Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ತಾರಿಣಿ ಪರಿಕ್ರಮ ನಾರಿ ಪರಾಕ್ರಮ

Thursday, 24.05.2018, 3:04 AM       No Comments

ಭಾರತೀಯ ನೌಕಾಪಡೆಯ 6 ಮಹಿಳಾ ಯೋಧರನ್ನೊಳಗೊಂಡಿದ್ದ ‘ಐಎನ್​ಎಸ್​ವಿ ತಾರಿಣಿ’ ನೌಕೆ ಬರೋಬ್ಬರಿ 8 ತಿಂಗಳ ವಿಶ್ವಯಾನವನ್ನು ಸಂಪನ್ನಗೊಳಿಸಿ ವಾಪಸಾಗಿದೆ. ಐದು ಹಂತಗಳನ್ನೊಳಗೊಂಡಿದ್ದ ಈ ಪರಿಕ್ರಮ, ಮಹಿಳಾ ಸಬಲೀಕರಣದ ಪರಿಕಲ್ಪನೆಯ ಸಾಕಾರರೂಪ ಮಾತ್ರವೇ ಅಲ್ಲ, ವಿಶ್ವವೇದಿಕೆಯಲ್ಲೂ ಭಾರತದ ನಾರೀಶಕ್ತಿಯನ್ನು ಅನಾವರಣಗೊಳಿಸಿದ ಉಪಕ್ರಮ. ಈ ಕುರಿತಾದ ಕಿರುನೋಟವಿದು.

ಸಮುದ್ರಮಾರ್ಗದಲ್ಲಿ ವಿಶ್ವಯಾನ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ ಮತ್ತು ಅದು ಅಳ್ಳೆದೆಯವರಿಗೆ ಕೈಗೆಟುಕುವ ಫಲವೂ ಅಲ್ಲ. ಅದರಲ್ಲೂ ಮಹಿಳೆಯರು ಇಂಥದೊಂದು ಜೈತ್ರಯಾತ್ರೆಗೆ ಸಂಕಲ್ಪಿಸಿದ್ದಾರೆ ಎಂದಾಗ, ನೌಕೆಗೆ ಉತ್ತೇಜನದ ಇಂಧನ ತುಂಬುವವರಿಗಿಂತಲೂ, ಕೊಂಕುಮಾತಿನ ರಂಧ್ರಗಳನ್ನು ಕೊರೆಯುವವರೇ ಹೆಚ್ಚು! ಹೀಗೆ ಕಾಲೆಳೆಯುವವರ ನಡುವೆಯೂ ಈ ಸಾಹಸಕ್ಕೆ ಮುಂದಾಗಿ ಅದನ್ನು ದಕ್ಕಿಸಿಕೊಂಡು ಬಂದ ವೀರರಮಣಿಯರು ಇಂಥ ಮತ್ತಷ್ಟು ಮಹತ್ವಾಕಾಂಕ್ಷಿಗಳಿಗೆ ಮೇಲ್ಪಂಕ್ತಿಯಾಗಿದ್ದಾರೆ. 2017ರ ಸೆಪ್ಟೆಂಬರ್ 10ರಂದು ಗೋವಾದಿಂದ ಶುರುವಾಗಿ, 2018ರ ಮೇ 21ರಂದು ಅಲ್ಲೇ ಸಂಪನ್ನಗೊಂಡ ಈ ಪರಿಕ್ರಮ 5 ಹಂತಗಳನ್ನೊಳಗೊಂಡಿತ್ತು. ಆಸ್ಟ್ರೇಲಿಯಾ (ಫ್ರೀಮ್ಯಾಂಟಲ್) ನ್ಯೂಜಿಲೆಂಡ್ (ಲಿಟ್ಟೆಲ್​ಟನ್), ಫಾಕ್ಲೆಂಡ್ಸ್ (ಪೋರ್ಟ್ ಸ್ಟಾನ್ಲೆ), ದಕ್ಷಿಣ ಆಫ್ರಿಕಾ (ಕೇಪ್​ಟೌನ್) ಮತ್ತು ಮಾರಿಷಸ್ (ಪೋರ್ಟ್ ಲೂಯಿಸ್) ಬಂದರುಗಳಲ್ಲಿ ಠಿಕಾಣಿ ಹೂಡಿದ್ದು ಬಿಟ್ಟರೆ ಮಿಕ್ಕ ದಿನಗಳೆಲ್ಲವೂ ಜಲಯಾನಕ್ಕೇ ಮೀಸಲಾಗಿತ್ತು.

ಏನಿದರ ವೈಶಿಷ್ಟ್ಯ?

ನೌಕಾಪಡೆಯ ಪಾಲಿಗಿದು ಮೂರನೇ ‘ಪರಿಕ್ರಮ’ವಾದರೂ ಮಹಿಳಾ ತಂಡದ ಮೊಟ್ಟಮೊದಲ ‘ಪರಾಕ್ರಮ’ ಎಂಬುದು ಉಲ್ಲೇಖನೀಯ. ಸಮಭಾಜಕ ವೃತ್ತವನ್ನು 2 ಬಾರಿ ದಾಟಿರುವ, 4 ಖಂಡಗಳು ಮತ್ತು 3 ಸಾಗರಗಳನ್ನು ಕ್ರಮಿಸಿರುವ, ಲೀಯುವಿನ್-ಹಾರ್ನ್- ಗುಡ್​ಹೋಪ್​ನಂಥ ಮೂರು ಭೂಶಿರಗಳ ದಕ್ಷಿಣ ಭಾಗದಲ್ಲಿ ಹಾದುಹೋಗಿರುವ ಯಾತ್ರೆಯಿದು. 21,600 ನಾಟಿಕಲ್ ಮೈಲಿ ದೂರವನ್ನು ಕ್ರಮಿಸಿದ ಈ ಸಾಹಸಕ್ಕೆ ವಾಹಕವಾಗಿದ್ದು ‘ಐಎನ್​ಎಸ್​ವಿ ತಾರಿಣಿ’ ನೌಕೆ. 56 ಅಡಿ ಉದ್ದವಿದ್ದು, 6 ನಾವಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿರುವ ಈ ನೌಕೆಗೆ ಸ್ವದೇಶಿ-ನಿರ್ವಿುತ ಎಂಬ ಹೆಗ್ಗಳಿಕೆಯಿದೆ. ಇದು ನಿರ್ವಣಗೊಂಡಿದ್ದೂ ಗೋವಾದ ಅಕ್ವಾರಿಸ್ ಬಂದರಿನಲ್ಲೇ ಎಂಬುದು ಗಮನಾರ್ಹ. ಲೆ. ಕಮಾಂಡರ್ ವಾರ್ತಿಕಾ ಜೋಷಿ ನೇತೃತ್ವದ ಈ ಯಾನತಂಡದ ಸದಸ್ಯರಲ್ಲಿ ಲೆ. ಕಮಾಂಡರ್​ಗಳಾದ ಪಿ. ಸ್ವಾತಿ ಮತ್ತು ಪ್ರತಿಭಾ ಜಮ್ವಾಲ್, ಲೆಫ್ಟಿನೆಂಟ್​ಗಳಾದ ಬಿ. ಐಶ್ವರ್ಯಾ, ಪಾಯಲ್ ಗುಪ್ತಾ ಮತ್ತು ಎಸ್. ವಿಜಯಾದೇವಿ ಸೇರಿದ್ದರು.

ಯಾನ ಅಂದುಕೊಂಡಷ್ಟು ಸುಲಭವೇ?

ಇಂಥ ಸಮುದ್ರಯಾನವೆಂದರೆ, ಮೋಟಾರ್​ಬೋಟ್​ನಲ್ಲೋ, ಪೆಡಲ್​ಬೋಟ್​ನಲ್ಲೋ ಕುಳಿತು ಸರೋವರದಲ್ಲಿ ವಿಹರಿಸಿದಂತೆಯೇ ಎಂದುಕೊಳ್ಳುವವರುಂಟು. ಆದರೆ ಇದು ಅಷ್ಟು ಸುಲಭಕ್ಕೆ ದಕ್ಕುವ ಕೈತುತ್ತಲ್ಲ. ಇದಕ್ಕೊಂದು ಉದಾಹರಣೆ ನೀಡುವುದಾದರೆ, ದಕ್ಷಿಣ ಅಮೆರಿಕದ ದಕ್ಷಿಣದ ತುತ್ತತುದಿಯಲ್ಲಿರುವ, ವಿಶ್ವದ ಅತ್ಯಂತ ದುರ್ಗಮ ಪ್ರದೇಶ ಎಂದೇ ಹೆಸರಾಗಿರುವ ‘ಹಾರ್ನ್ ಭೂಶಿರ’ ಪ್ರದೇಶವನ್ನು ಹಾದುಹೋಗುವುದೆಂದರೆ ಸುಲಭದ ಮಾತಲ್ಲ. ಕಾರಣ, ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳು ಸಂಧಿಸುವ ‘ಡ್ರೇಕ್ ಮಾರ್ಗ’ದಲ್ಲಿ ಈ ತಾಣವಿದ್ದು ಇಲ್ಲಿ ಸಮುದ್ರ ತೀರಾ ಪ್ರಕ್ಷುಬ್ಧ ಸ್ಥಿತಿಯಲ್ಲಿರುತ್ತದೆ. ಭಾರಿ ಎತ್ತರ ಹಾಗೂ ತೀವ್ರತೆಯ ಅಲೆಗಳು ಸದಾಕಾಲ ಕಾಣಿಸಿಕೊಳ್ಳುವುದು, ಅತಿವೇಗದಲ್ಲಿ ಬೀಸುವ ಗಾಳಿ, ಸಮುದ್ರದೊಳಗಿಂದಲೇ ತೇಲಿಬರುವ ನೀರ್ಗಲ್ಲುಗಳು ಈ ತಾಣದಲ್ಲಿ ಕಾಣಿಸಿಕೊಳ್ಳುವ ಸವಾಲುಗಳೆನ್ನಬೇಕು. ಹೀಗಾಗಿ ‘ಸಮುದ್ರದ ಮೌಂಟ್ ಎವರೆಸ್ಟ್’, ‘ನಾವಿಕರ ಸ್ಮಶಾನ’ ಎಂಬೆಲ್ಲ ಹೆಸರುಗಳು ಈ ಭಯಾನಕ ತಾಣಕ್ಕಿದ್ದು, ಯಾತ್ರೆಯಲ್ಲಿನ ಬಹುದೊಡ್ಡ ಸವಾಲಾಗಿದ್ದ ಈ ಘಟ್ಟವನ್ನು ಯಶಸ್ವಿಯಾಗಿ ದಾಟಿದ್ದು ಭಾರತೀಯ ನೌಕಾಪಡೆಯ ಮಹಿಳಾ ಸಿಬ್ಬಂದಿಯ ಸಾಮರ್ಥ್ಯ-ಸಾಧನೆಗೆ ದ್ಯೋತಕವೆನ್ನಬೇಕು. ಹೀಗಾಗಿ ಸಹಜವಾಗಿಯೇ, ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಗಣ್ಯರು ಈ ಸಾಹಸವನ್ನು ಮನದುಂಬಿ ಶ್ಲಾಘಿಸಿ, ಅಭಿನಂದಿಸಿದ್ದಾರೆ.

ಒಂದಿಷ್ಟು ಫ್ಲಾಷ್​ಬ್ಯಾಕ್

ಈ ‘ಮಹಿಳಾ ಪರಿಕ್ರಮ-ಪರಾಕ್ರಮ’ಕ್ಕೂ ಮೊದಲು ಭಾರತೀಯ ನೌಕಾಪಡೆಯ ವತಿಯಿಂದ ಇಂಥದೇ ಎರಡು ಪರ್ಯಟನೆಗಳಾಗಿದ್ದವು. ಕ್ಯಾಪ್ಟನ್ ದಿಲೀಪ್ ದೋಂಡೆ (ಈಗ ನಿವೃತ್ತರು) ಅವರು 2009ರಲ್ಲಿ ಐದು ಹಂತದ ಸಾಗರಯಾನದ ಮೂಲಕ ಒಂಟಿಯಾಗಿ ಹೀಗೊಂದು ವಿಶ್ವಪರಿಕ್ರಮ ಕೈಗೊಂಡಿದ್ದರು. ತರುವಾಯ, 2013ರಲ್ಲಿ ಕಮಾಂಡರ್ ಅಭಿಲಾಷ್ ಟೋಮಿ ಕೂಡ ಇಂಥದೇ ಸಾಹಸಕ್ಕೆ ಅಧ್ವರ್ಯುವಾಗಿದ್ದರು. ಈ ಎರಡೂ ಯಾತ್ರೆಗಳಿಗೆ ವಾಹಕವಾಗಿದ್ದು ‘ಐಎನ್​ಎಸ್​ವಿ ಮಹಾದೇಯಿ’ ನೌಕೆ. ಇದು 2009ರಲ್ಲಿ ನೌಕಾಪಡೆಗೆ ಸೇರಿಕೊಂಡಾಗಲೇ ಇಂಥದೊಂದು ಸಮುದ್ರ ಪರಿಕ್ರಮದ ಪರಿಕಲ್ಪನೆಗೂ ಜೀವಬಂದಿತು ಎಂಬುದು ಗಮನಾರ್ಹ. ತರುವಾಯದಲ್ಲಿ, ಸಂಪೂರ್ಣ ಮಹಿಳಾ ಯೋಧರೇ ಇರುವ ತಂಡವೊಂದು ವಿಶ್ವಯಾತ್ರೆ ಕೈಗೊಳ್ಳುವ ವಿಷಯ ಚರ್ಚೆಗೆ ಬಂದಾಗ, ಪಟ್ಟಿಯಲ್ಲಿದ್ದ 20 ಅಭ್ಯರ್ಥಿಗಳ ಪೈಕಿ ಆರು ಮಂದಿಯನ್ನು ಆಯ್ಕೆಮಾಡಿದ ಕ್ಯಾಪ್ಟನ್ ದೋಂಡೆ, ಅವರಿಗೆ ನೌಕಾಯಾನಕ್ಕೆ ಸಂಬಂಧಿಸಿದ ತರಬೇತಿಯನ್ನೂ ನೀಡಿದರು. ಈ ಬಾರಿಯ ಮಹಿಳಾ ತಂಡವು ಕ್ಯಾಪ್ಟನ್ ದೋಂಡೆ ಸಾಗಿದ ಹಾದಿಯಲ್ಲೇ ಸಾಗಿತು, ದೋಂಡೆ ತಮ್ಮ ಏಕಾಂಗಿ ಪರ್ಯಟನೆಯ ವೇಳೆ ತಂಗಿದ್ದ ತಾಣಗಳಲ್ಲೇ ಈ ತಂಡವೂ ಠಿಕಾಣಿ ಹೂಡಿತು ಎಂಬುದು ಗಮನಾರ್ಹ ಸಂಗತಿ.

Leave a Reply

Your email address will not be published. Required fields are marked *

Back To Top