ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸಲು ಆದ್ಯತೆ ಸಿಗಲಿ: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್​​

blank

ಬೆಂಗಳೂರು: ಕೃಷಿ ಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತವು ಮುಂಚೂಣಿಯಲ್ಲಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಳ್ಳಲು ಹೆಚ್ಚಿನ ಆದ್ಯತೆ ಸಿಗಬೇಕಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಹೇಳಿದ್ದಾರೆ.

blank

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ ಜಿಕೆವಿಕೆಯಲ್ಲಿ ಗುರುವಾರ ಆಯೋಜಿಸಿದ್ದ 59ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಡ್ರೋನ್ ತಂತ್ರಜ್ಞಾನ, ಉಪಗ್ರಹ ಚಿತ್ರಣ ಮತ್ತು ಸ್ಮಾರ್ಟ್ ನೀರಾವರಿ ವ್ಯವಸ್ಥೆಗಳ ಬಳಕೆಯು ಉತ್ಪಾದನೆ ಹೆಚ್ಚಿಸಲು ಮತ್ತು ನೀರಿನ ಬಳಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಮೇಲೆ ರೈತರ ಅವಲಂಬನೆ ಕಡಿಮೆ ಮಾಡುವ ಅವಶ್ಯಕತೆಯಿದೆ. ಸಾವಯವ ಕೃಷಿ, ನೈಸರ್ಗಿಕ ಕೃಷಿ, ಕಡಿಮೆ ನೀರಿನಿಂದ ಹೆಚ್ಚಿನ ಇಳುವರಿ ಮತ್ತು ಸುರಕ್ಷಿತ ಆಹಾರ ಉತ್ಪಾದಿಸಲು ಪರಿಸರಸ್ನೇಹಿ ಕೃಷಿಯಂತಹ ಪದ್ಧತಿಗಳನ್ನು ಉತ್ತೇಜಿಸಲು ರೈತರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಕಿವಿಮಾತು ಹೇಳಿದರು.

ಲಂಬ ಕೃಷಿ ತಂತ್ರಜ್ಞಾನದತ್ತ ಲಕ್ಷ್ಯ ಅಗತ್ಯ:

ಪ್ರಸ್ತುತ ನಾವು ಜಾಗತಿಕ ತಾಪಮಾನ, ನೀರಿನ ಬಿಕ್ಕಟ್ಟು, ಮಣ್ಣಿನ ಸವಕಳಿ ಮತ್ತು ರೈತರ ಆರ್ಥಿಕ ತೊಂದರೆಗಳಂತಹ ಸವಾಲು ಎದುರಿಸುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಪದವೀಧರರು, ಕೃಷಿ ವಿಜ್ಞಾನಿಗಳು ಮತ್ತು ನೀತಿ – ನಿರೂಪಕರ ಪಾತ್ರ ಹೆಚ್ಚು ಮುಖ್ಯವಾಗಿದೆ. ಕೃಷಿ ಉತ್ಪಾದನೆಯ ಬೇಡಿಕೆ ಪೂರೈಸಲು ಹೊಸ ಆಯ್ಕೆಗಳನ್ನು ಉತ್ತೇಜಿಸುವ ಅವಶ್ಯಕತೆಯಿದೆ. ಕಡಿಮೆ ಭೂಮಿಯಲ್ಲಿ ಹೆಚ್ಚು ಇಳುವರಿ ಬೆಳೆಯುವ ಲಂಬ ಕೃಷಿ ತಂತ್ರಜ್ಞಾನದಲ್ಲಿ ಗುರುತರವಾದ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ಯುವಜನತೆ ಸ್ಟಾರ್ಟ್‌ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಆತ್ಮನಿರ್ಭರ್ ಭಾರತ್ ನಂತಹ ಯೋಜನೆಗಳ ಸದುಪಯೊಗಪಡಿಸಿಕೊಂಡು ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು. ಕೃಷಿ ಆಧಾರಿತ ಸ್ಟಾರ್ಟ್‌ಅಪ್‌ಗಳು ಭಾರತದ ಆರ್ಥಿಕತೆಗೆ ಅಧಿಕ ಬಲ ನೀಡಲಿರುವ ಕಾರಣ ಸಾವಯವ ಉತ್ಪನ್ನಗಳ ಮಾರ್ಕೆಟಿಂಗ್, ಫಾರ್ಮ್-ಟು-ಮಾರ್ಕೆಟ್ ಮಾದರಿ, ಕೋಲ್ಡ್ ಚೈನ್ ಮ್ಯಾನೇಜ್‌ಮೆಂಟ್ ಮತ್ತು ಕೃಷಿ-ಪ್ರವಾಸೋದ್ಯಮದಂತಹ ಕ್ಷೇತ್ರಗಳಲ್ಲಿ ಯುವಕರು ಕೆಲಸ ಮಾಡಬೇಕಾಗಿದೆ ಎಂದು ರಾಜ್ಯಪಾಲರು ವಿವರಿಸಿದರು.

ಹನಿ ನೀರಾವರಿಗೆ1075 ಕೋಟಿ ನೆರವು:

ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಕೃಷಿ ಉತ್ಪಾದನೆ ಹೆಚ್ಚಿಸಲು ಸರ್ಕಾರವು ಕಳೆದೆರಡು ವರ್ಷದಲ್ಲಿ 1,075 ಕೋಟಿ ರೂ. ಹಣವನ್ನು ಹನಿ ನೀರಾವರಿಗೆ ಸಹಾಯಧನವಾಗಿ ನೀಡಿದೆ. ಕಟಾವು ಹಾಗೂ ಸಂಸ್ಕರಣೆ ಯಂತ್ರೋಪಕರಣಗಳಿಗೆ 900 ಕೋಟಿ ರೂ., ಕೋಯ್ಲೋತ್ತರ ತಂತ್ರಜ್ಞಾನ ಬಳಕೆಗೆ ‘ಹಾರ್ವೆಸ್ಟರ್ ಹಬ್’ ಯೋಜನೆ ಅಡಿ 344 ಹಾರ್ವೆಷ್ಟರ್‌ಗಳನ್ನು ವಿತರಿಸಲಾಗಿದೆ. ಕೃಷಿ ಹೊಂದ ನಿರ್ಮಾಣಕ್ಕೆ 235 ಕೋಟಿ ರೂ. ಬಿಡುಗಡೆ ಮಾಡಿದ್ದು, ಈ ಎಲ್ಲ ಕಾರ್ಯಕ್ರಮಗಳ ರೈತರಿಗೆ ಅನುಕೂಲ ಕಲ್ಪಿಸಿದೆ ಎಂದರು.

ಘಟಿಕೋತ್ಸವದಲ್ಲಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್, ಕುಲಸಚಿವ ಡಾ. ನಾರಾಯಣಸ್ವಾಮಿ, ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.

ಬೆಂಗಳೂರು ಕೃಷಿ ವಿವಿಯು ನ್ಯಾಕ್ ಎ ಪ್ಲಸ್ ಶ್ರೇಣಿ ಮಾನ್ಯತೆ ಪಡೆದಿರುವುದು ಶ್ಲಾಘನೀಯ. ಸಂಸ್ಥೆಯು ಶೈಕ್ಷಣಿಕ ಮಾನದಂಡವನ್ನು ಕಾಪಾಡಿಕೊಳ್ಳುವತ್ತ ಅಧ್ಯಾಪಕರ ಬದ್ಧತೆ, ರಾಷ್ಟ್ರ ಮಟ್ಟದ ಪರೀಕ್ಷೆಗಳು ಹಾಗೂ ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ನಿಯೋಜನೆಗಾಗಿ ಪ್ರಯತ್ನಿಸುವ ಪದವೀಧರರ ಯಶಸ್ಸಿನಲ್ಲಿ ಪ್ರತಿಫಲಿಸುತ್ತದೆ.
– ಡಾ. ಯು.ಎಸ್​​.ಅವಸ್ಥಿ, ಇಫ್ಕೋ ವ್ಯವಸ್ಥಾಪಕ ನಿರ್ದೇಶಕ

ಕಡಿಮೆ ಇಡುವಳಿಯ ಜಮೀನು ಹೊಂದಿದ್ದ ನಮ್ಮ ಕುಟುಂಬವು ಅಡಿಕೆ ಬೆಳೆಯುತ್ತಿದ್ದೇವೆ. ನಾನು ಸ್ವಯಂ ಪ್ರೇರಣೆಯಿಂದ ಕೃಷಿ ಕೋರ್ಸ್​​ ಸೇರಿಕೊಂಡೆ. ತಂದೆ-ತಾಯಿ, ಪ್ರಾಧ್ಯಾಪಕರ ಸಹಕಾರದಿಂದ ದೊಡ್ಡ ಸಾಧನೆ ಮಾಡಲು ಸಾಧ್ಯವಾಯಿತು. ಮುಂದೆ ಕೃಷಿ ವಿಜ್ಞಾನಿ ಆಗಬೇಕೆಂಬ ಆಸೆ ಇದ್ದು, ಆ ನಿಟ್ಟಿನಲ್ಲಿ ಗಮನ ಹರಿಸಿದ್ದೇನೆ.
– ಟಿ.ಎಲ್.ದೀಪ್ತಿ, 13 ಚಿನ್ನದ ಪದಕ ಪಡೆದ ಸಾಧಕಿ

ತಂದೆ-ತಾಯಿಗೆ ನಾನು ಕೃಷಿ ಕೋರ್ಸ್ ಸೇರಿ ದೊಡ್ಡ ಸಾಧನೆ ಮಾಡುವ ಆಸೆ ಇತ್ತು. ಅದೀಗ ಸಾಕಾರವಾಗಿದೆ. ಕೃಷಿ ಜಮೀನು ಇಲ್ಲದ ಕೊರಗು ನೀಗಿಸಿಕೊಳ್ಳಲು ರೈತರಿಗೆ ಉಪಯೋಗವಾಗುವ ಕೆಲಸ ಮಾಡುವಳಿದ್ದೇನೆ. ಪಿಎಚ್‌.ಡಿ ಮಾಡಿ ಕೃಷಿ ಕ್ಷೇತ್ರದಲ್ಲೇ ಮುಂದುವರಿಯುವೆ.
– ಆರ್.ಸ್ಪೂರ್ತಿ, 9 ಚಿನ್ನದ ಪದಕ ಪಡೆದ ಸಾಧಕಿ

ನಮ್ಮ ಕುಟುಂಬ ಕೃಷಿ ಹಿನ್ನೆಲೆ ಹೊಂದಿದ್ದು, ಮನೆಯ ಆದಾಯ ವ್ಯವಸಾಯದಿಂದಲೇ ಬರುತ್ತಿದೆ. ಈ ಕಾರಣದಿಂದ ಕೃಷಿ ಕೋರ್ಸ್ ಸೇರಿದ್ದು, ಸತತ ಪರಿಶ್ರಮದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಮುಂದೆ ಉದ್ಯೋಗಕ್ಕೆ ಸೇರುವ ಬದಲು ಸ್ವಂತ ಉದ್ದಿಮೆ ಸ್ಥಾಪಿಸುವ ಹೆಬ್ಬಯಕೆ ಇದೆ. ಅದನ್ನು ನಮ್ಮ ಊರಿನಲ್ಲೇ ಮಾಡುವ ಗುರಿ ಕೂಡ ಹೊಂದಿರುವೆ.
– ಐಶ್ವರ್ಯ ಗಣಪತಿ ಗೌಡ, 7 ಚಿನ್ನದ ಪದಕ ಪಡೆದ ಸಾಧಕಿ

ಗೌರವ ಡಾಕ್ಟರೇಟ್ ಪ್ರದಾನ:

ಘಟಿಕೋತ್ಸವದಲ್ಲಿ ಸರ್ಕಾರದ ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣಿಯನ್ ಹಾಗೂ ಇಫ್ಕೋ ಇ-ಬಜಾರ್ ಸಂಸ್ಥೆಯ ಎಂಡಿ ಯೋಗೇಂದ್ರ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ರಾಜ್ಯಪಾಲರು ಪ್ರದಾನ ಮಾಡಿದರು.

1271 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ:

2023-24ನೇ ಶೈಕ್ಷಣಿಕ ವರ್ಷದಲ್ಲಿ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ ತೇರ್ಗಡೆ ಹೊಂದಿರುವ ಒಟ್ಟು 1,271 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇದೇ ವೇಳೆ ಸಾಧಕ ವಿದ್ಯಾರ್ಥಿಗಳಿಗೆ 150 ಚಿನ್ನದ ಪದಕಗಳನ್ನು ಪ್ರದಾನ ವಿತರಿಸಲಾಯಿತು.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank