ಕೆಂಪುಕೋಟೆಯಲ್ಲಿ ನೇತಾಜಿ ಮ್ಯೂಸಿಯಂ

ನವದೆಹಲಿ: ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಸುಭಾಷ್​ಚಂದ್ರ ಬೋಸ್​ರ 122ನೇ ಜಯಂತಿ ವೇಳೆ ದೆಹಲಿ ಕೆಂಪುಕೋಟೆಯಲ್ಲಿ ನೇತಾಜಿ ಕುರಿತ ವಸ್ತುಸಂಗ್ರಹಾಲಯ ವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಲೋಕಾರ್ಪಣೆ ಮಾಡಿದರು.

ಇದೇ ವೇಳೆ ಕೆಂಪುಕೋಟೆಯ ಅಂಗಳದಲ್ಲಿರುವ ‘ಯಾದ್-ಎ-ಜಲಿಯನ್’ (ಜಲಿಯನ್​ವಾಲಾ ಬಾಗ್), ಮೊದಲ ವಿಶ್ವ ಯುದ್ಧದ ನೆನಪಿನ ಮ್ಯೂಸಿಯಂ ಮತ್ತು ‘1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ದ ವಸ್ತುಸಂಗ್ರಹಾಲಯಕ್ಕೆ ಮೋದಿ ಚಾಲನೆ ನೀಡಿದರು. ಭಾರತೀಯ ಕಲೆಯ ದೃಶ್ಯಕಲಾ ಪ್ರದರ್ಶನಾಲಯವನ್ನೂ ಉದ್ಘಾಟಿಸಿದರು. 16ನೇ ಶತಮಾನದಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆಯುವವರೆಗಿನ ಅವಧಿಯ ಕಲಾಕೃತಿಗಳನ್ನು ಇಲ್ಲಿ ಇಡಲಾಗಿದೆ. ರಾಜಾ ರವಿವರ್ಮ, ರವೀಂದ್ರನಾಥ ಟ್ಯಾಗೋರ್, ಅಮೃತಾ ಶೆರ್ಗಿಲ್ ಇನ್ನಿತರ ಮೇರು ಕಲಾವಿದರು ಬಿಡಿಸಿದ ಅಪರೂಪದ ಚಿತ್ರಗಳೂ ಇಲ್ಲಿವೆ. ಈ ಎಲ್ಲ ಮ್ಯೂಸಿಯಂಗಳ ಸಮುಚ್ಚಯವನ್ನು ‘ಕ್ರಾಂತಿ ಮಂದಿರ’ವೆಂದು ಪ್ರಧಾನಿ ಮೋದಿ ಟ್ವಿಟ್ಟರ್​ನಲ್ಲಿ ಹೇಳಿದ್ದಾರೆ.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ವಸ್ತುಸಂಗ್ರಹಾಲಯ: 1857ರಲ್ಲಿ ಸಿಡಿದೆದ್ದ ಭಾರತೀಯರು, ಬ್ರಿಟಿಷರ ವಿರುದ್ಧ ತೋರಿದ ಕೆಚ್ಚೆದೆಯ ಶೌರ್ಯ ಮತ್ತು ಸಾಹಸಗಳ ಕಥಾನಕ ಈ ವಸ್ತುಸಂಗ್ರಹಾಲಯದಲ್ಲಿ ಇದೆ. ಜಲಿಯನ್​ವಾಲಾ ಬಾಗ್ ವಸ್ತುಸಂಗ್ರಹಾಲಯ: ಪಂಜಾಬ್​ನ ಜಲಿಯನ್​ವಾಲಾ ಬಾಗ್​ನಲ್ಲಿ ಬ್ರಿಟಿಷರು ನಡೆಸಿದ ಮಾರಣ ಹೋಮದ ಚಿತ್ರಣವನ್ನು ‘‘ಯಾದ್-ಎ-ಜಲಿಯನ್’ ಮ್ಯೂಸಿಯಂ ನೀಡುತ್ತದೆ.

ಪರೇಡ್​ನಲ್ಲಿ ಐಎನ್​ಎ: ಬೋಸ್ ಸ್ಥಾಪಿಸಿದ್ದ ಇಂಡಿಯನ್ ನ್ಯಾಷನಲ್ ಆರ್ವಿುಯ ನಾಲ್ವರು ಹಿರಿಯ ಸೈನಿಕರು ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಪೆರೇಡ್​ನಲ್ಲಿ ಭಾಗಿಯಾಗಲಿದ್ದಾರೆ.

ನೇತಾಜಿ ಧರಿಸಿದ್ದ ಟೋಪಿಯನ್ನು ಅವರ ಕುಟುಂಬದವರು ನನಗೆ ತೊಡಿಸಿದ್ದು ದೊಡ್ಡ ಗೌರವ. ಈ ಟೋಪಿಯನ್ನು ಕ್ರಾಂತಿ ಮಂದಿರದಲ್ಲೆ ಪ್ರದರ್ಶಿಸಲಾಗುವುದು. ಯುವ ಜನರು ಈ ‘ಕ್ರಾಂತಿ ಮಂದಿರ’ಕ್ಕೆ ಭೇಟಿ ನೀಡಬೇಕು. ಸುಭಾಷ್​ಚಂದ್ರ ಬೋಸರ ಅಪ್ರತಿಮ ದೇಶ ಭಕ್ತಿ, ದೇಶವಾಸಿಗಳನ್ನು ದಾಸ್ಯದಿಂದ ಬಿಡಿಸಲು ಅವರು ನಡೆಸಿದ ಹೋರಾಟ ಇಂದಿನ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಬೇಕು.

| ನರೇಂದ್ರ ಮೋದಿ, ಪ್ರಧಾನಿ (ಟ್ವಿಟರ್​ನಲ್ಲಿ ಪ್ರತಿಕ್ರಿಯೆ)

ಮ್ಯೂಸಿಯಂ ವಿಶೇಷತೆ

ಸುಭಾಷ್​ಚಂದ್ರ ಬೋಸ್ ಹಾಗೂ ಅವರು ಕಟ್ಟಿದ ಆಜಾದ್ ಹಿಂದ್ ಫೌಜ್​ಗೆ (ಐಎನ್​ಎ) ಸಂಬಂಧಿಸಿದ ಅನೇಕ ಪರಿಕರಗಳು, ಚಿತ್ರ ಮತ್ತು ಕಾಗದಪತ್ರಗಳು ಇಲ್ಲಿವೆ. ನೇತಾಜಿ ಕುಳಿತುಕೊಳ್ಳುತ್ತಿದ್ದ ಮರದ ಕುರ್ಚಿ, ಅವರು ಧರಿಸುತ್ತಿದ್ದ ಪದಕಗಳು, ಐಎನ್​ಎ ಸಮವಸ್ತ್ರ, ಬ್ಯಾಡ್ಜ್​ಗಳನ್ನು ಇರಿಸಲಾಗಿದೆ. ನೇತಾಜಿ ಬದುಕು ಮತ್ತು ಹೋರಾಟ ಕುರಿತ ಸಾಕ್ಷ್ಯಚಿತ್ರ ವೀಕ್ಷಿಸಬಹುದು.

Leave a Reply

Your email address will not be published. Required fields are marked *