ದೈವಾಂಶ ಸಂಭೂತರು, ವೀರರ ನಾಡಿಗೆ ಬಂದದ್ದಕ್ಕೆ ರೋಮಾಂಚನ

ಹುಬ್ಬಳ್ಳಿ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಣ್ಣನೆ

ಹುಬ್ಬಳ್ಳಿ: ಹುಬ್ಬಳ್ಳಿ ಮತ್ತು ಧಾರವಾಡ ಗಂಡು ಮೆಟ್ಟಿನ ನೆಲ. ಇಲ್ಲಿ ಹಲವು ಸಿದ್ಧಾರೂಢರು, ಶೈಕ್ಷಣಿಕ ಕ್ರಾಂತಿ ಮಾಡಿದ ಮೂರು ಸಾವಿರ ಮಠದ ಶ್ರೀಗಳಂತ ಹಲವು ದೈವಾಂಶ ಸಂಭೂತರು, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಂಥ ವೀರರು ಜನಿಸಿದ ನಾಡಿದು. ಸಾಹಿತ್ಯ ಸಂಗೀತ ದಿಗ್ಗಜರಾದ ದ.ರಾ. ಬೇಂದ್ರೆ ಮತ್ತು ಗಂಗೂಬಾಯಿ ಹಾನಗಲ್​ ಸೇರಿ ಇನ್ನೂ ಹಲವರು ಬದುಕಿಬಾಳಿದ ಈ ನಾಡಿಗೆ ಬಂದದ್ದಕ್ಕೆ ರೋಮಾಂಚನವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಹುಬ್ಬಳ್ಳಿಯಲ್ಲಿ ಆಯೋಜನೆಗೊಂಡಿದ್ದ ಬಿಜೆಪಿ ಸಮಾವೇಶದಲ್ಲಿ ಕನ್ನಡದಲ್ಲೇ ಮಾತಿಗಾರಂಭಿಸಿದ ಅವರು ಸಮಾವೇಶದಲ್ಲಿ ಜಮಾಯಿಸಿದ್ದ ಲಕ್ಷಾಂತರ ಜನರೊಂದಿಗೆ ಸಂವಹನ ಏರ್ಪಡಿಸಿಕೊಂಡರು. ಇತ್ತೀಚೆಗೆ ಲಿಂಗೈಕ್ಯರಾದ ತುಮಕೂರು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಹಾಗೂ ಕೇಂದ್ರದ ಮಾಜಿ ಸಚಿವ ಅನಂತಕುಮಾರ್​ ಅವರನ್ನು ಸ್ಮರಿಸಿದರು.

ಬಳಿಕ ಕೇಂದ್ರದಲ್ಲಿನ ತಮ್ಮ ನೇತೃತ್ವದ ಸರ್ಕಾರದ ಕಳೆದ ನಾಲ್ಕು ವರ್ಷಗಳ ಸಾಧನೆಯನ್ನು ಮೆಲುಕು ಹಾಕಿದರು. ಭ್ರಷ್ಟಾಚಾರದ ವಿರುದ್ಧದ ಹೋರಾಟದ ಕುರಿತು ಪ್ರಸ್ತಾಪಿಸಿದ ಅವರು, ಇದುವರೆಗೆ ಹಲವು ಬೇನಾಮಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿದ್ದೇವೆ. ಇದರಿಂದಾಗಿ ಪ್ರಾಮಾಣಿಕರಾಗಿರುವ ಜನರಿಗೆ ಮೋದಿ ಇಷ್ಟವಾಗುತ್ತಾರೆ. ಆದರೆ ಭ್ರಷ್ಟರ ಪಾಲಿಗೆ ದುಃಸ್ವಪ್ನವಾಗುತ್ತಾರೆ ಎಂದರು.

ಕರ್ನಾಟಕ ಸರ್ಕಾರ ಯಾರ ಉಸ್ತುವಾರಿಯಲ್ಲಿ ನಡೆಯುತ್ತಿದೆ ಎಂಬುದು ಬ್ರಹ್ಮನಿಗೂ ಗೊತ್ತಿಲ್ಲ. ಎಲ್ಲರೂ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕ ಸಮ್ಮಿಶ್ರ ಸರ್ಕಾರದ ಶಾಸಕರು ಸಾರ್ವಜನಿಕವಾಗಿ ಹೊಡೆದಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಧನಾತ್ಮಕ ಸರ್ಕಾರ ಬೇಕೋ ಅಥವಾ ಋಣಾತ್ಮಕ ಸರ್ಕಾರ ಬೇಕೋ ಎಂಬುದನ್ನು ನೀವೇ ಆಯ್ದುಕೊಳ್ಳಿ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ, ಸಂಸದ ಪ್ರಲ್ಹಾದ್​ ಜೋಷಿ, ಶಾಸಕರಾದ ಜಗದೀಶ್​ ಶೆಟ್ಟರ್​, ಬಿಜೆಪಿ ಉಸ್ತುವಾರಿ ಮುರಳೀಧರ ರಾವ್​ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.