ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರ 74ನೇ ಜನ್ಮದಿನವನ್ನು 74 ಗಿಡಗಳ ನೆಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು. ನಗರದ ಸಿದ್ಧರಾಮೇಶ್ವರ ಬಡಾವಣೆಯಲ್ಲಿ ಬಿಜೆಪಿ ಜಿಲ್ಲಾ ಟಕದ ವತಿಯಿಂದ ಹಮ್ಮಿಕೊಂಡಿದ್ದ ಗಿಡನೆಡುವ ಕಾರ್ಯಕ್ರಮಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ಉಚಿತ ಆರೋಗ್ಯತಪಾಸಣೆ, ರಕ್ತದಾನ ಶಿಬಿರವನ್ನು ಸಹ ಆಯೋಜಿಸಲಾಗಿತ್ತು. ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್ ಸೇರಿ ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಧಾನಿ ಮೋದಿ ಅವರ ಅಭಿವೃದ್ಧಿ ಚಿಂತನೆಗಳು, ದೂರದೃಷ್ಟಿತ್ವ ರಾಷ್ಟ್ರದ ಪ್ರಗತಿಗೆ ಪೂರಕವಾಗಿವೆ. ಅವರ ಹುಟ್ಟು ಹಬ್ಬವನ್ನು ದೇಶದ ಹಬ್ಬವಾಗಿ ಆಚರಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ಮೋದಿ ಈ ದೇಶದ ಸಂಪತ್ತು. ಅವರ ಆಡಳಿತದಲ್ಲಿ ದೇಶ ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ಮುಂದಿನ ತಲೆಮಾರಿನವರಿಗೆ ಮೋದಿ ಅಭಿವೃದ್ಧಿ, ದೂರದೃಷ್ಟಿತ್ವ ಪರಿಚಯಿಸುವ ಉದ್ದೇಶದಿಂದ ಮೋದಿ ನಡೆದು ಬಂದ ದಾರಿ ಕುರಿತ ಪುಸ್ತಕವನ್ನು ಕನ್ನಡದಲ್ಲಿ ಹೊರತರಲು ಉದ್ದೇಶಿಸಲಾಗಿದೆ. ಈ ಸಂಬಂಧ ಹಿರಿಯ ಸಾಹಿತಿಗಳೊಂದಿಗೆ ಚರ್ಚಿಸಿದ್ದೇನೆ, ನೀವು ಕಂಡಂತೆ ಮೋದಿಯವರ ಆದರ್ಶ ಕುರಿತು ಲೇಖನಗಳನ್ನು ಬರೆಯಬಹುದು, 3-4 ತಿಂಗಳಲ್ಲಿ ಪುಸ್ತಕ ಸಿದ್ಧಪಡಿಸಿ ಲೋಕಾರ್ಪಣೆ ಮಾಡಲಾಗುವುದು ಎಂದರು.
ಗಾಂಧಿ ಸಂದೇಶ ಸಾಕ್ಷಾತ್ಕಾರ : ಮೋದಿ ಪ್ರಧಾನಿಯಾದ ನಂತರ ತಮ್ಮ ಕಾರ್ಯಕ್ರಮಗಳ ಮೂಲಕ ಗಾಂಧೀಜಿಯ ಸ್ವಚ್ಛತಾ ಸಂದೇಶವನ್ನು ಸಾಕಾರಗೊಳಿಸುತ್ತಿದ್ದಾರೆ. ಸ್ವಚ್ಛತಾ ಆಂದೋಲನಾ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ 8 ಲಕ್ಷ ಕೋಟಿಗೂ ಹೆಚ್ಚು ಹಣ ನೀಡಿದೆ. ಕೇಂದ್ರ ಸರ್ಕಾರ ಇದೂವರೆಗೆ ಯಾವುದೇ ಅಭಿವೃದ್ಧಿ ಯೋಜನೆಗೆ ಹಣ ನೀಡಿಲ್ಲ ಎನ್ನುವ ಉದಾಹರಣೆ ಇಲ್ಲ ಎಂದು ಸೋಮಣ್ಣ ಹೇಳಿದರು.
ಇದೇ ಸಂದರ್ಭದಲ್ಲಿ ನಗರಪಾಲಿಕೆಯ ಇ -ಟಾಯ್ಲೆಟ್ ಅನ್ನು ಸೋಮಣ್ಣ ಲೋಕಾರ್ಪಣೆ ಮಾಡಿದರು. ಹಸಿ ಕಸ, ಒಣ ಕಸ ಬೇರ್ಪಡಿಸಿ ನೀಡಲು ಪಾಲಿಕೆಯಿಂದ ನಾಗರೀಕರಿಗೆ ಡಸ್ಟ್ ಬಿನ್ ವಿತರಿಸಿದರು.
ಮಾಜಿ ಸಂಸದ ಜಿ.ಎಸ್.ಬಸವರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್, ನಗರಾಧ್ಯಕ್ಷ ಟಿ.ಎಚ್.ಹನುಮಂತರಾಜು, ಮುಖಂಡರಾದ ಎಸ್.ಪಿ.ಚಿದಾನಂದ್, ಎಸ್.ಡಿ.ದಿಲೀಪ್ ಕುಮಾರ್, ಎಸ್.ಶಿವಪ್ರಸಾದ್, ಡಾ.ಎಸ್.ಪರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ಮೊದಲಾದವರು ಭಾಗವಹಿಸಿದ್ದರು.