ದಾರೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ನೆಗೆಟಿವ್ ರೋಲ್ನಲ್ಲಿ ಅನಿಲ್ ಕಪೂರ್ ಕಾಣಿಸಿಕೊಂಡಿದ್ದಾರೆ. ಮೋಹಿತ್ ಸೂರಿ ನಿರ್ದೇಶನದ, ರೊಮ್ಯಾಂಟಿಕ್-ಆಕ್ಷನ್-ಡ್ರಾಮಾ ಕಥಾನಕ ಹೊಂದಿರುವ ‘ಮಲಂಗ್’, ಯುವಮನಸ್ಸುಗಳಿಗೆ ಹೇಳಿ ಮಾಡಿಸಿದ ಚಿತ್ರದಂತಿದೆ. ಸೋಮವಾರ ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಮೂಡಿದೆ. -ಏಜೆನ್ಸೀಸ್