More

  ಬಜೆಟ್‌ನಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಿ

  ಶಿಕಾರಿಪುರ: ಪಟ್ಟಣ ಶರವೇಗದಲ್ಲಿ ಬೆಳೆಯುತ್ತಿದ್ದು, ಇದಕ್ಕೆ ಪೂರಕವಾಗಿ ಮೂಲ ಸೌಕರ್ಯಗಳಿಗೆ ಈ ಬಾರಿ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪುರಸಭೆ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

  ಸೋಮವಾರ ಪುರಸಭೆ ಸಭಾಂಗಣದಲ್ಲಿ ಆಡಳಿತಾಧಿಕಾರಿ ಎ.ಸಿ.ಯತೀಶ್ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
  ಸದಸ್ಯ ಪ್ರಶಾಂತ್ ಜೀನಳ್ಳಿ ಮಾತನಾಡಿ, ಭೀಕರ ಬರಗಾಲದಿಂದ ಅಂತರ್ಜಲದ ಮಟ್ಟ ಕುಸಿದಿದೆ. ಇದರಿಂದ ಕೆರೆ, ಕಟ್ಟೆ, ಬೋರ್‌ವೆಲ್‌ಗಳು ಬರಿದಾಗಿವೆ. ಅಂಜನಾಪುರ ಜಲಾಶಯದ ಮಟ್ಟ ಸಹ ಕುಸಿದಿದ್ದು, ಬೇಸಿಗೆಯಲ್ಲಿ ಜನರಿಗೆ ತೊಂದರೆ ಆಗದಂತೆ ಕ್ರಮವಹಿಸಿ. ಕುಡಿಯುವ ನೀರಿನ ಯೋಜನೆಗಳಿಗೆ ಮೊದಲ ಆದ್ಯತೆ ನೀಡಿ ಎಂದು ಆಗ್ರಹಿಸಿದರು. ಪುರಸಭೆ ಮುಖ್ಯಾಧಿಕಾರಿಗಳು ಅಧಿಕಾರ ವಹಿಸಿಕೊಂಡು ಇಷ್ಟು ದಿನಗಳಾದರೂ ವಾರ್ಡ್‌ಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿಲ್ಲ ಎಂದು ದೂರಿದರು.
  ಹುಲ್ಮಾರ್ ಮಹೇಶ್ ಮಾತನಾಡಿ, ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿ. ಪಟ್ಟಣದಲ್ಲಿ ಸ್ಥಾಪಿಸಿರುವ ಜಗಜ್ಯೋತಿ ಬಸವೇಶ್ವರ, ಡಾ. ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಪುತ್ಥಳಿ ಭದ್ರತೆ ಮತ್ತು ಸ್ವಚ್ಛತೆಯತ್ತ ಗಮನ ಹರಿಸಿ ಎಂದು ಆಗ್ರಹಿಸಿದರು.
  ಪ್ರತಿ ಪುತ್ಥಳಿಗಳೂ ನಮಗೆ ಸದಾ ಸ್ಫೂರ್ತಿ. ಅವುಗಳನ್ನು ಉಳಿಸಿಕೊಳ್ಳುವ ಮತ್ತು ಸರಿಯಾಗಿ ನಿರ್ವಹಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಸೈಕಲ್ ಪಾರ್ಕ್ ಮಾಡಿ. ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಮೂಲ ಸೌಕರ್ಯ ಒದಗಿಸುವತ್ತ ಹೆಚ್ಚಿನ ಗಮನ ಹರಿಸಿ. ಅವುಗಳಿಗೆ ಹೆಚ್ಚಿನ ಹಣ ಮೀಸಲಿರಿಸಿ ಎಂದರು.
  ಉಳ್ಳಿ ದರ್ಶನ್ ಮಾತನಾಡಿ, ಪಟ್ಟಣದಲ್ಲಿ ಯುಜಿಡಿ ಸಮಸ್ಯೆಯಾಗಿ ರಸ್ತೆಗೆ ಗಲೀಜು ಹರಿಯುತ್ತಿದೆ. ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಪುರಸಭೆಯ ಮುಖ್ಯಾಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಪುರಸಭೆಯಲ್ಲಿ ಸಕ್ಕಿಂಗ್ ಮೆಷಿನ್ ಇಲ್ಲ. ಮ್ಯಾನ್ ಪವರ್ ಕೊರತೆಯಿದೆ. ತಕ್ಷಣ ಇದನ್ನು ಪರಿಹರಿಸಬೇಕು ಎಂದು ಹೇಳಿದರು.
  ಮಹಮದ್ ಸಾದಿಕ್ ಮಾತನಾಡಿ, ಪುರಸಭೆಯಲ್ಲಿ ಇ-ಸ್ವತ್ತಿನ ಸಮಸ್ಯೆಯಿದೆ. ಜನ ನಮ್ಮನ್ನು ಬೈಯುತ್ತಿದ್ದಾರೆ. ಈಗ ಏಳೆಂಟುತಿಂಗಳಿನಿಂದ ಆಡಳಿತ ಕುಂಠಿತವಾಗಿದೆ. ಪುರಸಭೆಯಲ್ಲಿ ಜನಸ್ನೇಹಿ ವಾತಾವರಣ ನಿರ್ಮಾಣ ಮಾಡಿ. ಮುಕ್ತಿವಾಹನ ಸೇರಿದಂತೆ ಪ್ರಮುಖ ವಿಚಾರಗಳಿಗೆ ಸ್ಪಂದಿಸಿ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
  ಸದಸ್ಯರ ಸಮಸ್ಯೆಗಳಿಗೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ಯತೀಶ್, ಇದು ಆಯವ್ಯಯಕ್ಕೆ ಪೂರಕವಾದ ಸಭೆ. ಮುಂಬರುವ ಹದಿನೈದು ದಿನಗಳಲ್ಲಿ ಮತ್ತೊಂದು ಸಾಮಾನ್ಯ ಸಭೆ ಕರೆಯಲಾಗುವುದು. ಆ ಸಂದರ್ಭದಲ್ಲಿ ನಿಮ್ಮೆಲ್ಲರ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತವಾದ ಕ್ರಮದ ಬಗ್ಗೆ ವಿವಿರವಾಗಿ ಚರ್ಚೆ ನಡೆಸೋಣ. ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಮುಖ್ಯಾಧಿಕಾರಿಗಳು ಮತ್ತು ಸಂಬಂಧಿಸಿದವರ ಜತೆಗೆ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
  ಮುಖ್ಯಾಧಿಕಾರಿ ಭರತ್, ಶೈಲಾ ಯೋಗೀಶ್, ಗೋಣಿ ಪ್ರಕಾಶ್, ರೋಷನ್, ರೇಖಾಬಾಯಿ, ರೂಪಕಲಾ ಹೆಗಡೆ, ಸುರೇಶ್, ಜಯಶ್ರೀ, ರಮೇಶ್, ಫೈರೋಜಾ ಬಾನು, ಕಮಲಮ್ಮ ಹುಲ್ಮಾರ್, ಉಮಾಪತಿ, ರಾಜ್‌ಕುಮಾರ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts