ಮೊದಲು 15 ಲಕ್ಷ ಕೊಡಿ ಆನಂತರ ವೋಟ್​ ನೀಡುತ್ತೇವೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಮಾತಿನ ಮರ್ಮವೇನು?

ಹುಬ್ಬಳ್ಳಿ: ನಾವು ಅಭಿವೃದ್ಧಿ ಮಾಡಿದ ಅಂಶಗಳ ಮೇಲೆ ಜನತೆ ಬಳಿ ವೋಟ್​ ಕೇಳುತ್ತಿದ್ದೇವೆ, ಬಿಜೆಪಿಯವರು ಏನು ಮಾಡದೇ ವೋಟ್​ ಕೇಳುತ್ತಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಜೈಲಿಗೆ ಹೋಗಿ ಬಂದವರು. ಜಾಮೀನಿನ ಮೇಲೆ ತಿರುಗಾಡುತ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಕೂಡಾ ಜೈಲಿಗೆ ಹೋಗಿ ಬಂದವರು. ಈಗ ಮತ್ತೆ ಸಿಎಂ ಆಗ್ತೇನೆ ಎನ್ನುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕುಂದಗೋಳ ವಿಧಾನಸಭಾ ಕ್ಷೇತ್ರದ ಕಮಡೊಳ್ಳಿ ಗ್ರಾಮದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಬಿಜೆಪಿ ಅವರು ನಿಮ್ಮ ಬಳಿ ವೋಟ್ ನೀಡಿ ಎಂದರೆ ಮೊದಲು 15 ಲಕ್ಷ ನೀಡಿ. ಆನಂತರ ವೋಟ್​ ನೀಡುತ್ತೇವೆ ಎಂದು ಹೇಳಿ ಎಂದು ವ್ಯಂಗ್ಯವಾಡಿದರು.

ನಾನು ಸಾಲಮನ್ನಾ ಮಾಡಿದೆ, ನಮ್ಮ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಕೂಡ ಸಾಲಮನ್ನಾ ಮಾಡಿದರು. ಮೈತ್ರಿ ಸರ್ಕಾರ ಕೂಡಾ ಸಾಲಮನ್ನಾ ಮಾಡಿದೆ. ನಾನು ಏನು ನಮ್ಮ ಅಪ್ಪನ ಮನೆಯಿಂದ ತಂದು ಸಾಲಾಮನ್ನಾ ಮಾಡಿಲ್ಲಾ. ಜನರ ದುಡ್ಡು ಜನರಿಗೆ ನೀಡಲು ಏನು ಕಷ್ಟ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಸ್ಥಿತಿ ಹೇಗೆ ಆಗಿದೆ ಎಂದರೆ ನಮ್ಮ ಹುಡುಗನಿಗೆ ಹೆಣ್ಣು ಕೊಡಿ ಎಂದರೆ ನಮ್ಮ ಅವ್ವನ ಮುಖ ನೋಡಿ ಎನ್ನುವ ಹಾಗೆ ಆಗಿದೆ ಎಂದು ಟೀಕಿಸಿದರು.

ಕುಸುಮಾ ಶಿವಳ್ಳಿ ಅವರಿಗೆ ರಾಜಕೀಯದ ಬಗ್ಗೆ ಏನೂ ತಿಳಿದಿಲ್ಲ ಎಂದು ಕೆಲವರು ಟೀಕಿಸುತ್ತಿದ್ದಾರೆ. ಆದರೆ ಯಾರೂ ರಾಜಕೀಯ ಕಲಿತು ಬಂದಿರುವುದಿಲ್ಲ. ಅವರ ಹಿಂದೆ ಸಂಪೂರ್ಣ ರಾಜ್ಯ ಸರ್ಕಾರ ಇದೆ. ಮತ್ತು ಈ ಕ್ಷೇತ್ರವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುತ್ತೇವೆ ಎಂದರು.

ನಾನು ಜಾರಿಗೆ ತಂದ ಹಲವಾರು ಯೋಜನೆಗಳು ನಮ್ಮ ಕೈ ಹಿಡಿಯಲಿದೆ. ನಾನು ಉಚಿತವಾಗಿ 7 ಕೆಜಿ ಅಕ್ಕಿ ನೀಡಿದೆ. ಅಕ್ಕಿ ಪಡೆದವರು ಕಾಂಗ್ರೆಸ್​​​ಗೆ ವೋಟ್​ ನೀಡಿ. ಬಿಜೆಪಿಯವರು ಏನು ಅಭಿವೃದ್ಧಿ ಮಾಡದೇ ವೋಟ್​ ಕೇಳುತ್ತಿದ್ದಾರೆ ಎಂದು ಕಿಡಿಕಾರಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *