ಯಳಂದೂರು: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ಚರಂಡಿ ಸ್ವಚ್ಛತೆ ಸೇರಿದಂತೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಕುಡಿಯುವ ನೀರಿನ ಪೂರೈಕೆ ಮಾಡುವ ಇಲಾಖೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆನಂದ ಪ್ರಕಾಶ್ ಮೀನಾ ಹೇಳಿದರು.
ಕುಡಿಯುವ ನೀರಿನ ಬಾಟಲಿಯಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಮದ್ದೂರು ಗ್ರಾಮಸ್ಥರು ಇತ್ತೀಚೆಗೆ ಚಾಮರಾಜನಗರದಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಗಮನ ಸೆಳೆದಿದ್ದರು. ಇದರಿಂದ ಎಚ್ಚೆತ್ತ ಸಂಬಂಧಪಟ್ಟ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯವರು ಸಮಸ್ಯೆ ನಿವಾರಿಸಿದ್ದರು.
ಆದಾಗಿಯೂ ಈ ಬಗ್ಗೆ ಪರಿಶೀಲಿಸಲೆಂದು ತಾಲೂಕಿನ ಮದ್ದೂರು ಗ್ರಾಮಕ್ಕೆ ಮಂಗಳವಾರ ಸಿಇಒ ಭೇಟಿ ನೀಡಿದ್ದರು. ಚರಂಡಿಯಲ್ಲಿ ಕಸ-ಕಡ್ಡಿ ತುಂಬಿಕೊಂಡು ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಕುಡಿಯುವ ನೀರಿನ ಪೈಪ್ ಅನ್ನು ತಕ್ಷಣ ಬದಲಾಯಿಸುವುದರ ಜತೆಗೆ ಕುಡಿಯುವ ನೀರುನ್ನು ಪರೀಕ್ಷೆಗೆ ಒಳಪಡಿಸುವಂತೆ ಪಿಡಿಒ ನಟರಾಜು ಅವರಿಗೆ ಸೂಚಿಸಿದರು.
ನೀರು ಪೂರೈಕೆಯಾಗುವ ಸಾರ್ವಜನಿಕ ಸ್ಥಳಗಳು, ತೊಂಬೆಗಳು, ಸಂಪ್‌ಗಳು ಸೇರಿದಂತೆ ಎಲ್ಲ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕಿದೆ ಜತೆಗೆ ಸಾರ್ವಜನಿಕರ ಕೆಲಸಗಳನ್ನು ಮಾಡಬೇಕಿದೆ. ಕಾಲ ಕಾಲಕ್ಕೆ ನೀರು ಪೂರೈಕೆ ಮಾಡುವ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ನೈರ್ಮಲ್ಯ ಹಾಗೂ ಸರಬರಾಜು ಇಲಾಖೆ ಎಇ ಅನುಶ್ರೀ, ಎಇಇ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಟರಾಜು, ಕಾರ್ಯದರ್ಶಿ ನಂಜಪ್ಪ, ಸಿಬ್ಬಂದಿ ಪ್ರಸನ್ನ, ಪ್ರವೀಣ್ ಇತರರು ಹಾಜರಿದ್ದರು.