ಸವಣೂರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಡಿಜಿಟಲೀಕರಣಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದ್ದು, ದೈನಂದಿನ ವಹಿವಾಟಿನಲ್ಲಿ ಇಂಟರ್‌ನೆಟ್ ಬಳಕೆ ಉತ್ತೇಜಿಸಲು ಕ್ರಮ ವಹಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದ ದಿ. ರಾಜಶೇಖರ ಹಾವಣಗಿ ವೇದಿಕೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸವಣೂರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ.ನ ಅಮೃತ ಮಹೋತ್ಸವ ಸಂಭ್ರಮ-2024 ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಹಕಾರಿ ಚಳವಳಿ ರಾಜ್ಯದಿಂದ ಪ್ರಾರಂಭವಾಗಿ ದೇಶಾದ್ಯಂತ ವ್ಯಾಪಿಸಿ ನೂರಕ್ಕೂ ಹೆಚ್ಚು ವರ್ಷಗಳಾಗಿವೆ. ಸಹಕಾರಿ ಸಂಘಗಳ ಯೋಜನೆಯಿಂದ ಯಶಸ್ವಿಯಾದ ದೇಶಗಳಲ್ಲಿ ಭಾರತವೂ ಒಂದು. ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದ ಮೇಲಿನ ತೆರಿಗೆಯನ್ನು ಶೇ. 12ರಿಂದ 7ಕ್ಕೆ ಇಳಿಸಿದೆ. ಭಾರತ ಮುಂದಿನ ಮೂರು ವರ್ಷಗಳಲ್ಲಿ ಜಗತ್ತಿನ ಮೂರನೇ ಆರ್ಥಿಕ ಶಕ್ತಿಯಾಗಲಿದೆ. ಈ ಹಂತದಲ್ಲಿ ಸಹಕಾರ ರಂಗದ ಪಾಲು ಅತ್ಯಂತ ಮಹತ್ವದ್ದಾಗಲಿದೆ. ನಮ್ಮ ಸರ್ಕಾರದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ಎನ್ನುವ ಧ್ಯೇಯದಿಂದಾಗಿ ದೇಶದ 25 ಕೋಟಿ ಜನರು ಬಹುಆಯಾಮಗಳ ಬಡತನದಿಂದ ಹೊರಬಂದಿದ್ದಾರೆ ಎಂದರು.
ದೇಶದಲ್ಲಿ 8 ಲಕ್ಷ ಸಂಘಗಳು, ಕರ್ನಾಟಕದಲ್ಲಿ 45 ಸಾವಿರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಸಲು 2024-25ರ ಕೇಂದ್ರ ಬಜೆಟ್‌ನಲ್ಲಿ ರಾಷ್ಟ್ರೀಯ ಸಹಕಾರಿ ನೀತಿ ಘೋಷಿಸಲಾಗಿದೆ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಸ್ಥೆಗೆ ಗ್ರಾಹಕರೊಂದಿಗೆ ವಿಶ್ವಾಸದ ವ್ಯವಹಾರ ಬಹುಮುಖ್ಯವಾಗಿದೆ. ಮಹಾಲಿಂಗಪ್ಪ ಫಕೀರಪ್ಪ ಹಾವಣಗಿ ನೇತೃತ್ವದಲ್ಲಿ ಸಾಮಾಜಿಕ ಕಳಕಳಿಯಿಂದ ಅನೇಕ ಹಿರಿಯರ ಸಹಯೋಗದೊಂದಿಗೆ ಪ್ರಾರಂಭವಾದ ಸವಣೂರ ಅರ್ಬನ್ ಕೋ-ಆಪ್ ಬ್ಯಾಂಕ್ ಸಹಕಾರ ರಂಗದಲ್ಲಿ ತನ್ನ 75 ವಸಂತ ಪೂರೈಸಿದ್ದು ಅದರ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ ಎಂದರು.
ಮಹಾರಾಷ್ಟ್ರದಲ್ಲಿ ಸಹಕಾರ ಕ್ಷೇತ್ರ ಅಲ್ಲಿನ ಸರ್ಕಾರವನ್ನು ನಿರ್ಧರಿಸುವಷ್ಟು ಬಲಿಷ್ಠವಾಗಿದೆ. ಆದರೆ, ಕರ್ನಾಟಕದಲ್ಲಿನ ಸರ್ಕಾರ ಸಹಕಾರ ಆಳಲು ಹೊರಟಿದೆ. ಸಹಕಾರ ರಂಗ ಇನ್ನಷ್ಟು ಬಲಿಷ್ಠಗೊಳಿಸಲು ಕೇಂದ್ರ ಸರ್ಕಾರ ಅನೇಕ ಯೋಜನೆಗಳ ಮೂಲಕ ವಿಶೇಷವಾದ ಕಾಳಜಿ ವಹಿಸಿದೆ ಎಂದರು.
ಸವಣೂರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಅಧ್ಯಕ್ಷ ಚನ್ನಪ್ಪ ನಾರಾಯಣಪೂರ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಅಕ್ಕಿಆಲೂರ ಅರ್ಬನ್ ಕೋ-ಆಪ್ ಬ್ಯಾಂಕ್ ಲಿ. ಚೇರ್ಮನ್ ಷಣ್ಮುಖಪ್ಪ ಮುಚ್ಚಂಡಿ, ಸವಣೂರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ವೈಸ್ ಚೇರ್ಮನ್ ಮಲ್ಲಿಕಾರ್ಜುನ ಹಾವಣಗಿ, ನಿರ್ದೇಶಕರಾದ ರಾಜಕುಮಾರ ಮೆಣಸಿನಕಾಯಿ, ಸುಭಾಸ ಗಡೆಪ್ಪನವರ, ಕುಮಾರಸ್ವಾಮಿ ಕಂಬಾಳಿಮಠ, ವಿರೂಪಾಕ್ಷಪ್ಪ ಸಿಂಧೂರ, ಸಿದ್ದೇಶ ಹಾವಣಗಿ, ಷಣ್ಮುಖ ಸುರೇಗಾಂವಕರ, ಮಲ್ಲಾರೆಪ್ಪ ತಳ್ಳಿಹಳ್ಳಿ, ಬಸವರಾಜ ಜಮಾದಾರ, ಲೀಲಾ ಗಾಣಗೇರ, ಮಧುಮತಿ ಮರೋಳ, ಪರಸಪ್ಪ ಹತ್ತಿಮತ್ತೂರ, ಬಸವರಾಜ ಹಾದಿಮನಿ, ಸರ್ವಮಂಗಳಾ ಕೆರಿಯವರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಯೋಗಿ ಹಾಲಗಿ ಇತರರಿದ್ದರು. ಶಿಕ್ಷಕರಾದ ಪ್ರಭು ಅರಗೋಳ, ಶೀಲಾ ರಿತ್ತಿ, ಆನಂದ ಬೆಲ್ಲದ ಮತ್ತು ಬಸನಗೌಡ ದ್ಯಾಮನಗೌಡ್ರ ನಿರ್ವಹಿಸಿದರು.
ಸಂಸ್ಥಾಪಕರ ಕಂಚಿನ ಪುತ್ಥಳಿ ಅನಾವರಣ
ಸಂಸದೀಯ ಮತ್ತು ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಬ್ಯಾಂಕ್ ಸಂಸ್ಥಾಪಕ ಶ್ರೀ ಮಹಾಲಿಂಗಪ್ಪ ಫಕೀರಪ್ಪ ಹಾವಣಗಿ ಅವರ ಕಂಚಿನ ಪುತ್ಥಳಿ ಅನಾವರಣಗೊಳಿಸಿದರು. ಮಾಜಿ ಶಾಸಕ ಸೈಯದ್ ಅಜೀಮ್‌ಪೀರ್ ಖಾದ್ರಿ, ಬ್ಯಾಂಕ್ ಆಡಳಿತ ಮಂಡಳಿ ಪದಾಧಿಕಾರಿಗಳು, ಸರ್ವ ನಿರ್ದೇಶಕರು, ಇತರರು ಇದ್ದರು.