ಕೇದಾರನಾಥ್​​ದಲ್ಲಿ ಸಾಂಪ್ರದಾಯಿಕ ಉಡುಗೆ ಧರಿಸಿ ಮೋದಿ ಪ್ರಾರ್ಥನೆ: ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ

ನವದೆಹಲಿ: ಲೋಕಸಭಾ ಚುನಾವಣೆಯ ಕೊನೇ ಹಂತದ ಮತದಾನದ ಪ್ರಚಾರಕ್ಕೆ ನಿನ್ನೆ ತೆರೆಬಿದ್ದಿದೆ. ಕೊನೇ ದಿನದ ಪ್ರಚಾರವನ್ನು ಮಧ್ಯಪ್ರದೇಶದಲ್ಲಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ಕೇದಾರನಾಥಕ್ಕೆ ಭೇಟಿ ನೀಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ಇಂದಿನಿಂದ ಎರಡು ದಿನಗಳ ಉತ್ತರಖಾಂಡ ಪ್ರವಾಸದಲ್ಲಿ ಇರುವ ಮೋದಿ, ಇಂದು ಮುಂಜಾನೆ ಡೆಹರಾಡೂನ್​ನ ಜಾಲಿಗ್ರಾಂಟ್​ ಏರ್​ಪೋರ್ಟ್​ಗೆ ತಲುಪಿ ಅಲ್ಲಿಂದ ನೇರವಾಗಿ ಕೇದಾರನಾಥ್​ಕ್ಕೆ ತೆರಳಿದ್ದರು. ​ ಉತ್ತರಖಾಂಡದ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದ ಪ್ರಧಾನಿ ಮೋದಿಯವರು ಸುಮಾರು ಒಂದೂವರೆ ಗಂಟೆ ದೇಗುಲದ ಒಳಗೆ ಪ್ರಾರ್ಥಿಸಿದ್ದಾರೆ. ಹಾಗೇ ಪ್ರದಕ್ಷಿಣೆಯನ್ನೂ ಹಾಕಿ ನಮಸ್ಕಾರ ಸಲ್ಲಿಸಿದ್ದಾರೆ.

ನಂತರ ಪಟ್ಟಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳನ್ನೂ ವೀಕ್ಷಿಸಿದ್ದಾರೆ. ಅಲ್ಲದೆ 2013ರಲ್ಲಿ ಉಂಟಾಗಿದ್ದ ಪ್ರವಾಹದಿಂದ ಹಾನಿಗೀಡಾಗಿರುವ ಕೆಲವು ಪ್ರದೇಶಗಳ ಅಭಿವೃದ್ಧಿಯ ಬಗ್ಗೆಯೂ ವಿಚಾರಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿಯನ್ನೂ ಪಡೆದಿದ್ದಾರೆ.

ನರೇಂದ್ರ ಮೋದಿಯವರು ಧಾರ್ಮಿಕ ಕಾರ್ಯಕ್ರಮಕ್ಕಾಗಿ ಇಲ್ಲಿಗೆ ಆಗಮಿಸಿದ್ದಾರೆ. ಮೋದಿಯವರ ಆಗಮನದಿಂದ ನಮ್ಮ ರಾಜ್ಯದ ಜನರಿಗೂ ಸಂತೋಷವಾಗಿದೆ ಎಂದು ಉತ್ತರಖಾಂಡದ ಬಿಜೆಪಿ ಅಧ್ಯಕ್ಷ ಅಜಯ್​ ಭಟ್ಟ ಹೇಳಿದ್ದಾರೆ. ನಾಳೆ ಬೆಳಗ್ಗೆ ಮೋದಿಯವರು ಬದ್ರಿನಾಥ್​ಗೆ ಭೇಟಿ ನೀಡಲಿದ್ದಾರೆ.
ಫೋಟೋ ಶೇರ್​ ಮಾಡಿದ ನರೇಂದ್ರ ಮೋದಿ

ಕೇದಾರ್​ನಾಥ್​ಗೆ ಭೇಟಿ ನೀಡಿದ ನರೇಂದ್ರ ಮೋದಿಯವರು ಅಲ್ಲಿನ ಅತ್ಯಂತ ದೊಡ್ಡ ದೊಡ್ಡ ಶಿಖರಗಳ ಫೋಟೋಗಳನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಕೇದಾರನಾಥಕ್ಕೆ ಹೋಗುವ ದಾರಿಯಲ್ಲಿ ಕ್ಲಿಕ್ಕಿಸಲಾಗಿದೆ. ನೋಡಿ ಎಂಥ ಭವ್ಯ ಪರ್ವತಗಳು ಎಂದು ಟ್ವೀಟ್​ ಮಾಡಿದ್ದಾರೆ.
ನಾಳೆ ಬದ್ರೀನಾಥ್​ಕ್ಕೆ ತೆರಳಿ ಸಂಜೆ ದೆಹಲಿಗೆ ವಾಪಸಾಗಲಿದ್ದಾರೆ.

Leave a Reply

Your email address will not be published. Required fields are marked *