2022ಕ್ಕೆ ಮುನ್ನ ಮಾನವಸಹಿತ ಅಂತರಿಕ್ಷಯಾನ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮಾನವಸಹಿತ ಗಗನಯಾನ ಕನಸನ್ನು 2022ರ ಹೊತ್ತಿಗೆ ನನಸು ಮಾಡುವ ಮೂಲಕ ಅಂತರಿಕ್ಷದಲ್ಲಿ ತ್ರಿವರ್ಣ ಧ್ವಜ ಹಾರಾಡುವಂತೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ದೆಹಲಿ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಭಾರತ ಸ್ವತಂತ್ರಗೊಂಡು 75 ವರ್ಷ ಪೂರ್ಣಗೊಳ್ಳುವ ಮುನ್ನ ಅಂದರೆ 2022ರ ಒಳಗಾಗಿ ಬಾಹ್ಯಾಕಾಶಕ್ಕೆ ಮಾನವಸಹಿತ ಗಗನನೌಕೆ ಕಳಿಸುವಂತಾಗಬೇಕು. ರಾಷ್ಟ್ರಧ್ವಜ ಹಿಡಿದು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಬೇಕು ಎಂಬುದು ನಮ್ಮ ಕನಸಾಗಿದೆ ಎಂದರು.

ಮಂಗಳಯಾನ ಸಹಿತ ಹಲವು ಯೋಜನೆಗಳ ಮೂಲಕ ಭಾರತದ ವಿಜ್ಞಾನಿಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ನಮ್ಮ ದೇಶದ ವ್ಯಕ್ತಿಯೇ ಬಾಹ್ಯಾಕಾಶಕ್ಕೆ ತೆರಳುವಂತಾಗಬೇಕು. ಇದು ಯಶಸ್ವಿಯಾದರೆ ಬಾಹ್ಯಾಕಾಶಕ್ಕೆ ಮಾನವರನ್ನು ಕಳಿಸಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ ಎಂದು ಮೋದಿ ಹೇಳಿದರು.

ರಾಕೇಶ್ ಶರ್ಮಾ ಭಾರತದ ಮೊದಲ ಗಗನಯಾತ್ರಿ: ಈವರೆಗೆ ವಿಶ್ವದ ಮೂರು ರಾಷ್ಟ್ರಗಳಷ್ಟೇ ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವಲ್ಲಿ ಯಶಸ್ವಿಯಾಗಿವೆ. ಅವೆಂದರೆ-ರಷ್ಯಾ (1962), ಅಮೆರಿಕ (1968), ಚೀನಾ (2003). ರಾಕೇಶ್ ಶರ್ಮಾ ಭಾರತದ ಮೊದಲ ಗಗನಯಾತ್ರಿ. 1984 ಏಪ್ರಿಲ್ 2ರಂದು ಸೋವಿಯತ್ ರಾಕೆಟ್ ಸೂಟ್ ಟಿ-2ನಲ್ಲಿ ತಂಡದಲ್ಲಿ ಅವರಿದ್ದರು.


ಶುರುವಾಗಿದೆ ಯೋಜನೆ ಸಿದ್ಧತೆ

ಬೆಂಗಳೂರು: 2022ರ ವೇಳೆಗೆ ಮಾನವಸಹಿತ ಬಾಹ್ಯಾಕಾಶ ನೌಕೆ ಉಡಾವಣೆಗೆ ಇಸ್ರೋ ಯೋಜನೆ ರೂಪಿಸಿದ್ದು, ಇದಕ್ಕೆ ಸಂಬಂಧಿಸಿದ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕೆಲಸ ಈಗಾಗಲೇ ಶುರುವಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಘೋಷಣೆ ಬೆನ್ನಲ್ಲೇ ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಯೋಜನೆ ಕುರಿತ ಮಾಹಿತಿ ಹಂಚಿಕೊಂಡರು.

ಇಡೀ ದೇಶ ಹೆಮ್ಮಪಡುವ ಸಂಗತಿಯನ್ನು ಪ್ರಧಾನಿ ಘೋಷಿಸಿ ದ್ದಾರೆ. 2022 ಅಥವಾ ಅದಕ್ಕೂ ಮೊದಲು ಮಾನವಸಹಿತ ಬಾಹ್ಯಾಕಾಶ ನೌಕೆ ಉಡಾವಣೆ ಮಾಡಲಾಗುತ್ತದೆ. ಈ ಯೋಜನೆ ಇಸ್ರೋ ಪಾಲಿಗೆ ಸವಾಲು ಹಾಗೂ ಘನತೆಯ ವಿಚಾರವಾಗಿದೆ. ಅಂತರಿಕ್ಷ ಯಾನಿಗಳಿಗೆ ಬೇಕಾದ ಜೀವರಕ್ಷಕ ಕವಚವನ್ನು ನಾವೇ ಅಭಿವೃದ್ಧಿಪಡಿಸುತ್ತೇವೆ. 10 ಸಾವಿರ ಕೋಟಿ ರೂ.ಗಿಂತ ಕಡಿಮೆ ವೆಚ್ಚದಲ್ಲಿ ಯೋಜನೆ ಪೂರೈಸುವ ಗುರಿ ಹೊಂದಿದ್ದೇವೆ ಎಂದು ಶಿವನ್ ಹೇಳಿದರು.

ತಂತ್ರಜ್ಞಾನ ಕ್ಷೇತ್ರ ಉನ್ನತ ದರ್ಜೆಗೆ: ಮಾನವಸಹಿತ ಅಂತರಿಕ್ಷ ಯಾತ್ರೆಯಿಂದ ವಿಶ್ವವೇ ನಮ್ಮ ಕಡೆ ತಿರುಗಿ ನೋಡಲಿದೆ. ಬಾಹ್ಯಾಕಾಶ ನೌಕೆಯಲ್ಲಿ ಯಾತ್ರೆ ಕೈಗೊಳ್ಳುವವರು ಯಾರು ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಆದರೆ, ನಮ್ಮವರೇ ಹೋಗುವುದಂತೂ ಖಚಿತ. ಈಗಾಗಲೇ ಸಿಬ್ಬಂದಿ ಘಟಕ, ತುರ್ತು ಸಂದರ್ಭದಲ್ಲಿ ಪಾರಾಗುವ ವ್ಯವಸ್ಥೆ (ಎಸ್ಕೇಪ್ ಸಿಸ್ಟಮ್ ಅಭಿವೃದ್ಧಿಪಡಿಸಿದ್ದೇವೆ. ಈ ಯೋಜನೆಯಲ್ಲಿ ಜಿಎಸ್​ಎಲ್​ವಿ ಮಾರ್ಕ್ 3 ವಾಹನವನ್ನು ಉಡಾವಣೆಗೆ ಉಪಯೋಗ ಮಾಡಿಕೊಳ್ಳಲಾಗುವುದು. ಈ ನೌಕೆ ಉಡಾವಣೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಮತ್ತಷ್ಟು ಉನ್ನತ ದರ್ಜೆಗೆ ಏರಲಿದೆ ಎಂದು ಶಿವನ್ ವಿಶ್ವಾಸ ವ್ಯಕ್ತಪಡಿಸಿದರು.

7 ದಿನ ಅಂತರಿಕ್ಷದಲ್ಲಿ: ಇಸ್ರೋ ಮಾನವಸಹಿತ ನೌಕೆ ಭೂಮಿಯಿಂದ 300 -400 ಕಿ.ಮೀ ಎತ್ತರದಲ್ಲಿ 7 ದಿನ ಅಂತ ರಿಕ್ಷದಲ್ಲಿ ಇರಲಿದೆ. ಉಡಾವಣಾ ತಂತ್ರಜ್ಞಾನ ವನ್ನು ಭಾರತದಲ್ಲೇ ತಯಾರಿಸಲು ಇಸ್ರೋ ನಿರ್ಧರಿಸಿದೆ.

ಮೊದಲು ಪ್ರಾಣಿ ರವಾನೆ: ಮಾನವಸಹಿತ ಬಾಹ್ಯಾಕಾಶ ನೌಕೆ ಉಡಾವಣೆಗೂ ಮುನ್ನ ಪ್ರಾಣಿಗಳನ್ನಿರಿಸಿ ಅಂತರಿಕ್ಷಕ್ಕೆ ನೌಕೆ ಕಳುಹಿಸುವ ಕುರಿತೂ ಚರ್ಚೆ ನಡೆದಿದೆ. ನೌಕೆ ಉಡಾವಣೆ ಯೋಜನೆಗೆ ಎಲ್ಲ ಸಿದ್ಧತೆ ನಡೆದಿದೆ. ಅಧಿಕೃತವಾಗಿ ಅನುಮತಿ ತೆಗೆದುಕೊಳ್ಳುವುದಷ್ಟೆ ಬಾಕಿ ಉಳಿದಿದೆ. 3 ಗಗನಯಾತ್ರಿಗಳು ಅಂತರಿಕ್ಷ ಯಾನ ನಡೆಸಲಿದ್ದಾರೆ.