ರಾಮನಿಗಿಲ್ಲ ಸುಗ್ರೀವಾಜ್ಞೆ

ನವದೆಹಲಿ: ಸುಪ್ರೀಂಕೋರ್ಟ್​ನಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಿುಸುವ ವಿಚಾರಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯಂಥ ನಿರ್ಣಯ ಕೈಗೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಲೋಕಸಭೆ ಚುನಾವಣೆಗೆ ಮೊದಲೇ ಸುಗ್ರೀವಾಜ್ಞೆಯ ಸಹಕಾರದೊಂದಿಗೆ ರಾಮಮಂದಿರ ನಿರ್ವಣಕ್ಕೆ ಮುಹೂರ್ತ ಕೂಡಿಬರಬಹುದೆಂಬ ಹಿಂದು ಸಂಘಟನೆಗಳ ನಿರೀಕ್ಷೆಗೆ ಹಿನ್ನಡೆ ಆಗಿದೆ.

ಹೊಸ ವರ್ಷದ ಸಂದರ್ಭದಲ್ಲಿ ಎಎನ್​ಐ ಸುದ್ದಿಸಂಸ್ಥೆಗೆ ವಿಶೇಷ ಸಂದರ್ಶನ ನೀಡಿರುವ ಮೋದಿ, ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿನ ಸಾಲಮನ್ನಾ, ಸರ್ಜಿಕಲ್ ಸ್ಟ್ರೈಕ್, ರಫೇಲ್ ಮುಂತಾದ ವಿಷಯಗಳ ಕುರಿತು ವಿವರವಾಗಿ ಮಾತನಾಡಿದ್ದಾರೆ.

‘ಸುಪ್ರೀಂಕೋರ್ಟ್​ನಲ್ಲಿ ಅಯೋಧ್ಯೆ ಪ್ರಕರಣದ ಅರ್ಜಿ ವಿಚಾರಣೆ ನಡೆಯುತ್ತಿದೆ. ಮೊದಲು ಕಾನೂನು ಪ್ರಕ್ರಿಯೆ ಅಂತಿಮಗೊಳ್ಳಲಿ. ಬಳಿಕವಷ್ಟೇ ಸುಗ್ರೀವಾಜ್ಞೆಯ ಅವಶ್ಯಕತೆ ಕುರಿತು ಸರ್ಕಾರ ಆಲೋಚಿಸುತ್ತದೆ ಮತ್ತು ತನ್ನ ಜವಾಬ್ದಾರಿ ನಿಭಾಯಿಸುತ್ತದೆ. ಬಿಜೆಪಿ ಪ್ರಣಾಳಿಕೆಯಲ್ಲೂ ಮಂದಿರ ವಿಷಯದ ಬಗ್ಗೆ ಸಂವಿಧಾನಾತ್ಮಕವಾಗಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಉಲ್ಲೇಖಿಸಿದ್ದೆವು’ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.

ರಾಮಮಂದಿರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಕಾಂಗ್ರೆಸ್ ಕೇಂದ್ರದ ವಿರುದ್ಧ ಮಾತನಾಡುತ್ತದೆ. ಜತೆಗೆ ಸುಪ್ರೀಂಕೋರ್ಟ್​ನಲ್ಲಿನ ಪ್ರಕ್ರಿಯೆಗೂ ಅಡ್ಡಗಾಲು ಹಾಕುತ್ತಿದೆ. ಪದೇಪದೆ ಅಡ್ಡಿಪಡಿಸುವುದನ್ನು ಬಿಟ್ಟು ತ್ವರಿತ ವಿಚಾರಣೆಗೆ ಸಹಕರಿಸಬೇಕೆಂದು ಮೋದಿ ಮನವಿ ಮಾಡಿದರು.

ಮಾತುಕತೆ ಅಥವಾ ಅಗತ್ಯ ಕಾನೂನಿನ ಮೂಲಕ ಮಂದಿರ ನಿರ್ವಿುಸುವುದಾಗಿ 1989ರ ಪಾಲಂಪುರ ಬಿಜೆಪಿ ಅಧಿವೇಶನ ನಿರ್ಣಯಕ್ಕೆ ಮೋದಿಯವರ ಈ ಹೇಳಿಕೆ ಅನುರೂಪವಾಗಿದೆ. ಸಂವಿಧಾನಿಕವಾಗಿರುವ ಎಲ್ಲ ಮಾರ್ಗ ಅನುಸರಿಸಿ ಮಂದಿರ ನಿರ್ವಿುಸುವುದಾಗಿ ಬಿಜೆಪಿ 2014ರ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಅವರ ಮೇಲೆ ನಂಬಿಕೆಯಿಟ್ಟು ಭಾರತದ ಜನತೆ ಬಹುಮತ ನೀಡಿದ್ದರು. ಈ ಅವಧಿಯಲ್ಲಿ ಸರ್ಕಾರ ತನ್ನ ಭರವಸೆ ಈಡೇರಿಸುತ್ತದೆ ಎಂಬ ಅಪೇಕ್ಷೆ ಭಾರತೀಯರಲ್ಲಿದೆ.

| ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ಸಹ ಸರಕಾರ್ಯವಾಹ

 

ಮೋದಿ ಮನದಾಳ…

  • ರಫೇಲ್ ಯುದ್ಧ ವಿಮಾನ ಖರೀದಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.
  • ಆರ್​ಬಿಐ ಗವರ್ನರ್ ಉರ್ಜಿತ್ ರಾಜೀನಾಮೆ ಪೂರ್ವನಿರ್ಧರಿತ. ಮುಂದಿನ ಚುನಾವಣೆ ಮೋದಿ ವರ್ಸಸ್ ಮಹಾಮೈತ್ರಿಯಲ್ಲ. ದೇಶದ ಜನತೆ ವರ್ಸಸ್ ಮಹಾಮೈತ್ರಿ
  • ನೋಟು ಅಮಾನ್ಯೀಕರಣ ಯೋಜಿತ ನಿರ್ಧಾರ. ಇದರಿಂದ ಕೆಲವರಿಗೆ ಸಮಸ್ಯೆಯಾಗಿದ್ದು ನಿಜ. ರೈಲು ಹಳಿ ಬದಲಿಸಿದಾಗ ವೇಗ ಕಡಿಮೆಯಾಗುವುದು ಸಾಮಾನ್ಯ.
  • ದೇಶದಲ್ಲಿ ಕಾನೂನು ಕಠಿಣವಾದಾಗ ಆರ್ಥಿಕ ವಂಚಕರು ದೇಶ ಬಿಟ್ಟು ಹೋಗುವುದು ಸಾಮಾನ್ಯ. ಈ ಹಿಂದಿನ ಸರ್ಕಾರಗಳು ಲೂಟಿ ಮಾಡಿ, ರಕ್ಷಣೆಗೆ ನಿಂತಿದ್ದವು. ಅವರೆಲ್ಲರನ್ನೂ ಕಾನೂನು ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ಕರೆತರುವ ಪ್ರಯತ್ನ ನಡೆದಿದೆ.
  • ಹಣದುಬ್ಬರವನ್ನು ಶೇ.2-3ರ ಮಿತಿಯಲ್ಲಿಟ್ಟಿರುವುದು ಮಧ್ಯಮ ವರ್ಗಕ್ಕೆ ಸಿಗುತ್ತಿರುವ ದೊಡ್ಡ ಲಾಭವಾಗಿದೆ.

 

ನನ್ನ ಕೆಲಸ ತೃಪ್ತಿಕರವಾಗಿತ್ತೋ ಇಲ್ಲವೋ ಎನ್ನುವುದನ್ನು ನಿರ್ಧರಿಸುವ ಕೆಲಸವನ್ನು ಜನರಿಗೆ ಬಿಡುತ್ತೇನೆ. ನಾನು ಸಾಮಾನ್ಯ ಜನರ ಪ್ರತಿನಿಧಿಯಾಗಿ ಕೆಲಸ ಮಾಡಿದ್ದೇನೆ. ಪ್ರತಿಯೊಂದು ಕ್ಷಣವನ್ನು ಖುಷಿಯಿಂದ ಕಳೆದಿದ್ದೇನೆ. ಜನರಿಗಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ.

| ನರೇಂದ್ರ ಮೋದಿ, ಪ್ರಧಾನಿ

 

ಸಾಲಮನ್ನಾ ರಾಜಕೀಯ ಸ್ಟಂಟ್

ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಜಾರಿಯಾಗಿರುವ ಸಾಲಮನ್ನಾ ಯೋಜನೆ ಕುರಿತು ಮೋದಿ ಮತ್ತೆ ವಾಗ್ದಾಳಿ ನಡೆಸಿದರು. ‘ಈ ಸಾಲಮನ್ನಾ ಯೋಜನೆಯ ವ್ಯಾಪ್ತಿ ಹಾಗೂ ಎಷ್ಟು ಫಲಾನುಭವಿಗಳಿಗೆ ತಲುಪಿದೆ ಎನ್ನುವುದನ್ನು ನೋಡಿದರೆ ಸತ್ಯ ಗೊತ್ತಾಗುತ್ತದೆ. ಅಷ್ಟಕ್ಕೂ ಇಲ್ಲಿ ಲೇವಾದೇವಿದಾರರಿಂದ ಪಡೆದ ಸಾಲ ಲೆಕ್ಕಕ್ಕೆ ಬರುವುದಿಲ್ಲ. ಬ್ಯಾಂಕ್​ಗಳ ಸಾಲಕ್ಕಿಂತ ಈ ಖಾಸಗಿ ಸಾಲವು ರೈತರ ಸಂಕಷ್ಟಕ್ಕೆ ಕಾರಣವಾಗಿದೆ. ಆದರೂ ರೈತರ ಎಲ್ಲ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳಿಕೊಂಡು ಓಡಾಡುವುದಕ್ಕೆ ಏನು ಹೇಳಲು ಸಾಧ್ಯ? ಜನರಿಗೆ ಸುಳ್ಳು ಹೇಳುವುದು ಹಾಗೂ ದಾರಿ ತಪ್ಪಿಸುವುದನ್ನು ರಾಜಕೀಯ ಸ್ಟಂಟ್ ಹಾಗೂ ಲಾಲಿಪಾಪ್ ಎನ್ನಬೇಕಾಗುತ್ತದೆ. ದೇವಿಲಾಲ್ ಉಪಪ್ರಧಾನಿಯಾಗಿದ್ದಾಗಿನಿಂದಲೂ ಭಾರತದಲ್ಲಿ ಸಾಲಮನ್ನಾ ಮಾಡಲಾಗುತ್ತಿದೆ. ಈ ಹಿಂದೆ ಲೋಕಸಭೆ ಚುನಾವಣೆಗಾಗಿ ಯುಪಿಎ ಸರ್ಕಾರ ಕೂಡ ಸಾಲಮನ್ನಾ ಮಾಡಿತ್ತು. ಆದರೆ ಇದರಿಂದ ರೈತರ ಸಾಲದ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ನಾವು ರಾಜ್ಯ ಸರ್ಕಾರಗಳ ಸಾಲಮನ್ನಾ ಯೋಜನೆಗೆ ಅಡ್ಡಿಯಾಗುವುದಿಲ್ಲ. ಆದರೆ ರೈತರು ಸಾಲ ಮಾಡದೇ ಕೃಷಿ ಮಾಡುವ ರೀತಿ ಯೋಜನೆ ರೂಪಿಸುವುದು ನಮ್ಮ ಉದ್ದೇಶ. ರೈತರಿಗೆ ಕೃಷಿಯನ್ನು ಇನ್ನಷ್ಟು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇನ್ನೆಷ್ಟು ವರ್ಷಗಳ ಕಾಲ ಹೀಗೆ ಸಾಲಮನ್ನಾ ಮಾಡುತ್ತಿರುವುದು? ರೈತರನ್ನು ಆರ್ಥಿಕವಾಗಿ ಗಟ್ಟಿಗೊಳಿಸುವುದು ಈ ಕಾಂಗ್ರೆಸ್ಸಿಗರಿಗೆ ಬೇಕಿಲ್ಲ’ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದರು.


ಮೋದಿ ಮನ್ ಕೀ ಬಾತ್…

ವರ್ಷದ ಮೊದಲ ದಿನ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹತ್ತಾರು ವಿಚಾರಗಳ ಕುರಿತು ಮನದಾಳ ಹಂಚಿಕೊಂಡಿದ್ದಾರೆ. ಪಕ್ಷ ಹಾಗೂ ತಮ್ಮ ವಿರುದ್ಧ ಕೇಳಿಬರುತ್ತಿದ್ದ ಟೀಕೆಗಳಿಗೂ ಅವರು ಉತ್ತರ ನೀಡಿದ್ದಾರೆ. ರಾಜಕೀಯ, ಸರ್ಕಾರದ ಧ್ಯೇಯ, ಪ್ರಚಲಿತ ವಿಚಾರಗಳ ಕುರಿತು ಅವರು ನೀಡಿರುವ ಸಂದರ್ಶನದ ಸಂಕ್ಷಿಪ್ತ ವಿವರ ಇಲ್ಲಿದೆ.

ಅಪಾಯಕಾರಿ ಸರ್ಜಿಕಲ್ ದಾಳಿ

ಸರ್ಜಿಕಲ್ ಸ್ಟ್ರೈಕ್ ತೀರ್ಮಾನ ಮಾಡಿದಾಗ ಅದು ಭಾರಿ ಅಪಾಯಕಾರಿ ನಡೆ ಎನ್ನುವುದು ತಿಳಿದಿತ್ತು. ಆದರೂ ದಾಳಿ ನಡೆಸಲು ಸೂಚನೆ ನೀಡಲಾಗಿತ್ತು. ಅದರ ಸೋಲು, ಗೆಲುವು ಅಥವಾ ರಾಜಕೀಯ ಪರಿಣಾಮದ ಬಗ್ಗೆ ಆಲೋಚಿಸಿರಲಿಲ್ಲ. ಆದರೆ ಯೋಧರ ಸುರಕ್ಷತೆ ಬಗ್ಗೆ ಆತಂಕಗೊಂಡಿದ್ದೆ. ರಾತ್ರಿಯಿಡಿ ನಿದ್ದೆ ಇರಲಿಲ್ಲ. ಪ್ರತಿ ಸೈನಿಕನೂ ಭಾರತಕ್ಕೆ ಹಿಂತಿರುಗುವವರೆಗೂ ಆತಂಕ ಮನೆಮಾಡಿತ್ತು. ಎಲ್ಲ ಸೈನಿಕರು ವಾಪಸ್ ಆದ ಬಳಿಕ ಪಾಕಿಸ್ತಾನಕ್ಕೂ ಮಾಹಿತಿ ನೀಡಲಾಗಿತ್ತು. ಆದರೆ ಪಾಕಿಸ್ತಾನಕ್ಕೂ ಮೊದಲು ನಮ್ಮ ದೇಶದ ಕೆಲ ರಾಜಕೀಯ ಪಕ್ಷಗಳ ನಾಯಕರೇ ಸೈನಿಕರ ಕಾರ್ಯದ ಬಗ್ಗೆ ಸಂದೇಹ ವ್ಯಕ್ತಪಡಿಸಿದರು. ರಾಜಕೀಯ ಲಾಭ, ನಷ್ಟಗಳಿಗೆ ಸೈನ್ಯದ ನೈತಿಕತೆ ಕುಸಿಯುವ ಕೆಲಸ ಮಾಡಬಾರದು. ಇದೊಂದು ದಾಳಿಯಿಂದ ಪಾಕಿಸ್ತಾನ ಸುಧಾರಿಸುತ್ತದೆ ಎಂದು ನಾವ್ಯಾರೂ ಅಂದುಕೊಂಡಿಲ್ಲ. ಪಾಕಿಸ್ತಾನ ಬದಲಾಗಲು ಸಾಕಷ್ಟು ಸಮಯ ಬೇಕು.

ಸೈನ್ಯ ದುರ್ಬಲಗೊಳಿಸುವ ಯತ್ನ

ರಫೇಲ್ ಯುದ್ಧ ವಿಮಾನ ಖರೀದಿಯಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ವೈಯಕ್ತಿಕ ಆರೋಪಗಳ ಮೂಲಕ ದೇಶದ ಸೈನ್ಯ ದುರ್ಬಲಗೊಳಿಸುವ ಪ್ರಯತ್ನ ಯಶಸ್ವಿಯಾಗದು. ನನ್ನ ಅಥವಾ ಸರ್ಕಾರದ ವಿರುದ್ಧ ಯಾವುದೇ ಆರೋಪ ಬಂದರೂ ಎದುರಿಸಲು ಸಿದ್ಧವಿದ್ದೇನೆ. ಈ ಪ್ರಕರಣ ಕುರಿತು ನಾನು ಸಾಕಷ್ಟು ಬಾರಿ ಮಾತನಾಡಿದ್ದೇನೆ. ಸುಪ್ರೀಂಕೋರ್ಟ್ ಆದೇಶವಿದೆ. ಆದರೆ ನಿರಾಧಾರ ಆರೋಪ ಮಾಡುವ ವ್ಯಕ್ತಿಯ ಬಳಿ ಯಾರೊಬ್ಬರೂ ಸಾಕ್ಷಿ ಕೇಳುತ್ತಿಲ್ಲ. ಬಾಯಿಗೆ ಬಂದಂತೆ ಮಾತನಾಡುವವರಿಗೆ ನಾನು ಪ್ರತಿ ನಿತ್ಯ ಸ್ಪಷ್ಟೀಕರಣ ಕೊಡಲು ಸಾಧ್ಯವಿಲ್ಲ. ಸೈನ್ಯವನ್ನು ಸಶಕ್ತಗೊಳಿಸುವ ಕೆಲಸ ಮುಂದುರಿಸುತ್ತೇನೆ. ರಕ್ಷಣಾ ವ್ಯವಹಾರಗಳಲ್ಲಿ ಮಧ್ಯವರ್ತಿಗಳನ್ನು ದೂರವಿಡುವ ಕೆಲಸ ನಿಲ್ಲಿಸುವುದಿಲ್ಲ.

ಉರ್ಜಿತ್ ರಾಜೀನಾಮೆ ಪೂರ್ವನಿರ್ಧಾರಿತ

ಆರ್​ಬಿಐ ಗವರ್ನರ್ ಹುದ್ದೆಗೆ 7-8 ತಿಂಗಳುಗಳ ಹಿಂದೆಯೇ ರಾಜೀನಾಮೆ ನೀಡಲು ಉರ್ಜಿತ್ ಪಟೇಲ್ ಮುಂದಾಗಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಮುಂದುವರಿಯಲು ಮನವಿ ಮಾಡಲಾಗಿತ್ತು. ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದು, ಅವರ ಸೇವೆ ಅತ್ಯುತ್ತಮವಾಗಿತ್ತು. ಇದನ್ನು ರಾಜಕೀಯಗೊಳಿಸುವುದರಲ್ಲಿ ಅರ್ಥವಿಲ್ಲ.

ಕಾಂಗ್ರೆಸ್ ಪಾಠ ಬೇಕಿಲ್ಲ

ಪ್ರಧಾನಿ ವಿರೋಧದ ನಡುವೆಯೂ ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಸಲಹಾ ಮಂಡಳಿ ರಚಿಸಲಾಗಿತ್ತು. ಸಂಪುಟದ ನಿರ್ಣಯಗಳನ್ನು ಸುದ್ದಿಗೋಷ್ಠಿಯಲ್ಲಿ ಹರಿದು ಹಾಕಲಾ ಗುತ್ತಿತ್ತು. ನ್ಯಾಯಾಂಗದಲ್ಲಿ ಪಕ್ಷಗಳ ಸಿದ್ಧಾಂತಕ್ಕೆ ಅನುಸಾರ ವಾಗಿ ಬಡ್ತಿ ನೀಡಲಾಗುತ್ತಿತ್ತು. ಹಿರಿಯರನ್ನು ಕಡೆಗಣಿಸಿ ಕಿರಿಯ ನ್ಯಾಯಮೂರ್ತಿ ಗಳಿಗೆ ಉನ್ನತ ಹುದ್ದೆ ನೀಡಲಾಗಿತ್ತು. ಇಂತಹ ವ್ಯಕ್ತಿಗಳಿಂದ ನಾವು ಸಂವಿಧಾನ ಹಾಗೂ ಸರ್ಕಾರಿ ಸಂಸ್ಥೆಗಳ ರಕ್ಷಣೆ ಬಗ್ಗೆ ಪಾಠ ಕಲಿಯಬೇಕಿಲ್ಲ.

ರಾಜಕೀಯ ದ್ವೇಷದ ಕ್ರಮವಿಲ್ಲ

ಸೊಹ್ರಾಬುದ್ದೀನ್ ಎನ್​ಕೌಂಟರ್ ಪ್ರಕರಣದ ತನಿಖೆಯಲ್ಲಿ ಸಿಬಿಐನ್ನು ಹೇಗೆ ದುರುಪಯೋಗಿಸಿಕೊಳ್ಳಲಾಗಿತ್ತು ಎನ್ನುವುದನ್ನು ಕೋರ್ಟ್ ತನ್ನ ಆದೇಶದಲ್ಲಿಯೇ ಹೇಳಿದೆ. ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸಿರುವುದು ಬಹಿರಂಗವಾಗಿದೆ. ಆದರೆ ಎನ್​ಡಿಎ ಸರ್ಕಾರ ಈ ರೀತಿಯ ವಿಚಾರಣೆ ನಡೆಸುತ್ತಿಲ್ಲ. ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಕ್ರಿಶ್ಚಿಯನ್ ಮಿಶೆಲ್​ನನ್ನು ಕಾನೂನು ಪ್ರಕಾರ ಭಾರತಕ್ಕೆ ತಂದು ವಿಚಾರಣೆ ನಡೆಸಲಾಗುತ್ತಿದೆ. ಜಾರಿ ನಿರ್ದೇಶನಾಲಯ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದೆ. ಆದರೆ ಆರೋಪಿಗೆ ಕಾಂಗ್ರೆಸ್ ವಕೀಲರು ರಕ್ಷಣೆ ನೀಡುತ್ತಿರುವುದೇಕೆ?

ಜಾಮೀನು ಪಡೆದವರ ಟೀಕೆ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಗಿರುವ ಅಮ್ಮ-ಮಗ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಅವರು ಆರೋಪಿಗಳು ಎನ್ನುವುದು ಜನರಿಗೆ ತಿಳಿದಿದೆ.

ಆತ್ಮಸ್ಥೈರ್ಯ ಕುಂದಿಲ್ಲ

3 ರಾಜ್ಯಗಳಲ್ಲಿ ಸೋತಿದ್ದೇವೆ, ಎರಡು ರಾಜ್ಯಗಳಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಹುಡುಕಲಾಗುತ್ತಿದೆ. ಈ ಸೋಲುಗಳಿಂದ ಆತ್ಮಸ್ಥೈರ್ಯ ಕುಂದಿಲ್ಲ. ಕಳೆದ ನಾಲ್ಕೂವರೆ ವರ್ಷಗಳ ಸಾಧನೆ ಮೂಲಕ ಜನರೆದುರು ಹೋಗುತ್ತೇವೆ.

ದೇಶದ ಜನತೆ ವರ್ಸಸ್ ಮಹಾಮೈತ್ರಿ

ಮುಂದಿನ ಚುನಾವಣೆಯು ಮೋದಿ ವರ್ಸಸ್ ಮಹಾಮೈತ್ರಿಯಲ್ಲ. ದೇಶದ ಜನತೆ ಹಾಗೂ ಮಹಾಮೈತ್ರಿ ನಡುವೆ ನಡೆಯಲಿದೆ. ನಾನು ಮಾಡಿರುವ ಕೆಲಸದ ಬಗ್ಗೆ ದೇಶದ ಜನತೆ ಮತ ನೀಡಲಿದ್ದಾರೆ. ದೇಶದ ಜನರ ಇರಾದೆಗೆ ತಕ್ಕಂತೆ ಸರ್ಕಾರ ನಡೆಸುತ್ತಿರುವವರು ಹಾಗೂ ಅದಕ್ಕೆ ಅಡ್ಡಗಾಲಾಗಿರುವವರ ನಡುವಿನ ಹೋರಾಟವಿದು.