ಬಾಲಸಾಧಕರಿಗೆ ಪ್ರಧಾನಿ ಪ್ರೇರಣೆ ಮಾತು

< ಮತ್ತಷ್ಟು ಸಾಧನೆ ಮಾಡುವಂತೆ, ಇತರರಿಗೂ ನೆರವಾಗುವಂತೆ ಸಲಹೆ>

ನವದೆಹಲಿ: ಪ್ರಕೃತಿಯೊಂದಿಗಿನ ಒಡನಾಟ ಹೊಸ ಸಂಶೋಧನೆಗೆ ಪೂರಕವಾಗಬಹುದು. ದೇಶದಲ್ಲಿನ ಯುವಶಕ್ತಿಯ ಸಾಮರ್ಥ್ಯ ಹೊರಹೊಮ್ಮಿಸಲು ಶ್ರಮಿಸುವಂತೆ ಬಾಲಶಕ್ತಿ ಪುರಸ್ಕಾರ್ ಪುರಸ್ಕೃತರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಪ್ರಧಾನಿ ನಿವಾಸದಲ್ಲಿ ಗುರುವಾರ ಪುರಸ್ಕೃತರೊಂದಿಗೆ ಮಾತನಾಡಿದ ಪ್ರಧಾನಿ, ಯೋಗ ಅಭ್ಯಾಸ ರೂಢಿಸಿಕೊಳ್ಳಿ, ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ವೀಕ್ಷಿಸಿ. ಬಿಡುವಿನ ವೇಳೆಯನ್ನು ಪ್ರಕೃತಿಯೊಂದಿಗೆ ಕಳೆಯುವ ಅಭ್ಯಾಸ ರೂಢಿಸಿಕೊಳ್ಳಿ. ನಿಮ್ಮಲ್ಲಿನ ಅಸಾಧಾರಣ ಪ್ರತಿಭೆಗೆ ದೊರೆತ ಪ್ರಶಸ್ತಿಯ ಹಿಂದೆ ನಿಮ್ಮ ಹೆತ್ತವರು ಹಾಗೂ ಶಿಕ್ಷಕರು ಇದ್ದಾರೆ ಎನ್ನುವುದನ್ನು ಅರಿತುಕೊಳ್ಳಿ ಎಂದರು.
ಪ್ರಶಸ್ತಿ ಪಡೆದುದಕ್ಕೆ ಸಂಭ್ರಮಿಸುವ ಜತೆಗೆ ಇನ್ನಷ್ಟು ವಿದ್ಯಾರ್ಥಿಗಳು ನಾನಾ ಕ್ಷೇತ್ರದಲ್ಲಿ ಸಾಧನೆ ತೋರುವಂತಾಗಲು ಪ್ರೇರಣಾದಾಯಿಗಳಾಗುವಂತೆ ವಿದ್ಯಾರ್ಥಿಗಳಿಗೆ ಪ್ರಧಾನಿ ಸಲಹೆ ನೀಡಿದರು.
ಪ್ರಶಸ್ತಿ ಪುರಸ್ಕೃತ ಆಯುಷ್ಮಾನ್ ತ್ರಿಪಾಠಿ ತನ್ನ ಪರಿಚಯ ತಿಳಿಸುತ್ತಿದ್ದಂತೆ, ಆತನ ಜನ್ಮ ದಿನಾಂಕ ಇದೇ ದಿನ (ಜ.24) ಎಂಬುದನ್ನು ಪ್ರಧಾನಿ ನೆನಪಿಸಿದರು. ಈ ಮೂಲಕ ಪುರಸ್ಕೃತರನ್ನು ಭೇಟಿಯಾಗುವ ಮೊದಲು ಅವರ ಬಗ್ಗೆ ಪ್ರಧಾನಿ ತಿಳಿದುಕೊಂಡಿರುವುದು ಅರಿವಾಯಿತು.

6ರ ಹರೆಯದ ಇಹಾ ದೀಕ್ಷಿತ್, ತಾನು 2500 ಗಿಡಗಳನ್ನು ನೆಟ್ಟಿರುವುದನ್ನು ಉಲ್ಲೇಖಿಸುತ್ತಾ, ಎಲ್ಲರೂ ತಮ್ಮ ತಮ್ಮ ಹುಟ್ಟುಹಬ್ಬಕ್ಕೆ ಗಿಡ ನೆಡುವಂತೆ ವಿನಂತಿಸಿ ನೀಡಿದ ಗಿಡವನ್ನು ಪ್ರಧಾನಿ ಆತ್ಮೀಯತೆಯಿಂದ ಸ್ವೀಕರಿಸಿದರು.

26 ಬಾಲ ಪ್ರತಿಭೆಗಳು ಹಾಗೂ ಐದು ಸಂಸ್ಥೆಗಳ ಪ್ರತಿನಿಧಿಗಳ ಜತೆ ಪ್ರಧಾನಿ ಫೋಟೋ ತೆಗೆಸಿಕೊಂಡರು. ಸಂಗೀತ ಕ್ಷೇತ್ರದ ಸಾಧಕ ತಮಿಳುನಾಡಿನ ರಾಮ್ ಎಂ. ಅವರಿಂದ ಶಾಸ್ತ್ರೀಯ ಸಂಗೀತ ಆಲಿಸಿದರು. ತಮ್ಮ ಹಸ್ತಾಕ್ಷರ, ಪ್ರಶಸ್ತಿ ಪುರಸ್ಕೃತರ ಹೆಸರು ಕೆತ್ತಿಸಲ್ಪಟ್ಟ ಕೈಗಡಿಯಾರ ಉಡುಗೊರೆಯಾಗಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮೇನಕಾ ಗಾಂಧಿ, ರಾಜ್ಯ ಸಚಿವ ಡಾ.ವೀರೇಂದ್ರ ಕುಮಾರ್ ಇದ್ದರು.