ದೀದಿಗೆ ದೆಹಲಿ ಸರ್ಕಾರ ಮುನ್ನಡೆಸುವ ಮಹತ್ವಾಕಾಂಕ್ಷಿ ಆಸೆ: ಪ್ರಧಾನಿ ಮೋದಿ

ನವದೆಹಲಿ: ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳವನ್ನು ಮಧ್ಯವರ್ತಿಗಳ, ಸುಲಿಗೆಕೋರರ ಸುಪರ್ದಿಗೆ ಬಿಟ್ಟು ದೆಹಲಿ ಸರ್ಕಾರ ನಡೆಸುವ ಮಹತ್ವಾಕಾಂಕ್ಷಿ ಯೋಚನೆಯಲ್ಲಿ ತೊಡಗಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ದೀದಿ ವಿರುದ್ಧ ವಾಗ್ದಾಳಿ ನಡೆಸಿದರು.

ಪಶ್ಚಿಮ ಬಂಗಾಳದ ಉತ್ತರದಲ್ಲಿರುವ ಜಾಲ್​ಪಾಯ್​ಗುರಿಯಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿ, ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ ಆಳ್ವಿಕೆಯಲ್ಲಿ ಮಧ್ಯವರ್ತಿಗಳೇ ಆಡಳಿತ ನಡೆಸುತ್ತಿದ್ದಾರೆ. ಇಲ್ಲಿ ಬಡವರು, ಮಧ್ಯಮದವರ್ಗದವರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪಶ್ಚಿಮಬಂಗಾಳದಲ್ಲಿ ದೀದಿ ಮುಖ್ಯಮಂತ್ರಿಯೇನೋ ಸರಿ. ಆದರೆ, ಇಲ್ಲಿ ದಾದಾಗಿರಿ ನಡೆಸುತ್ತಿರುವವರೇ ಬೇರೆ. ಟಿಎಂಸಿ ಅಧಿಕಾರದಲ್ಲಿದೆ. ಆದರೆ, ಆಡಳಿತ ನಡೆಯುತ್ತಿರುವುದು ಜಗೈ ಮತ್ತು ಮದೈಗಳು ಎಂದು ಮಧ್ಯವರ್ತಿಗಳನ್ನು ಉಲ್ಲೇಖಿಸಿ ಟೀಕಿಸಿದರು.

ಚಿಟ್​ಫಂಡ್​ ಹಗರಣ ತನಿಖೆ ವಿರೋಧಿಸಿ ಮಮತಾ ನ್ಯಾನರ್ಜಿಯವರು ಧರಣಿ ಕುಳಿತಿದ್ದರ ಕುರಿತು ವ್ಯಂಗ್ಯವಾಡಿ ಮೋದಿ, ಇದೊಂದು ವಿಚಿತ್ರ ಸನ್ನಿವೇಶ. ಭ್ರಷ್ಟರ ರಕ್ಷಣೆಗಾಗಿ ಮುಖ್ಯಮಂತ್ರಿ ಧರಣಿ ಕುಳಿತಿದ್ದನ್ನು ಈ ಹಿಂದೆ ಎಲ್ಲಿಯೂ ನೋಡಿರಲಿಲ್ಲ. ಅದೇನೆ ಇರಲಿ, ಚಿಟ್​ಫಂಡ್​ ಹಗರದಣದಲ್ಲಿ ಭಾಗಿಯಾದವರು ಹಾಗೂ ಅವರನ್ನು ರಕ್ಷಿಸುತ್ತಿರುವವರು ಯಾರೇ ಆಗಲಿ, ಪಾರಾಗಲು ಈ ಕಾವಲುಗಾರ ಬಿಡುವುದಿಲ್ಲ ಎಂದು ಗುಡುಗಿದರು.

ಬಂಗಾಳದಲ್ಲಿ ಕಮ್ಯುನಿಸ್ಟರಿಂದ ಉಂಟಾಗುತ್ತಿದ್ದ ಹಿಂಸೆಯನ್ನು ತೊಡೆದುಹಾಕುವುದಕ್ಕೋಸ್ಕರ ಜನರು ದೀದಿಗೆ ಮತ ಹಾಕಿದ್ದಾರೆ. ಆದರೆ, ಈ ಸರ್ಕಾರ ಮತ್ತಷ್ಟು ಹಿಂಸೆಯನ್ನು ಹುಟ್ಟುಹಾಕುತ್ತಿದೆ. ಟಿಎಂಸಿ ಸರ್ಕಾರ ಕಮ್ಯುನಿಸ್ಟ್​ ಭಾಗ -2ರಂತೆ ಎಂದು ಹೇಳಿದರು.

Leave a Reply

Your email address will not be published. Required fields are marked *