ಸಂಸದ ಡಾ. ಸಿ.ಎನ್. ಮಂಜುನಾಥ್ ಅಭಯ ಸಮಸ್ಯೆ ಮನದಟ್ಟು ಮಾಡಿದ ರೈತ ಮಳ್ಳೂರು ಹರೀಶ್
ಶಿಡ್ಲಘಟ್ಟ : ರಾಜ್ಯದಲ್ಲಿ ರೇಷ್ಮೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಜವಳಿ ಖಾತೆ ಸಚಿವರೊಂದಿಗೆ ಸಮಾಲೋಚನೆ ನಡೆಸುವುದಾಗಿ ಸಂಸದ ಡಾ. ಸಿ.ಎಸ್.ಮಂಜುನಾಥ್ ಭರವಸೆ ನೀಡಿದರು.
ಬೆಂಗಳೂರಿನ ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾ ಕಚೇರಿಯಲ್ಲಿ ರೇಷ್ಮೆ ಉದ್ಯಮದ ಸಮಸ್ಯೆಗಳ ಕುರಿತಾಗಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರ ಸಮಸ್ಯೆ ಆಲಿಸಿ ಮಾತನಾಡಿದರು.
ಇದಕ್ಕೂ ಮೊದಲು ಮಾತನಾಡಿದ ತಾಲೂಕಿನ ಪ್ರಗತಿಪರ ರೇಷ್ಮೆ ಬೆಳೆಗಾರ ಮಳ್ಳೂರು ಹರೀಶ್, ಗುಣಮಟ್ಟದ ರೇಷ್ಮೆಗೂಡು ಉತ್ಪಾದಿಸಲು ಬೆಳೆಗಾರರಿಗೆ ನೆರವು ಒದಗಿಸಬೇಕು. ತೆಗೆ, ಇರುವ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಮಾಡಬೇಕು. ರೇಷ್ಮೆ ಉದ್ಯಮದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ವಿಶೇಷ ಆದ್ಯತೆ ನೀಡಬೇಕೆಂದು ರೇಷ್ಮೆ ಬೆಳೆಗಾರರ ಪರವಾಗಿ ಮನವಿ ಸಲ್ಲಿಸಿದರು.
ರೇಷ್ಮೆ ಉದ್ಯಮದಲ್ಲಿ ಬೆಳಗಾರರು ಹಾಗೂ ನೂಲು ಬಿಚ್ಚಾಣಿಕೆದಾರರು ಎರಡು ಕಣ್ಣುಗಳಿದ್ದಂತೆ. ಇವರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದು ಮುಖ್ಯ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಜವಳಿ ಖಾತೆ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ವಿವರಿಸಿ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಗತ್ಯವಿದ್ದಲ್ಲಿ ರೇಷ್ಮೆ ಬೆಳೆಗಾರರು ಮತ್ತು ನೂಲು ಬಿಚ್ಚಾಣಿಕೆದಾರರು ಒಳಗೊಂಡಂತೆ ನಿಯೋಗವೊಂದನ್ನು ಕೇಂದ್ರ ಸಚಿವರ ಬಳಿ ಕರೆದೊಯ್ಯುವುದಾಗಿ ಸಂಸದರು ಹೇಳಿದರು.
ಬಿಚ್ಚಾಣಿಕೆದಾರರು ತಯಾರಿಸುವ ರೇಷ್ಮೆ ನೂಲು ಖರೀದಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಎಂದು ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾದ ಕಾರ್ಯಕಾರಿ ಸಮಿತಿ ಸದಸ್ಯ ಮೊಹ್ಮದ್ ಅನ್ವರ್ ಸಂಸದರಿಗೆ ಮನವಿ ಮಾಡಿದರು.
ಸಿಲ್ಕ್ ಅಸೋಸಿಯೇಷನ್‌ನ ಸಂಘಟನಾ ಕಾರ್ಯದರ್ಶಿ ರಾಮಚಂದ್ರಗೌಡ, ರೇಷ್ಮೆ ಇಲಾಖೆ ನಿವೃತ್ತ ಅಧಿಕಾರಿ ಮುಸ್ತಫಾ ಆಲಿಖಾನ್, ಸೆಂಟ್ರಲ್ ಸಿಲ್ಕ್ ಬೋರ್ಡ್‌ನ ವಿಜ್ಞಾನಿ ಅಂಗಡಿ ಹಾಜರಿದ್ದರು.