ಪ್ರತಿ ವರ್ಷ ನನಗೆ ಕುರ್ತಾಗಳನ್ನು ದೀದಿಯೇ ಆಯ್ಕೆ ಮಾಡಿ ಕಳುಹಿಸುತ್ತಾರೆ: ಮೋದಿ

ನವದೆಹಲಿ: ರಾಜಕೀಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬದ್ಧ ವೈರಿ ಎಂದೇ ಗುರುತಿಸಿಕೊಂಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕುರಿತು ಮೋದಿ ಅವರು ಅಚ್ಚರಿಯ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಪ್ರತಿ ವರ್ಷ ತಮಗೆ ಬೇಕಾದ ಕುರ್ತಾಗಳನ್ನು ಮಮತಾ ದೀದಿ ಸ್ವತಃ ಆಯ್ಕೆ ಮಾಡಿ, ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ.

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅವರಿಗೆ ನೀಡಿದ ಸಂದರ್ಶನದಲ್ಲಿ ಮೋದಿ ಹಲವು ಸ್ವಾರಸ್ಯಕರ ಅಂಶಗಳನ್ನು ಹಂಚಿಕೊಂಡಿದ್ದಾರೆ. ಅಂದಾಜು 40 ನಿಮಿಷಗಳ ಕಾಲ ರಾಜಕೀಯೇತರ ಸಂಗತಿಗಳ ಬಗ್ಗೆ, ತಮ್ಮ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಕುರ್ತಾಗಳನ್ನು ಮಾತ್ರವಲ್ಲ, ಪಶ್ಚಿಮ ಬಂಗಾಳದ ಅತ್ಯಂತ ಜನಪ್ರಿಯವಾದ ಸಿಹಿ ಖಾದ್ಯಗಳನ್ನು ಕೂಡ ಮಮತಾ ದೀದಿ ತಮಗೆ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಪ್ರಚಾರ ಸಭೆಗಳಲ್ಲಿ ಮಮತಾ ಬ್ಯಾನರ್ಜಿ ಮತ್ತು ನರೇಂದ್ರ ಮೋದಿ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಲೇ ಇದ್ದಾರೆ. ಮೋದಿ ಅವರು ಮಮತಾ ಅವರನ್ನು ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವ ಸ್ಪೀಡ್​ ಬ್ರೇಕರ್​ ದೀದಿ ಎಂದು ಕರೆದರೆ, ಮಮತಾ ಬ್ಯಾನರ್ಜಿ ಮೋದಿ ಅವರನ್ನು ಎಕ್ಸ್​ಪೈರಿ ಬಾಬು ಎಂದು ಟೀಕಿಸುತ್ತಿದ್ದಾರೆ.

ಒಬಾಮಾ ಕೂಡ ಇದೇ ಪ್ರಶ್ನೆ ಕೇಳುತ್ತಾರೆ

ತಾವು ಕೇವಲ 24 ಗಂಟೆಗಳ ಪೈಕಿ ಕೇವಲ 3 ಗಂಟೆ ನಿದ್ರಿಸುವ ಕುರಿತು ಪ್ರಧಾನಿ ಮೋದಿ ಸ್ವಾರಸ್ಯಕರ ಮಾಹಿತಿ ಹಂಚಿಕೊಂಡಿದ್ದಾರೆ. ‘ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮ ಅವರನ್ನು ಭೇಟಿ ಮಾಡಿದಾಗಲೆಲ್ಲ ಅವರು ಇದೇ ಪ್ರಶ್ನೆ ಕೇಳುತ್ತಾರೆ. ನಾನು ಕೇವಲ 3 ಗಂಟೆ ನಿದ್ದೆ ಮಾಡಿಯೂ, ದೈನಂದಿನ ಕೆಲಸದ ಒತ್ತಡವನ್ನು ಹೇಗೆ ನಿಭಾಯಿಸುತ್ತೇನೆ ಎಂದು ಕೇಳುವುದಾಗಿ ಹೇಳಿದ್ದಾರೆ.

ತಾಯಿಯೇ ನನಗೆ ಹಣ ನೀಡುತ್ತಾರೆ

ನಿಮ್ಮ ತಾಯಿಗೆ ನೀವು ಹಣ ಕೊಡುತ್ತೀರಾ ಎಂಬ ಅಕ್ಷಯ್​ ಕುಮಾರ್​ ಪ್ರಶ್ನೆಗೆ ಮೋದಿ, ‘ನನ್ನ ತಾಯಿಗೆ ನಾನು ಹಣ ಕಳುಹಿಸುವುದಿಲ್ಲ, ಅವರನ್ನು ನಾನು ಭೇಟಿ ಮಾಡಿದಾಗಲೆಲ್ಲಾ ಅವರೇ ನನಗೆ ಹಣ ನೀಡಿ ಆಶೀರ್ವದಿಸುತ್ತಾರೆ. ಜತೆಗೆ ಅವರು ದೆಹಲಿಯಲ್ಲಿ ನನ್ನೊಂದಿಗೆ ಇರಲು ಒಪ್ಪುವುದಿಲ್ಲ. ನಾನು ಅಲ್ಲಿ ಬಂದು ಏನು ಮಾಡಲಿ, ನಾನು ನಿನ್ನೊಂದಿಗೆ ಏನು ಮಾತನಾಡಲಿ ಎಂದು ಕೇಳುತ್ತಾರೆ. ಜತೆಗೆ ತಡರಾತ್ರಿ ನಾನು ಮನೆಗೆ ವಾಪಸ್​ ಬರುವುದನ್ನು ನೋಡಿ ತಾಯಿ ಬೇಸರಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.