More

    ತತ್ತ್ವದ ಘನರಹಸ್ಯ

    ಪರಮಾತ್ಮನು ಅಮೃತಸ್ವರೂಪ. ಅವನು ಯಾವ ಬದಲಾವಣೆಗೂ ಸಿಗುವುದಿಲ್ಲ. ಅವನು ಯಾವಾಗಲೂ ಒಂದೇ ರೀತಿಯಲ್ಲಿ ಇರುತ್ತಾನೆ. ಅವನೇ ಪ್ರಮುಖ. ಅವನು ಜೀವರನ್ನು ಆಳುತ್ತಾನೆ. ಈ ಬ್ರಹ್ಮಾಂಡವೆಲ್ಲ ಪರಮಾತ್ಮನ ಕೈಯಲ್ಲೇ ಇದೆ. ಇಲ್ಲಿ ಪ್ರತಿಯೊಂದು ವಸ್ತುವು ಅವನ ಆಣತಿಯನ್ನೇ ಪಾಲಿಸುತ್ತದೆ. ಅವನ ಬಳಿ ಅಣು-ವಿಭು ಎಲ್ಲವೂ ಬಾಗಿ ನಡೆಯಬೇಕು. ನಾವು ಯಾವುದನ್ನು ಪ್ರಕೃತಿಧರ್ಮ ಎನ್ನುತ್ತೇವೆಯೋ ಅದನ್ನು ಕೊಟ್ಟವನು ಅವನೇ. ಜೀವದ ಒಳಗೆ ಅಂತರ್ಯಾಮಿಯಂತೆ ನಿಂತು ಅವರನ್ನು ಅವರವರ ಕರ್ಮಕ್ಕೆ ಅನುಸಾರವಾಗಿ ಆಳುತ್ತಿರುತ್ತಾನೆ. ಇದೆಲ್ಲವೂ ‘ಪರಮಾತ್ಮಪದ’ವನ್ನು ಸೂಚಿಸುತ್ತದೆ. ಮಹಲಿಂಗರಂಗನ ಮಾತನ್ನು ಕೇಳಿ:

    ತೋರಿಸುವದೆಲ್ಲವನು ತನ್ನೊಳು;

    ತೋರದಡಗಿದೊಡಡಗಿತೆಂಬ ವಿ

    ಚಾರವೇನೂ ತೋರದೇ ಸ್ಥಿಮಿತಾಂಬುಧಿಯವೋಲು |

    ಮೀರಿ ಮಿಕ್ಕಿಹ ಸತ್ಯಸಂವಿದ

    ಪಾರಪರಮಾನಂದ ಸಹಜಾ

    ಕಾರವದು ಪರಮಾತ್ಮಪದವೆಂದರಿತುಕೋ ಎಂದ || (7.13)

    ಈ ಪದ್ಯದ ಸಾರಾರ್ಥವನ್ನು ಮೊದಲಿಗೆ ತಿಳಿಯೋಣ: ‘‘ಸಮಸ್ತವೂ ತನ್ನಲ್ಲಿಯೇ ಅಡಗಿದೆ. ಆದರೆ, ಅಡಗಿರುವ ವಿಚಾರ ಅದಕ್ಕೆ ತಿಳಿಯದಾಗಿದೆ. ಅದು ಅಲುಗಾಡದ ಸಮುದ್ರದಂತಿದೆ. ಸತ್ಯವೂ ಅಪಾರವೂ ಆದ ಪರಮಾನಂದದ ಸಹಜಸ್ವರೂಪವೇ ಪರಮಾತ್ಮಪದ ಎಂದು ಸಾಧಕರು ತಿಳಿಯಬೇಕು.’’ ಈ ಪದ್ಯದ ಪೂರ್ವಾರ್ಧದಲ್ಲಿ ತನ್ನೊಳು ತೋರದೆ + ಅಡಗಿದೊಡೆ + ಅಡಗಿತು + ಎಂಬ – ಎಂದು ಬಿಡಿಸಿ ಓದಿಕೊಳ್ಳಬೇಕು. ಸ್ಥಿಮಿತ + ಅಂಬುಧಿಯ ಎಂದರೆ ಅಲುಗಾಡದ ಸಮುದ್ರದಂತೆ. ಮಹಲಿಂಗರಂಗನು ಪರಮಾತ್ಮಪದದ ಬಗೆಗೆ ಹೇಳುವಾಗ ‘‘ಸ್ಥಿಮಿತಾಂಬುಧಿಯವೋಲು’’ ಎಂಬ ಉಪಮಾನದ ಮೂಲಕ ನಮ್ಮ ಅರಿವಿಗೆ ತರುತ್ತಿದ್ದಾನೆ. ಇದು ಸಾಮಾನ್ಯವಾಗಿ ಎಲ್ಲಾ ಕಡೆ ಬಳಕೆಯಾದರೂ ಪ್ರಸ್ತುತ ಸಂದರ್ಭದಲ್ಲಿ ಬೇರೆಯಾಗಿಯೇ ಬಳಕೆಗೊಂಡಿದೆ.

    ನಾವು ತಿಳಿಯಬೇಕಾದ ಕರಣದ ಎಲ್ಲ ವಿಷಯಗಳು ಜ್ಞಾನಗಳು ಎನಿಸುತ್ತವೆ. ಅವುಗಳನ್ನು ಸರಿಯಾಗಿ ತಿಳಿಯುವುದೇ ಜ್ಞಾತೃತ್ವ – ಎಂದೆನಿಸಿಕೊಳ್ಳುತ್ತದೆ. ಇದು ಮೂರುದಲಗಳನ್ನು ಉಳ್ಳದ್ದು. ಇಂಥ ಅವಸ್ಥೆ ಇಲ್ಲವಾದುದೇ ಪರಮಾತ್ಮಪದ. ಮಹಲಿಂಗರಂಗನು ಮುಂದುವರಿಸಿ ಹೇಳುವ ಮಾತಿದು:

    ಒತ್ತರದ ನಿದ್ರೆಯೊಳು ನಿಜಸುಖ

    ವ್ಯಕ್ತವಾಗಿಯೆ ತೋರುತಿರಲದ

    ಮರ್ತ್ಯ ‘ಸುಖಮಸ್ವಾಪ್ಯಮಹ’ಮಿಂತೆಂದು ಪೇಳುವನು; |

    ಪ್ರತ್ಯಭಿಜ್ಞೆಯೆನಿಪ್ಪುದಾ ಸುಖ;

    ನಿತ್ಯನಿರುಪಾಧಿಕವದಾಗಿಹ

    ಸತ್ಯಸಹಜಾನಂದವದು ಪರಮಾತ್ಮಪದವೆಂದ || (7.15)

    ಈ ಪದ್ಯದ ಆಂತರ್ಯವನ್ನು ತಿಳಿಯುವ ಯತ್ನವನ್ನು ಮಾಡೋಣ: ‘‘ಗಾಢವಾದ ನಿದ್ರೆಯಲ್ಲಿ ನಿಜಸುಖವು ವ್ಯಕ್ತವಾಗಿಯೇ ತೋರುತ್ತದೆ. ಅದು ಸತ್ಯ. ಆಗ ಗಾಢನಿದ್ರೆಯಿಂದ ಎದ್ದವನು ‘ಸುಖಮಸ್ವಾಪ್ಯಮಹಂ’ ಎಂದು ಹೇಳುವನು. ಆ ಸುಖವೇ ಪ್ರತ್ಯಭಿಜ್ಞೆ. ಇದು ನಿತ್ಯವೂ ನಿರುಪಾಧಿಕವೂ ಆಗಿದ್ದು ಸತ್ಯಸಹಜಾನಂದದ ಪರಮಾತ್ಮಪದ ಎಂದು ತಿಳಿಯಬೇಕು.’’

    ಈ ಪದ್ಯದ ಪೂರ್ವಾರ್ಧದಲ್ಲಿ ಬಂದಿರುವ ‘ಸುಖಮಸ್ವಾಪ್ಯಮಹಂ’ ಎಂಬ ಮಾತು ಶಾಂಕರಭಾಷ್ಯದಲ್ಲಿ ಬಂದಿದೆ. ಇದು ‘ಆತ್ಮದರ್ಶನ’ದ ಕುರುಹಾಗಿ ನಿರೂಪಿತವಾಗಿದೆ. ಈ ಮಾತಿಗೆ ‘‘ನಾನು ಸುಖವಾಗಿ ನಿದ್ರೆ ಮಾಡಿದೆನು’’ ಎಂದು ಅರ್ಥ. ‘ಪ್ರತ್ಯಭಿಜ್ಞೆ’ ಎಂದರೆ: ಹಿಂದೊಮ್ಮೆ ನೋಡಿದ್ದನ್ನು ನಡುವೆ ಮರೆತಿದ್ದು ಆಮೇಲೆ ಗುರುತಿಸುವುದಕ್ಕೆ ಪ್ರತ್ಯಭಿಜ್ಞೆ ಎಂದು ಕರೆಯುತ್ತಾರೆ. ಇಲ್ಲಿ ಮಹಲಿಂಗರಂಗನು ನಿದ್ರೆಯಲ್ಲಿ ಅನುಭವಕ್ಕೆ ಬಂದ ಸುಖದ ನೆನಪನ್ನು ಪ್ರತ್ಯಭಿಜ್ಞೆಯೆಂದು ಕರೆದಿದ್ದಾನೆ. ಮುಂದಿನ ಮಹಲಿಂಗರಂಗನ ಮಾತಿದು:

    ಕತ್ತಲೆಗೆ ಸೈರಿಸದೆ ತೇಜವ

    ನರ್ಥಿಸುವ ನಯನಗಳ ತೇಜೋ

    ಮೂರ್ತಿಯೆಂತಂತಖಿಳದುಃಖವ ಸೈರಿಸದೆ; ಸುಖವ |

    ಪ್ರಾರ್ಥಿಸುವ ನಿಜವಾದ ನಿರುಪಮ

    ವಸ್ತುವೇ ಸುಖಮಯವದೆನಲೇ

    ಕತ್ವವದು ಪರಮಾತ್ಮಪದವೆಂದರಿತುಕೋ ಎಂದ || (7.16)

    ಈ ಪದ್ಯದ ಅರ್ಥ ಇಷ್ಟು: ‘‘ಕಣ್ಣುಗಳು ಕತ್ತಲೆಯನ್ನು ಸಹಿಸಿಕೊಳ್ಳದೆ ಬೆಳಕನ್ನು ಅಪೇಕ್ಷಿಸುತ್ತವೆ. ಅದರಂತೆ ಆತ್ಮನು ದುಃಖವನ್ನು ಅನುಭವಿಸಲಾರದೆ ಸುಖವನ್ನು ಬಯಸುವ ಶ್ರೇಷ್ಠವಾದ ವಸ್ತುವೇ ಸುಖಮಯವಾಗಿದೆ. ಆ ಏಕತ್ವವೇ ಪರಮಾತ್ಮಪದ ಎಂದು ತಿಳಿದುಕೊಳ್ಳಬೇಕು.’’ ಈ ಪದ್ಯದ ಪೂರ್ವಾರ್ಧದಲ್ಲಿ ‘‘ತೇಜೋಮೂರ್ತಿಯು + ಎಂತೊ + ಅಂತು + ಅಖಿಳ’’ ಎಂದು ಬಿಡಿಸಿಕೊಳ್ಳಬೇಕು. ಪದ್ಯದ ಉತ್ತರಾರ್ಧದಲ್ಲಿ ‘‘ಸುಖಮಯವದು + ಎನಲು + ಏಕತ್ವವು + ಅದು’’ ಎಂದು ಬಿಡಿಸಿಕೊಂಡು ಓದಬೇಕು. ನಮ್ಮ ಕಣ್ಣುಗಳು ಗಾಢವಾದ ಕತ್ತಲೆಯನ್ನು ಅಪೇಕ್ಷಿಸುವುದಿಲ್ಲ. ಅವು ಕೂಡಲೇ ಬೆಳಕನ್ನು ಅಪೇಕ್ಷಿಸುತ್ತವೆ. ಇದು ನಮ್ಮನಮ್ಮ ದಿನದಿನದ ಅನುಭವ. ಇಂಥ ವಾಸ್ತವ ಅನುಭವದ ಮೂಲಕ ‘ಪರಮಾತ್ಮಪದ’ದ ನೆಲೆಯನ್ನು ಮಹಲಿಂಗರಂಗ ನಮಗೆ ತಿಳಿಸಿಕೊಡುತ್ತಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts