10 ವರ್ಷಗಳ ಹಿಂದೆ ಪೃಥ್ವಿ ಷಾ ಬಗ್ಗೆ ಸಚಿನ್ ನುಡಿದಿದ್ದ ಭವಿಷ್ಯ ನಿಜವಾಯಿತು​!

ನವದೆಹಲಿ: ವೆಸ್ಟ್​ಇಂಡೀಸ್​ ವಿರುದ್ಧದ 2 ಟೆಸ್ಟ್​ ಪಂದ್ಯದ ಸರಣಿಗೆ ಟೀಂ ಇಂಡಿಯಾದ 18 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪೃಥ್ವಿ ಷಾ ಅವರ ಬಗ್ಗೆ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರು ನುಡಿದಿದ್ದ ಭವಿಷ್ಯ ನಿಜವಾಗಿದೆ.

ಶಿಖರ್ ಧವನ್​ಗೆ ಸರಣಿಯಿಂದ ಕೊಕ್ ನೀಡಿರುವ ಕಾರಣ ಅವರ ಸ್ಥಾನಕ್ಕೆ 18 ವರ್ಷದ ಬ್ಯಾಟ್ಸ್ ಮನ್ ಪೃಥ್ವಿ ಷಾ ಅವರನ್ನು ಆಯ್ಕೆ ಮಾಡಲಾಗಿದೆ. ಷಾ ಒಂದು ದಿನ ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಾರೆ ಎಂದು 10 ವರ್ಷಗಳ ಹಿಂದೆಯೇ ಸಚಿನ್​ ಅವರು ಭವಿಷ್ಯ ನುಡಿದಿದ್ದರಂತೆ.

ಸಚಿನ್​ ತಮ್ಮ 100ಎಂಬಿ ಆ್ಯಪ್​ ಮೂಲಕ ಅಭಿಮಾನಿಗಳ ಜತೆ ಸಂವಹನ ನಡೆಸುವಾಗ ಷಾ ಬಗ್ಗೆ ಮಾತನಾಡಿ, 10 ವರ್ಷಗಳ ಹಿಂದೆ ನನ್ನ ಸ್ನೇಹಿತನೊಬ್ಬ ಯುವ ಪೃಥ್ವಿ ಕಡೆ ನಿಮ್ಮ ಗಮನ ಹರಿಸಿ, ಆತನ ಆಟವನ್ನು ವಿಶ್ಲೇಷಿಸಿ ಎಂದು ಹೇಳಿದ್ದ. ಅಲ್ಲದೆ, ಆತ ಯಾವುದರ ಮೇಲೆ ಜಾಸ್ತಿ ಗಮನಹರಿಸಬೇಕು ಎಂಬುದನ್ನು ಕೇಳಿದ್ದರು. ನಾನು ಆತನೊಂದಿಗೆ ಕೆಲ ಸಮಯ ಕಳೆದು ಹೇಗೆ ಆತನ ಆಟವನ್ನು ಸುಧಾರಿಸಿಕೊಳ್ಳಬೇಕು ಎಂಬುದನ್ನು ತಿಳಿಸಿದ್ದೆ. ಅಲ್ಲದೆ, ಒಂದು ದಿನ ಆತ ಭಾರತವನ್ನು ಪ್ರತಿನಿಧಿಸುತ್ತಾನೆ ಎಂದು ಹೇಳಿದ್ದೆ ಎಂದು ತಿಳಿಸಿದರು. ಆಗ ಪೃಥ್ವಿ 8 ವರ್ಷದ ಬಾಲಕನಾಗಿದ್ದ.

ಷಾ ತನ್ನ ಸ್ವಾಭಾವಿಕ ಆಟವನ್ನು ಮುಂದುವರಿಸಬೇಕು. ಆತನ ಆಟದಲ್ಲಿ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ. ಯಾರಾದರೂ ಆಟದಲ್ಲಿ ಬದಲಾವಣೆ ಮಾಡಿಕೋ ಎಂದು ಹೇಳಿದರೆ ಅವರನ್ನು ನನ್ನ ಬಳಿ ಮಾತನಾಡಲು ಕಳುಹಿಸು ಎಂದು ಷಾ ಅವರಿಗೆ ಸಚಿನ್​ ಸಲಹೆ ನೀಡಿದ್ದಾರಂತೆ.

ಷಾ ಸಾಧನೆ
2013ರಲ್ಲಿ ಮುಂಬೈಯ ಎ ಡಿವಿಷನ್ ಪಂದ್ಯದ ಇನಿಂಗ್ಸ್ ಒಂದರಲ್ಲಿ ಪೃಥ್ವಿ ದಾಖಲೆಯ 546 ರನ್ ಸಿಡಿಸುವ ಮೂಲಕ ಗಮನ ಸೆಳೆದಿದ್ದರು. ನಂತರ 19 ವಯೋಮಿತಿಯ ಕಿರಿಯರ ವಿಶ್ವಕಪ್, ರಣಜಿ ಮತ್ತು ಇತ್ತೀಚೆಗೆ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಎ ತಂಡಗಳ ಪರವೂ ಅರ್ಧಶತಕ, ಶತಕ ಬಾರಿಸಿ ಆಯ್ಕೆ ಸಮಿತಿಯ ಮನ ಗೆದ್ದಿದ್ದರು. ಆಡಿರುವ 14 ಪ್ರಥಮ ದರ್ಜೆ ಪಂದ್ಯಗಳಲ್ಲಿ 7 ಶತಕ, 5 ಅರ್ಧಶತಕಗಳ ಸಹಿತ 56.72ರ ಸರಾಸರಿಯಲ್ಲಿ ರನ್ ಬಾರಿಸಿದ್ದಾರೆ. ವರ್ಷಾರಂಭದಲ್ಲಿ ಅವರ ಸಾರಥ್ಯದಲ್ಲೇ ಭಾರತ ತಂಡ ಕಿರಿಯರ ವಿಶ್ವಕಪ್ ಜಯಿಸಿತ್ತು. ಅವರು ಭಾರತ ಪರ ಟೆಸ್ಟ್ ಪದಾರ್ಪಣೆ ಮಾಡುತ್ತಿರುವ 293ನೇ ಆಟಗಾರ ಎನಿಸಿದ್ದಾರೆ.

ಪದಾರ್ಪಣೆ ಪಂದ್ಯದಲ್ಲೇ ಶತಕ
ವೆಸ್ಟ್​ ಇಂಡೀಸ್​ ವಿರುದ್ಧ ಇಂದು ಶುರುವಾಗಿರುವ ಟೆಸ್ಟ್​ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಷಾ ಅವರು 103 ರನ್​ ಗಳಿಸಿ ಅಜೇಯರಾಗಿ ಉಳಿದಿದ್ದು, ಆಟವನ್ನು ಮುಂದುವರಿಸಿದ್ದಾರೆ. ಭಾರತ ಒಂದು ವಿಕೆಟ್​ ನಷ್ಟಕ್ಕೆ 193 ರನ್​ ಗಳಿಸಿ ಆಡುತ್ತಿದೆ. (ಏಜೆನ್ಸೀಸ್​)