ಮೋದಿಯವರು ಉದ್ಯಮಿಗಳಿಗೆ ನೀಡಿರುವ ಬ್ಯಾಂಕ್​ಗಳ ಕೀಲಿ ಕೈಯನ್ನು ಕಿತ್ತು ಬಡವರಿಗೆ ನೀಡುತ್ತೇವೆ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದ ಶ್ರೀಮಂತರ ಜೇಬಿಗೇ ಹಣ ತುಂಬಿಸುತ್ತಿದ್ದಾರೆ. ಬ್ಯಾಂಕ್​ಗಳ ಕೀ ಗಳನ್ನೆಲ್ಲ ವಿಜಯ್​ ಮಲ್ಯಾ, ನೀರವ್​ ಮೋದಿ, ಅನಿಲ್​ ಅಂಬಾನಿಯವರಿಗೆ ನೀಡಿದ್ದಾರೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಆರೋಪ ಮಾಡಿದರು.

ಕಾಂಗ್ರೆಸ್​-ಜೆಡಿಎಸ್​ ಜಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಕೂಡಲೇ ಶ್ರೀಮಂತರ ಕೈಯಲ್ಲಿರುವ ಬ್ಯಾಂಕ್​ ಕೀ ಕಿತ್ತು ಬಡವರ ಕೈಗೆ ನೀಡುತ್ತೇವೆ. ದೇಶದ ಬಡತನದ ವಿರುದ್ಧ ಸರ್ಜಿಕಲ್​ ಸ್ಟ್ರೈಕ್​ ನಡೆಸುತ್ತೇವೆ ಎಂದು ಹೇಳಿದರು.

ನಮ್ಮೆಲ್ಲ ಗುರಿ ಬಿಜೆಪಿ ಸೋಲು
ಕರ್ನಾಟಕದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಒಂದಾಗಿ ಲೋಕಸಭಾ ಚುನಾವಣೆ ಎದುರಿಸುತ್ತೇವೆ. ನಮ್ಮೆರಡೂ ಪಕ್ಷಗಳ ಗುರಿ ಬಿಜೆಪಿ ಮತ್ತು ನರೇಂದ್ರ ಮೋದಿಯವರನ್ನು ಸೋಲಿಸುವುದೇ ಆಗಿದೆ. ಹಾಗಾಗಿ ರಾಜ್ಯದಲ್ಲಿ ಎಲ್ಲೆಲ್ಲಿ ಜೆಡಿಎಸ್​ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೋ ಅವರನ್ನೆಲ್ಲ ಗೆಲ್ಲಿಸಲು ಕಾಂಗ್ರೆಸ್​ ನಾಯಕರು, ಕಾರ್ಯಕರ್ತರು ಶ್ರಮಿಸಬೇಕು. ಹಾಗೇ ಕಾಂಗ್ರೆಸ್​ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್​ ಮುಖಂಡ, ನಾಯಕರು ಪ್ರಯತ್ನಿಸಬೇಕು. ಇದು ನನ್ನ ಮನವಿ ಎಂದು ರಾಹುಲ್​ ಗಾಂಧಿ ಹೇಳಿದರು.

ಮೋದಿ ಬಡವರ ಪರ ಇಲ್ಲ
ಈ ದೇಶ ರೈತರು, ಬಡವರು, ಕಾರ್ಮಿಕರು, ಶ್ರಮಿಕ ವರ್ಗಕ್ಕೆ ಸೇರಿದ್ದು. ಇವರೆಲ್ಲ ತುಂಬ ಕಷ್ಟಪಟ್ಟು ದುಡಿಯುತ್ತಿದ್ದಾರೆ. ದೇಶದ ಅಭಿವೃದ್ಧಿಗಾಗಿ ತಮ್ಮ ರಕ್ತ, ಬೆವರು ಹರಿಸುತ್ತಿದ್ದಾರೆ. ಆದರೆ ಈ ಬಡಜನರಿಗೆ ಮೋದಿಯವರು ಏನೂ ಒಳಿತು ಮಾಡಲಿಲ್ಲ. ಶ್ರೀಮಂತ ಉದ್ಯಮಿಗಳ ಪರ ಕಾರ್ಯಕ್ರಮಗಳನ್ನೇ ಹೆಚ್ಚೆಚ್ಚು ಜಾರಿಗೆ ತಂದರು. 30,000 ರೂಪಾಯಿಗಳು ಶ್ರೀಮಂತರ ಖಾತೆಗೇ ಹೋದವು. ಭ್ರಷ್ಟಾಚಾರ ನಡೆಸಿದರು. ಸಿಬಿಐ ನಿರ್ದೇಶಕರನ್ನೇ ರಾತ್ರೋರಾತ್ರಿ ರಜೆಯಲ್ಲಿ ಕಳಿಸಿದರು ಎಂದು ವ್ಯಂಗ್ಯವಾಡಿದರು.

ಮೋದಿಯವರು ತಮ್ಮ ಆಡಳಿತದ ಅವಧಿಯಲ್ಲಿ ದೇಶವನ್ನು ಒಡೆದಿದ್ದಾರೆ. ಅದನ್ನು ಜೋಡಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ರಾಹುಲ್​ ಹೇಳಿದರು.

ರೈತರ ಸಾಲಮನ್ನಾಕ್ಕೆ ಹಣವಿಲ್ಲ
ಮೋದಿಯವರು 5 ವರ್ಷಗಳಲ್ಲಿ 15 ಉದ್ಯಮಿಗಳ ಮೂರುವರೆ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರ ಸಾಲಮನ್ನಾ ಬಗ್ಗೆ ಪ್ರಶ್ನಿಸಿದರೆ ಅದು ಸಾಧ್ಯವಿಲ್ಲ, ಹಣ ಎಲ್ಲಿಂದ ತರಲಿ ಎಂದು ಪ್ರಶ್ನಿಸುತ್ತಾರೆ. ನಮ್ಮ ಸರ್ಕಾರ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್​ಗಳಲ್ಲಿ ಸಾಲ ಮನ್ನಾ ಮಾಡಿದೆ. ಇಲ್ಲೆಲ್ಲ ಹಣ ಎಲ್ಲಿಂದ ಬಂತು. ದೇಶದಲ್ಲಿ ಹಣದ ಕೊರತೆ ಇಲ್ಲ. ಆದರೆ ಬಡವರು, ರೈತರಿಗೆ ಕೊಡುವ ವಿಚಾರ ಬಂದಾಗ ಹಣವೇ ಇರುವುದಿಲ್ಲ ವ್ಯಂಗ್ಯವಾಗಿ ಹೇಳಿದರು.

ಶಿಕ್ಷಣ, ಸರ್ಕಾರಿ ಶಾಲಾ ಕಾಲೇಜು, ಆರೋಗ್ಯಕ್ಕೆ ಸಂಬಂಧಪಟ್ಟ ಯೋಜನೆಗಳಿಗೆ ವಿನಿಯೋಗಿಸಲು, ಯುವಕರ ಉದ್ಯೋಗಕ್ಕೆ ನೀಡಲು ಕೇಂದ್ರ ಸರ್ಕಾರದ ಬಳಿ ಹಣವಿಲ್ಲ. ಆದರೆ ಶ್ರೀಮಂತರಿಗೆ ಕೊಡಲು ಮಾತ್ರ ಇದೆ. ಕರ್ನಾಟಕದ ಯಡಿಯೂರಪ್ಪನವರಿಗೆ ಕೇಂದ್ರದ ನಾಯಕರಿಗೆ ನೀಡಲು ಹಣವಿದೆ. ಅದೆಲ್ಲ ಎಲ್ಲಿಂದ ಸಿಗುತ್ತದೆ. ಬಿಜೆಪಿಯವರು ಜನಸಾಮಾನ್ಯರ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನ್ಯಾಯ್​’ ಅನುಷ್ಠಾನ
ನಮ್ಮ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಬಡವರ ಉದ್ಧಾರಕ್ಕೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ನ್ಯಾಯ್​ ಯೋಜನೆ ಘೋಷಿಸಿದ್ದೇವೆ. ಭಾರತದಲ್ಲಿರುವ ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಹಾಕಲು ಸಾಧ್ಯವಿಲ್ಲ. ಆದರೆ ಶೇ.20ರಷ್ಟು ಇರುವ ಬಡವರ ಖಾತೆಗೆ ವರ್ಷಕ್ಕೆ 72 ಸಾವಿರ ರೂಪಾಯಿ ಹಾಕಬಹುದು. ಇದನ್ನು ನ್ಯಾಯ್​ ಯೋಜನೆಯಡಿ ನಾವು ಮಾಡಿ ತೋರಿಸುತ್ತೇವೆ ಎಂದು ರಾಹುಲ್​ ಗಾಂಧಿ ಭರವಸೆ ನೀಡಿದರು.

ಯಾರ ವರ್ಷದ ಆದಾಯ 12 ಸಾವಿರಕ್ಕಿಂತ ಕಡಿಮೆ ಇರುತ್ತದೆಯೋ ಅವರ ಆದಾಯವೆಲ್ಲ ಹೆಚ್ಚಾಗುವಂತೆ ನಾವು ಕಾರ್ಯಕ್ರಮ ರೂಪಿಸುತ್ತೇವೆ. ಬಡತನ ರೇಖೆಗಿಂತ ಕೆಳಗೆ ಯಾರೂ ಇರಬಾರದು. ಬಡತನ ರೇಖೆಯ ಮಿತಿಯನ್ನು ಹೊಸದಾಗಿ ರೂಪಿಸುತ್ತೇವೆ ಎಂದು ಹೇಳಿದರು.

ಗಬ್ಬರ್​ ಸಿಂಗ್​ ಟ್ಯಾಕ್ಸ್​
ಜಿಎಸ್​ಟಿ ಟ್ಯಾಕ್ಸ್​ಗೆ ಗಬ್ಬರ್​ ಸಿಂಗ್​ ಟ್ಯಾಕ್ಸ್​ ಎಂದು ಉಲ್ಲೇಖಿಸಿದ ರಾಹುಲ್​ ಗಾಂಧಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಈ ಜಿಎಸ್​ಟಿ ಟ್ಯಾಕ್ಸ್​ ನಿಯಮದಲ್ಲಿ ಬದಲಾವಣೆ ಮಾಡುತ್ತೇವೆ. ಏಕ, ಹಾಗೂ ಸರಳ ರೂಪದ ತೆರಿಗೆ ಪದ್ಧತಿ ಜಾರಿಗೆ ತರುತ್ತೇವೆ ಎಂದು ಹೇಳಿದರು.

ಜಿಎಸ್​ಟಿ ಮೂಲಕ ಪ್ರಧಾನಿ ಮೋದಿ ಪ್ರತಿದಿನ ಜನರನ್ನು ಹಿಂಸಿಸುತ್ತಿದ್ದಾರೆ. ಒಂದೆಡೆ ಪೆಟ್ರೋಲ್​, ಡೀಸೆಲ್​ ಬೆಲೆ ಏರುತ್ತಿದೆ. ನಿತ್ಯವಸ್ತುಗಳ ಬೆಲೆಯೂ ಕೈಗೆಟಕುತ್ತಿಲ್ಲ. ಮತ್ತೊಂದೆಡೆ ಗಬ್ಬರ್​ಸಿಂಗ್​ ಟ್ಯಾಕ್ಸ್ (ಜಿಎಸ್​ಟಿ). ಸಾಮಾನ್ಯ ಜನರಿಗೆ ಪ್ರತಿದಿನ ಯಾವುದೇ ಕೆಲಸಕ್ಕೆ ಹೋದರೂ ಫಾರ್ಮ್​ ತುಂಬುವ ಕೆಲಸ. ಇದೆಲ್ಲ ಮೋದಿಯವರ ಕೊಡುಗೆ ಎಂದರು.

ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯುವಕರಿಗೆ ಉದ್ಯೋಗ ಸ್ಥಾಪನೆಗೆ ಅವಕಾಶ ನೀಡುತ್ತೇವೆ. ಯಾವುದೇ ಪರವಾನಗಿ, ಅನುಮತಿಯ ಅವಶ್ಯಕತೆ ಇಲ್ಲದೆ ಉದ್ಯಮ ಪ್ರಾರಂಭಿಸಲು ಅವಕಾಶ ನೀಡುತ್ತೇವೆ ಎಂದೂ ತಿಳಿಸಿದರು.

Leave a Reply

Your email address will not be published. Required fields are marked *