ಪಟನಾ ಸಮಾವೇಶದ ಭಾಷಣಕ್ಕೆ ಟೆಲಿಪ್ರಾಂಪ್ಟರ್​ ಬಳಸಿದ ಮೋದಿ!

ಪಟನಾ: ವಾಕ್ಚಾತುರ್ಯ, ಆಕ್ರಮಣಕಾರಿ ಭಾಷಣಗಳಿಗೆ ಖ್ಯಾತರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪಟನಾದಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಷಣಕ್ಕಾಗಿ ಟೆಲಿಪ್ರಾಂಪ್ಟರ್​ ಬಳಕೆ ಮಾಡಿದ್ದಾರೆ.

ಸುದ್ದಿಗಾರರಿಗೆ ನಿಗದಿ ಮಾಡಿದ್ದ ಸ್ಥಳದಿಂದ ಗೋಚರಿಸದ ಟೆಲಿಪ್ರಾಂಪ್ಟರ್​​, ಬಿಹಾರದ ಸಚಿವ ಮಂಗಲ್​ ಪಾಂಡೆ ತಮ್ಮ ಟ್ವಿಟರ್​ ಖಾತೆಯಲ್ಲಿ ಪ್ರಕಟಿಸಿರುವ ಸಮಾವೇಶದ ಮೋದಿ ಭಾಷಣದ ಫೋಟೋಗಳಲ್ಲಿ ಅದು ಪತ್ತೆಯಾಗಿದೆ. ಮೋದಿ ಅವರ ಅತ್ಯಂತ ಹತ್ತಿರದ ಫೋಟೋಗಳನ್ನು ಮಂಗಲ್​ ಪಾಂಡೆ ಟ್ವಿಟರ್​ನಲ್ಲಿ ಪ್ರಕಟಿಸಿದ್ದರು. ಅದರಲ್ಲಿ, ಟೆಲಿಪ್ರಾಂಪ್ಟರ್​ ಮೋದಿ ಎಡಭಾಗದಲ್ಲಿ ಇರುವುದು ಪತ್ತೆಯಾಗಿದೆ. ಅಲ್ಲದೆ ಮೋದಿ ಅದನ್ನು ನೋಡಿಕೊಂಡು ಮಾತನಾಡುತ್ತಿರುವುದು ಸ್ಪಷ್ಟವಾಗಿದೆ.

ಈ ಫೋಟೋಗಳನ್ನು ನೋಡುತ್ತಲೇ ಜೈಲಿನಿಂದಲೇ ಟ್ವೀಟ್​ ಮಾಡಿರುವ ಆರ್​ಜೆಡಿ ಮುಖ್ಯಸ್ಥ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್​ ಯಾದವ್​, ” ತಮ್ಮ ವಿಫಲ ಕಾರ್ಯಕ್ರಮಗಳಿಂದ ವಿಚಲಿತರಾಗಿರುವ ಮೋದಿ, ಸುಳ್ಳುಗಳನ್ನು ಹೇಳುತ್ತಿದ್ದಾರೆ. ಬಿಹಾರದಲ್ಲಿ ಸೋಲುವ ಮುನ್ಸೂಚನೆ ಇರುವ ಕಾರಣ ಮೋದಿ, ಆತ್ಮವಿಶ್ವಾಸ ಕಳೆದುಕೊಂಡು ಟೆಲಿಪ್ರಾಂಪ್ಟರ್​ ನೋಡಿಕೊಂಡು ಭಾಷಣ ಮಾಡಲಾರಂಭಿಸಿದ್ದಾರೆ,” ಎಂದು ಕಿಡಿಕಾರಿದ್ದಾರೆ.

ಮೋದಿ ಅವರು ಇಂಗ್ಲಿಷ್​ನಲ್ಲಿ ಭಾಷಣ ಮಾಡುವಾಗ ಸಾಮಾನ್ಯವಾಗಿ ಟೆಲಿಪ್ರಾಂಪ್ಟರ್​ಗಳನ್ನು ಬಳಸುತ್ತಾರೆ ಎನ್ನಲಾಗಿದೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಬಿಜೆಪಿ ಮೂಲಗಳು, ಅಂಕಿ ಅಂಶಗಳನ್ನು ನೆನಪಿಸಲಿಕ್ಕಾಗಿ ಮಾತ್ರ ಟೆಲಿಪ್ರಾಂಪ್ಟರ್​ ಅನ್ನು ಮೋದಿ ಬಳಸಿದ್ದಾರೆ ಎಂದು ಹೇಳಿದೆ. ಇನ್ನೊಂದು ಮೂಲಗಳ ಪ್ರಕಾರ, ಇದೇ ವರ್ಷದ ಜನವರಿಯಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಆಯೋಗದ ಸಭೆಯಲ್ಲಿ ಭಾಷಣಕ್ಕಾಗಿ ಮೋದಿ ಟೆಲಿಪ್ರಾಂಪ್ಟರ್​ ಬಳಕೆ ಮಾಡಿದ್ದರು ಎನ್ನಲಾಗಿದೆ.