ಪೊಲೀಸ್​ ಠಾಣೆ ಎದುರು ಧರಣಿ ಕುಳಿತ ಪ್ರಧಾನಿ ಮೋದಿಯವರ ಸಹೋದರ ಪ್ರಲ್ಹಾದ್​ ಮೋದಿ

ಜೈಪುರ: ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಲ್ಹಾದ್ ಮೋದಿ ಜೈಪುರ-ಅಜ್ಮರ್​ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಗ್ರು ಪೊಲೀಸ್​ ಠಾಣೆಯೆದುರು ಕುಳಿತು ಸುಮಾರು ಒಂದು ತಾಸು ಪ್ರತಿಭಟನೆ ನಡೆಸಿದರು.

ಪ್ರಲ್ಹಾದ್​ ಮೋದಿಯವರು ಮಂಗಳವಾರ ಜೈಪುರಕ್ಕೆ ತೆರಳುವವರಿದ್ದರು. ಅವರಿಗೆ ಪೊಲೀಸ್​ ಭದ್ರತೆ ಕೊಡಬೇಕಿತ್ತು. ಅದರಂತೆ ಇಬ್ಬರು ಭದ್ರತಾ ಅಧಿಕಾರಿಗಳು ಬಗ್ರು ಠಾಣೆಯಲ್ಲಿ ಪ್ರಲ್ಹಾದ್ ಮೋದಿಯವರಿಗೋಸ್ಕರ ಕಾಯುತ್ತಿದ್ದರು. ನಿಯಮದ ಪ್ರಕಾರ ಆ ಇಬ್ಬರು ಅಧಿಕಾರಿಗಳು ಪ್ರಲ್ಹಾದ್​ ಅವರ ವಾಹನದಲ್ಲೇ ಕುಳಿತು ಅವರೊಂದಿಗೆ ಹೋಗಬೇಕು. ಆದರೆ ಪ್ರಲ್ಹಾದ್​ ಮೋದಿ ಇದಕ್ಕೆ ಒಪ್ಪದೆ ಧರಣಿ ಕುಳಿತರು.

ಈ ಬಗ್ಗೆ ಮಾಹಿತಿ ನೀಡಿರುವ ಜೈಪುರ ಪೊಲೀಸ್​ ಆಯುಕ್ತ ಆನಂದ್​ ಶ್ರೀವಾಸ್ತವ್​, ಪ್ರಲ್ಹಾದ್​ ಮೋದಿಯವರ ಭದ್ರತೆಗಾಗಿ ಇಬ್ಬರು ಅಧಿಕಾರಿಗಳನ್ನು ನೀಡುತ್ತಿರುವ ಬಗ್ಗೆ ಆದೇಶ ತೋರಿಸಿದರೂ ಅವರು ಆ ಇಬ್ಬರು ಅಧಿಕಾರಿಗಳನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಲು ಒಪ್ಪಲಿಲ್ಲ. ಯಾವ ಕಾರಣಕ್ಕೂ ಅವರು ನನ್ನ ವಾಹನದಲ್ಲಿ ಬೇಡ. ಬೆಂಗಾವಲಾಗಿ ಬರುವವರಿಗೆ ಬೇರೆ ವಾಹನ ಕೊಡಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬಳಿಕ ನಾವು ಅವರ ಮನವೊಲಿಕೆ ಮಾಡಿದ್ದೇವೆ. ನಂತರ ನಿಯಮದ ಪ್ರಕಾರ ಆ ಇಬ್ಬರು ಪೊಲೀಸ್​ ಅಧಿಕಾರಿಗಳು ಪ್ರಲ್ಹಾದ್ ಮೋದಿಯವರ ವಾಹನದಲ್ಲೇ ತೆರಳಿದ್ದಾರೆ ಎಂದು ತಿಳಿಸಿದ್ದಾರೆ.