4 ಲಕ್ಷ ಕೋಟಿ ಸಾಲ ಮನ್ನಾ!?

<< ರೈತರ ಹೊರೆ ಇಳಿಸಲು ಚಿಂತನೆ ಆರಂಭಿಸಿದ ಕೇಂದ್ರ ಸರ್ಕಾರ >>

ನವದೆಹಲಿ: ಪಂಚರಾಜ್ಯ ಚುನಾವಣಾ ಫಲಿತಾಂಶದ ಆಘಾತದಿಂದ ಎಚ್ಚೆತ್ತುಕೊಂಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಗ್ರಾಮೀಣ ಭಾರತದ ಮನಗೆಲ್ಲುವುದಕ್ಕಾಗಿ ಸಾಲಮನ್ನಾ ಮಾಡುವ ಚಿಂತನೆ ನಡೆಸಿದೆ. ಒಂದೊಮ್ಮೆ ಇದು ಕಾರ್ಯರೂಪಕ್ಕೆ ಬಂದಲ್ಲಿ ಅಂದಾಜು 4 ಲಕ್ಷ ಕೋಟಿ ರೂ. ಸಾಲ ಮಾಫಿ ಆಗಲಿದ್ದು, ಒಟ್ಟಾರೆ ದೇಶದ 26.30 ಕೋಟಿ ರೈತರಿಗೆ ಪ್ರಯೋಜನವಾಗಲಿದೆ.

ಮಧ್ಯಭಾರತದ ಹಿಂದಿ ಭಾಷಿಕ ಬಾಹುಳ್ಯದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ಗೆ ದೊರೆತಿರುವ ಜನಾದೇಶ, ಪಕ್ಷಕ್ಕಾದ ಹಿನ್ನಡೆ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ‘ಕೇಂದ್ರ ಸರ್ಕಾರ ಕೃಷಿಕರ ನೆರವಿಗೆ ಮುಂದಾಗದಿದ್ದುದೇ ಪಂಚರಾಜ್ಯ ಚುನಾವಣೆಯಲ್ಲಿನ ವ್ಯತಿರಿಕ್ತ ಫಲಿತಾಂಶಕ್ಕೆ ಕಾರಣ’ ಎಂಬ ಮಾತು ಬಿಜೆಪಿಯಲ್ಲಿ ಪ್ರತಿಧ್ವನಿಸಲಾರಂಭಿಸಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಸಾಲ ಮನ್ನಾವನ್ನು ರಾಷ್ಟ್ರೀಯ ಮಟ್ಟದಲ್ಲೇ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಿಗುಟುತನಕ್ಕೆ ಬೆಲೆ: ಬಿಜೆಪಿ ಆಡಳಿತವಿರುವ ಉತ್ತರಪ್ರದೇಶ, ಛತ್ತೀಸ್​ಗಢ (ಈ ಮೊದಲು) ಮತ್ತು ಮೈತ್ರಿ ಸರ್ಕಾರವಿರುವ ಮಹಾರಾಷ್ಟ್ರ ಸೇರಿದಂತೆ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳ ಆಡಳಿತ ಇರುವ ಹಲವು ರಾಜ್ಯಗಳಲ್ಲೂ ರೈತರ ಸಾಲ ಮನ್ನಾ ಮಾಡಲಾಗಿದೆ. ಕೇಂದ್ರ ಸರ್ಕಾರವೂ ಶೇ.50 ಸಾಲಮನ್ನಾ ಮಾಡುವಂತೆ ವಿರೋಧ ಪಕ್ಷಗಳ ಆಡಳಿತದಲ್ಲಿರುವ ರಾಜ್ಯಗಳು ಒತ್ತಾಯಿಸಿದ್ದವು. ಆದರೆ, ಅದಕ್ಕೆ ಮಣೆ ಹಾಕದ ಕೇಂದ್ರದ ಜಿಗುಟುತನದಿಂದಾಗಿ ಮಧ್ಯಭಾರತದ ಮೂರು ರಾಜ್ಯಗಳಲ್ಲಿ ಬಿಜೆಪಿ ಭಾರಿ ಬೆಲೆ ತೆರಬೇಕಾಗಿದೆ ಎಂಬ ವಿಶ್ಲೇಷಣೆಯೂ ಕೇಳಿಬಂದಿದೆ.

ಕೃಷಿಕರ ಕಲ್ಯಾಣ ದೂರದ ಬೆಟ್ಟ: ಕೇಂದ್ರ ಸರ್ಕಾರ ರೈತರ ಕಲ್ಯಾಣಕ್ಕಾಗಿ ಹತ್ತಾರು ಯೋಜನೆ ಜಾರಿ ಮಾಡಿದೆ. 2022ರ ಹೊತ್ತಿಗೆ ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸುವ ವಿವಿಧ ಯೋಜನೆಗಳು, ಫಸಲ್ ಬಿಮಾ ಯೋಜನೆ, ನೂತನ ರಫ್ತು ನೀತಿ ಪ್ರಕಟಿಸಿದೆ. ಜತೆಗೆ ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸುವ ಭರವಸೆ ನೀಡಿದೆ. ಆದರೆ ಈ ಗುರಿಸಾಧನೆಗೆ ವಿಧಿಸಿಕೊಳ್ಳಲಾಗಿರುವ 2022ರ ಗಡುವು ದೀರ್ಘಾವಧಿಯಾಗಿರುವುದು ರೈತರ ತಾಳ್ಮೆ ಕೆಡಿಸಿದೆ. ಹೀಗಾಗಿ ಈ ಯೋಜನೆಗಳೆಲ್ಲವೂ 2019ರ ಚುನಾವಣೆಯಲ್ಲಿ ಪ್ರತಿಫಲ ನೀಡುವುದಿಲ್ಲ ಎಂಬ ಅಭಿಪ್ರಾಯಕ್ಕೆ ಬಂದು ರೈತರ ಸಂಕಷ್ಟ ದೂರಮಾಡಲು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂಬ ವಾದವನ್ನು ಬಿಜೆಪಿ ಚಿಂತಕರ ಚಾವಡಿ ವರಿಷ್ಠರ ಮುಂದಿಟ್ಟಿದೆ.

ಕ್ರೆಡಿಟ್ ತಪ್ಪಿಸುವ ತಂತ್ರ

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢಗಳ ಚುನಾವಣಾ ರ್ಯಾಲಿಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪಕ್ಷ ಅಧಿಕಾರಕ್ಕೆ ಬಂದ 10 ದಿನದೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಈ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಹೊಸ ಸರ್ಕಾರಗಳು ಸಾಲ ಮನ್ನಾ ಮಾಡಿದರೆ ಬಿಜೆಪಿಗೆ ಮತ್ತೆ ಹಿನ್ನಡೆಯಾಗುತ್ತದೆ. ಆದ್ದರಿಂದ ಬಿಜೆಪಿಯೇ ಮೊದಲು ಸಾಲ ಮನ್ನಾ ಘೋಷಣೆ ಮಾಡುವುದು ಸಮಂಜಸ ಜತೆಗೆ ಲೋಕಸಭಾ ಚುನಾವಣೆಯ ತಂತ್ರೋಪಾಯದಿಂದಲೂ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹೊರೆ ತಪ್ಪಿಸಲು ಪ್ಲ್ಯಾನ್

4 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದರೆ ಬೊಕ್ಕಸದ ಮೇಲೆ ಬೀಳುವ ಹೊರೆಯನ್ನು ಯಾವ ರೀತಿ ನಿಭಾಯಿಸುವುದು ಎಂಬ ಬಗ್ಗೆ ಪ್ರಧಾನಮಂತ್ರಿ ಕಚೇರಿ ಲೆಕ್ಕಾಚಾರ ಹಾಕುತ್ತಿದೆ. ಶೀಘ್ರದಲ್ಲೆ ಈ ಕುರಿತು ವಿವರ ಸಿದ್ಧವಾಗಲಿದೆ ಎಂದು ಮೂಲಗಳು ಹೇಳಿವೆ.

ಸಾಲ ಮನ್ನಾದಿಂದಲೇ ಕೈಗೆ ಗದ್ದುಗೆ

ಯುಪಿಎ ಸರ್ಕಾರ 2008ರಲ್ಲಿ -ಠಿ; 72 ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಇದರಿಂದ 2009ರ ಲೋಕಸಭಾ ಚುನಾವಣೆಯಲ್ಲೂ ಮತ್ತೆ ಅಧಿಕಾರಕ್ಕೆ ಬರುವಂತಾಯಿತು. ಬಿಜೆಪಿ ಇದೇ ಮಾರ್ಗ ಹಿಡಿದರೆ 2019ರ ಚುನಾವಣೆ ಲಾಭಕರವಾಗಬಹುದು ಎಂಬ ಅಭಿಪ್ರಾಯ ಇದೆ.

ಸಾಲ ಮನ್ನಾ ಭರವಸೆ ಒಂದೇ ಅಲ್ಲ

ಛತ್ತೀಸ್​ಗಢ ಮತ್ತು ಮಧ್ಯಪ್ರದೇಶಗಳಲ್ಲಿ ಕಾಂಗ್ರೆಸ್ ಗೆಲುವಿಗೆ ರೈತರ ಸಾಲ ಮನ್ನಾ ಭರವಸೆಯ ಜತೆಗೆ ಇನ್ನು ಹಲವು ಕಾರಣಗಳಿವೆ. 15 ವರ್ಷದಿಂದ ಅಧಿಕಾರದಲ್ಲಿದ್ದ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಬಿಜೆಪಿ ಸೋಲಿಗೆ ಕಾರಣ ಎಂದು ಆರ್​ಎಸ್​ಎಸ್​ನ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. ರಾಮ ಮಂದಿರ ನಿರ್ವಣದ ಪ್ರಮುಖ ವಿಷಯವನ್ನು ಬದಿಗೆ ಇರಿಸಬಾರದು ಎಂಬ ಸಂದೇಶವನ್ನು ಈ ಚುನಾವಣಾ ಫಲಿತಾಂಶ ನೀಡಿದೆ ಎಂದು ತಿಳಿಸಿದ್ದಾರೆ.

ಮನ್ನಾ ಒಂದೇ ಕೈಯಲ್ಲಿರುವ ಅಸ್ತ್ರ

ಇತ್ತೀಚೆಗೆ ದೆಹಲಿಯಲ್ಲಿ ಬೃಹತ್ ರ‍್ಯಾಲಿ ನಡೆಸಿದ್ದ ರೈತರು ಬೆಳೆ ಸಾಲ ಮನ್ನಾ, ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿ, ಬೆಳೆಗಳಿಗೆ ನ್ಯಾಯೋಚಿತ ಬೆಲೆ ಮುಂತಾದ ಬೇಡಿಕೆ ಸೇರಿದಂತೆ ಕೃಷಿಕರ ಬಿಕ್ಕಟ್ಟು ಪರಿಹಾರಕ್ಕೆ ಸಂಸತ್​ನ ವಿಶೇಷ ಜಂಟಿ ಅಧಿವೇಶನ ಕರೆಯುವಂತೆ ಒತ್ತಾಯಿಸಿದ್ದರು. ಕೇಂದ್ರ ಸರ್ಕಾರ ಇದಕ್ಕೂ ಪೂರಕವಾಗಿ ಸ್ಪಂದಿಸದಿರುವುದು ರೈತರ ಆಕ್ರೋಶವನ್ನು ಹೆಚ್ಚುಮಾಡಿತ್ತು. ಈಗ ಇದೆಲ್ಲ ಗೋಜಲುಗಳನ್ನು ಹೋಗಲಾಡಿಸಿ ಕೃಷಿಕರನ್ನು ಬಿಜೆಪಿಯತ್ತ ಸೆಳೆದುಕೊಳ್ಳಲು ಇರುವ ಒಂದೇ ಉಪಾಯ ಸಾಲ ಮನ್ನಾ. ಅದರಿಂದಷ್ಟೇ ಕೇಂದ್ರ ಸರ್ಕಾರದ ವರ್ಚಸ್ಸು ಹೆಚ್ಚುತ್ತದೆ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

ಆರ್ಥಿಕತೆಗೆ ಹೊಡೆತ

ಕೃಷಿಕರ ಸಾಲ ಮನ್ನಾ ಮಾಡುವುದರಿಂದ ದೇಶದ ಆರ್ಥಿಕತೆ ಮೇಲೆ ಹೊಡೆತ ಬೀಳುತ್ತದೆ. ಒಟ್ಟು ದೇಶೀಯ ಉತ್ಪನ್ನದಲ್ಲಿ (ಜಿಡಿಪಿ) ಶೇ.3.3 (-ಠಿ;6.24 ಲಕ್ಷ ಕೋಟಿ) ವಿತ್ತೀಯ ಕೊರತೆ ಇದೆ. ಕೃಷಿ ಸಾಲ ಮನ್ನಾ ಮಾಡಿದರೆ ಇದರ ಅಂತರ ಮತ್ತಷ್ಟು ವಿಸ್ತಾರವಾಗಲಿದೆ. ಈಗಾಗಲೇ -ಠಿ;10.78 ಲಕ್ಷ ಕೋಟಿ ವಸೂಲಾಗದ ಸಾಲದ ಹೊರೆಯಿಂದ ಬಸವಳಿದಿರುವ ಬ್ಯಾಂಕ್​ಗಳು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ರೈತನ ಬೆನ್ನೆಲುಬು ಮುರಿಯುವ ಸರ್ಕಾರಗಳು

ಬೆಂಗಳೂರು: ಯಾರು ಅಧಿಕಾರಕ್ಕೆ ಬಂದರೂ ರೈತರ ಪರಿಸ್ಥಿತಿ ಮಾತ್ರ ಸುಧಾರಿಸುತ್ತಿಲ್ಲ. ರೈತರ ಹಿತಕಾಯುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬರುವವರು, ಆನಂತರ ರೈತರನ್ನು ಮರೆತೇ ಬಿಡುತ್ತಾರೆ. ದೇಶದ ಬೆನ್ನೆಲುಬಾಗಿರುವ ರೈತರ ಬೆನ್ನೆಲುಬನ್ನೇ ಮುರಿದು ಮೂಲೆಗುಂಪು ಮಾಡುತ್ತಾರೆ…

-ಇದು ರೈತರ ಸ್ಥಿತಿ ಕುರಿತು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ ರೀತಿ.

ಕೋಲಾರದ ಶ್ರೀನಿವಾಸಪುರದಲ್ಲಿ ಬಿ.ಎಂ. ಪ್ರಕಾಶ ಎಂಬುವರಿಗೆ ಸೇರಿದ 4 ಎಕರೆ ಜಮೀನು ಅರಣ್ಯ ಪ್ರದೇಶವೆಂದು ತಿಳಿಸಿ ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಪೀಠದಲ್ಲಿ ಬುಧವಾರ ನಡೆಯಿತು. ಅಧಿಕಾರಕ್ಕೆ ಬರುವ ಮುನ್ನ ಎಲ್ಲರೂ ಭಾಷಣ ಮಾಡುತ್ತಾರೆ. ಆದರೆ, ನಿಜಕ್ಕೂ ರೈತರ ರಕ್ಷಣೆಗೆ ಯಾರೂ ಮುಂದಾಗುವುದಿಲ್ಲ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.

ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಶ್ರೀನಿವಾಸಪುರ ಗ್ರಾಮದಲ್ಲಿ ಸರ್ವೆ ನಂ. 84ರಲ್ಲಿ 4.38 ಎಕರೆ ಜಮೀನು ಪ್ರಕಾಶ್​ಗೆ ಸೇರಿದೆ. 1952ರಲ್ಲಿ ಈ ಜಮೀನನ್ನು ಪ್ರಕಾಶರ ತಾತನಿಗೆ ಕಂದಾಯ ಇಲಾಖೆ ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಿತ್ತು. ಅಂದಿನಿಂದಲೂ ಈ ಜಾಗ ಅರ್ಜಿದಾರರ ಕುಟುಂಬದ ಸ್ವಾಧೀನದಲ್ಲಿದೆ. ಸದ್ಯ ಅಲ್ಲಿ ಮಾವಿನ ತೋಟವಿದೆ. 2007ರಲ್ಲಿ ಜಮೀನು ಅರಣ್ಯ ಇಲಾಖೆ ಸೇರಿದೆ ಎಂದು ಆದೇಶ ಹೊರಡಿಸಿತು ಎಂದು ದೂರಿದರು.

ಪೀಠ ತರಾಟೆ: ಸರ್ಕಾರಿ ವಕೀಲರನ್ನು ಈ ಕುರಿತು ಪ್ರಶ್ನಿಸಿದ ಪೀಠ, 1952ರಿಂದಲೂ ವಿವಾದಿತ ಜಾಗವು ಅರ್ಜಿದಾರರ ಸ್ವಾಧೀನದಲ್ಲಿರುವಾಗ ಅದು ಅರಣ್ಯ ಪ್ರದೇಶವೆಂದು ಹೇಗೆ ನಿರ್ಧಾರಕ್ಕೆ ಬಂದಿರಿ? ಇಷ್ಟು ವರ್ಷ ನಿಮ್ಮ ಅಧಿಕಾರಿಗಳು ಏನು ಮಾಡುತ್ತಿದ್ದರು? ಮೊದಲು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ತರಾಟೆಗೆ ತೆಗೆದುಕೊಂಡಿತು. ಬಳಿಕ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಕಂದಾಯ ಇಲಾಖೆ ಕಾರ್ಯದರ್ಶಿ, ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿ, ಕೋಲಾರ ಉಪ ಅರಣ್ಯ ಸಂರಕ್ಷಣಾ ಧಿಕಾರಿಗಳಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

Leave a Reply

Your email address will not be published. Required fields are marked *