ಬಿಜೆಪಿ ಸರ್ಕಾರದಲ್ಲಿ ಎಸ್​ಸಿ/ಎಸ್​ಟಿ ಸಮುದಾಯದ ಕಲ್ಯಾಣ: ಮೋದಿ

ಬೆಂಗಳೂರು: ಬಿಜೆಪಿ ನೇತೃತ್ವದ ಸರ್ಕಾರ ಹಿಂದುಳಿದ ವರ್ಗಗಳ ಮತ್ತು ಎಸ್​ಸಿ/ಎಸ್​ಟಿ ಅಭಿವೃದ್ಧಿಗಾಗಿ ಉತ್ತಮ ಕೆಲಸ ಮಾಡಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಮೋದಿ ಅವರು ಇಂದು ರಾಜ್ಯ ಎಸ್​ಸಿ/ಎಸ್​ಟಿ/ಒಬಿಸಿ ಮತ್ತು ಸ್ಲಮ್​ ಮೋರ್ಟಾ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ವಚನಕಾರರಾದ ಮಾದಾರ ಚೆನ್ನಯ್ಯ, ಉರಿಲಿಂಗ ಪೆದ್ದಿ ಅವರನ್ನು ನೆನೆದ ಮೋದಿ ಅವರು ಇಂತಹ ಮಹಾನ್​ ವ್ಯಕ್ತಿಗಳು ಸಮಾಜದ ಒಳಿತಿಗಾಗಿ ಶ್ರಮಿಸಿದರು. ಇಂಥಹವರ ಪ್ರೇರಣೆಯಿಂದಲೇ ಇಂದು ನಾವು ಶಕ್ತ ಸಮಾಜ ನಿರ್ಮಿಸುತ್ತಿದ್ದೇವೆ ಎಂದು ತಿಳಿಸಿದರು.

ಬಿಜೆಪಿಯಲ್ಲಿ ಎಸ್​ಸಿ/ಎಸ್​ಟಿ ಸಮುದಾಯಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿ ಸಂಸದರಾಗಿದ್ದಾರೆ. ಈ ಸಮುದಾಯದ ಜನರು ಬಿಜೆಪಿಯೊಂದಿಗಿದ್ದಾರೆ. ಮುಖ್ಯವಾಗಿ ಡಾ. ಬಿ.ಆರ್​. ಅಂಬೇಡ್ಕರ್​ ಅವರು ಭಾರತ ದೇಶ ಸಮಾಜದ ಎಲ್ಲರನ್ನೂ ಒಳಗೂಡಿಸಿಕೊಂಡು ಸಾಗಬೇಕು ಎಂಬ ಕನಸು ಕಂಡಿದ್ದರು. ಜ್ಯೂತಿಬಾ ಫುಲೆ ಅವರು ಸಮಾಜದಲ್ಲಿ ಇರುವ ಅಸಮಾನತೆಯ ಕುರಿತು ಧ್ವನಿ ಎತ್ತಿದರು. ಸಂತ ಕಬೀರ ದಾಸ್​ ಮತ್ತು ರವಿ ದಾಸ್​ ಅವರು ಸಮಾನತೆಗಾಗಿ ತಮ್ಮ ಜೀವಮಾನವಿಡೀ ಹೋರಾಡಿದರು.

ನಮ್ಮ ಸರ್ಕಾರ ದೇಶದ ಯುವಕರಿಗೆ ಅಂಬೇಡ್ಕರ್​ ಅವರ ವಿಚಾರ ಧಾರೆಯನ್ನು ಕಲಿಸುತ್ತಿದೆ. ಬಿಜೆಪಿ ಸರ್ಕಾರ ಅಂಬೇಡ್ಕರ್​ ಅವರಿಗೆ ಸಂಬಂಧಿಸಿದ 5 ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ‘ಪಂಚ ತೀರ್ಥ’ ಯೋಜನೆಯನ್ನು ಜಾರಿ ಗೊಳಿಸಿದೆ. ಪ್ರತಿಯೊಬ್ಬರೂ ದೆಹಲಿಯಲ್ಲಿರುವ ಅಂಬೇಡ್ಕರ್​ ಅವರ ಸ್ಮಾರಕಕ್ಕೆ ಭೇಟಿ ನೀಡಿ ಅವರ ವಿಚಾರ ಧಾರೆಯ ಕುರಿತು ತಿಳಿದುಕೊಳ್ಳಬೇಕು ಎಂದು ಆಹ್ವಾನ ನೀಡಿದರು.

ಕಾಂಗ್ರೆಸ್​ ಪಕ್ಷದಲ್ಲಿ ಹಿಂದುಳಿದ ವರ್ಗದವರಿಗೆ ಯಾವುದೇ ಸೂಕ್ತ ಸ್ಥಾನಮಾನಗಳು ಸಿಕ್ಕಿಲ್ಲ. ಅಂಬೇಡ್ಕರ್​ ಅವರನ್ನು ಕಾಂಗ್ರೆಸ್​ ಹೇಗೆ ಅವಮಾನಿಸಿದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಇಂದು ಪ್ರಚಾರದ ಕೊನೆಯ ದಿನವಾಗಿದ್ದು, ನೀವೆಲ್ಲರೂ ಮನೆ ಮನೆಗೂ ತೆರಳಿ ಕಾಂಗ್ರೆಸ್​ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *