ನನಗೆ ರಕ್ಷಣೆ ನೀಡಲು ಸಾಧ್ಯವಾಗದ ಪ್ರಧಾನಿ ಮೋದಿ ರಾಜೀನಾಮೆ ನೀಡಲಿ: ಅರವಿಂದ ಕೇಜ್ರಿವಾಲ್​

ನವದೆಹಲಿ: ಮುಖ್ಯಮಂತ್ರಿ ಹುದ್ದೆಯಲ್ಲಿ ಇರುವವರಿಗೆ ಸರಿಯಾಗಿ ಭದ್ರತೆ ವ್ಯವಸ್ಥೆ ಮಾಡಲು ಸಾಧ್ಯವಾಗದೆ ಇದ್ದರೆ ರಾಜೀನಾಮೆ ನೀಡಿ ಎಂದು ಪ್ರಧಾನಿ ಮೋದಿಯವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಆಗ್ರಹಿಸಿದ್ದಾರೆ.

ಇತ್ತೀಚೆಗೆ ಅರವಿಂದ್​ ಕೇಜ್ರಿವಾಲ್​ ಸಚಿವಾಲಯದ ಬಳಿ ವ್ಯಕ್ತಿಯೋರ್ವ ಖಾರದಪುಡಿ ಎರೆಚಿದ್ದ. ಅದಕ್ಕೆ ಸಂಬಂಧಪಟ್ಟಂತೆ ತಮ್ಮ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅರವಿಂದ್​ ಕೇಜ್ರಿವಾಲ್​ ಪ್ರಧಾನಿ ಮೋದಿಯವರ ರಾಜೀನಾಮೆ ಕೇಳಿದ್ದಾರೆ.

ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್​ ಆದ್ಮಿ ಪಕ್ಷದ ಸರ್ಕಾರ ಮೂರು ವರ್ಷಗಳಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಮೋದಿಯವರು ಗುಜರಾತ್​ನಲ್ಲಿ ಮುಖ್ಯಮಂತ್ರಿಯಾಗಿ 12 ವರ್ಷ ಆಡಳಿತ ನಡೆಸಿ ಮಾಡಿದ ಕೆಲಸಗಳಿಗಿಂತ ನಮ್ಮ ಸರ್ಕಾರ ಮೂರು ವರ್ಷದಲ್ಲಿ ನೀಡಿದ ಜನಪರ ಕಾರ್ಯಗಳೇ ಹೆಚ್ಚು ಎಂದು ಹೇಳಿದರು.

ನನ್ನ ಪ್ರಾಮಾಣಿಕತೆ ಬಗ್ಗೆ ದೆಹಲಿ ಜನರು ತುಂಬ ಹೆಮ್ಮೆ ಹೊಂದಿದ್ದಾರೆ. ಪ್ರಧಾನಿ ಮೋದಿಯವರ ಬಗ್ಗೆಯೂ ಇಷ್ಟೇ ಹೆಮ್ಮೆ, ನಂಬಿಕೆ ಹೊಂದಿದ್ದೀರಾ ಎಂದು ನಾನು ದೇಶದ ಜನರನ್ನು ಕೇಳಲು ಬಯಸುತ್ತೇನೆ ಎಂದರು.

ಕಳೆದ ಮೂರು ವರ್ಷಗಳಲ್ಲಿ ನನ್ನ ಮೇಲೆ ಮೂರನೇ ಬಾರಿ ದಾಳಿ ನಡೆಯುತ್ತಿದೆ. ನಾನು ದೆಹಲಿಯ ಮುಖ್ಯಮಂತ್ರಿ ಆಗದೆ ಇದ್ದರೆ ಈ ಹಲ್ಲೆಗಳು ನಡೆಯುತ್ತಿರಲಿಲ್ಲ. ನನ್ನ ಮೇಲೆ ಪದೇಪದೆ ದಾಳಿ ನಡೆಯಲು ಮೋದಿಯವರೇ ಕಾರಣ. ದೆಹಲಿಯಲ್ಲಿ ನಮ್ಮ ಆಪ್​ ಪಕ್ಷವನ್ನು ಗೆಲ್ಲಿಸಿದ ಜನರ ವಿರುದ್ಧ ಹೀಗೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ತಮಗೆ ರಕ್ಷಣೆ ಕೊಡಲು ಸಾಧ್ಯವಾಗದೆ ಇದ್ದರೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.