ಯುಎಇ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಸ್ವೀಕರಿಸಿದ ನರೇಂದ್ರ ಮೋದಿ; ಕಾಶ್ಮೀರದ ಬಗ್ಗೆ ಖಡಕ್​ ಮಾತು…

ಅಬುದಾಬಿ: ತ್ರಿರಾಷ್ಟ್ರ ಪ್ರವಾಸದಲ್ಲಿರುವ ನರೇಂದ್ರ ಮೋದಿ ಸದ್ಯ ಪ್ರಮುಖ ಮುಸ್ಲಿಂ ರಾಷ್ಟ್ರ ಸಂಯುಕ್ತ ಅರಬ್​ ಸಂಸ್ಥಾನ (ಯುಎಇ)ದಲ್ಲಿದ್ದು ಇಂದು ಅಲ್ಲಿನ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ‘ಆರ್ಡರ್​ ಆಫ್​ ಜಯೇದ್​’ ನ್ನು ಸ್ವೀಕರಿಸಿದರು.

ಯುಎಇ ರಾಜಕುಮಾರ ಶೇಖ್​ ಮೊಹಮ್ಮದ್​ ಬಿನ್​ ಜಯೇದ್​ ಅಲ್​ ನಹ್ಯನ್​ (ಎಂಬಿಝಡ್​) ಅವರು ನರೇಂದ್ರ ಮೋದಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಶೇಖ್​ ಮೊಹಮ್ಮದ್​ ಅವರೇ ಸ್ವತಃ ನರೇಂದ್ರ ಮೋದಿಯವರ ಕತ್ತಿಗೆ ಬಂಗಾರದ ಪದಕವನ್ನು ಹಾಕಿದರು. ಈ ಪದಕದ ಮೇಲೆ ಯುಎಇಯ ಪ್ರಥಮ ಅಧ್ಯಕ್ಷ ಜಯೇದ್​ ಸುಲ್ತಾನ್​ ಅಲ್​ ನಹ್ಯಾನ್ ಅವರ ಭಾವಚಿತ್ರವಿದೆ. ನಂತರ ಮೋದಿ ಹಾಗೂ ಎಂಬಿಝಡ್ ಅವರು ಪರಸ್ಪರ ಹಸ್ತಲಾಘವ ಮಾಡಿಕೊಂಡರು. ನಂತರ ಫೋಟೋಗಳಿಗೆ ಪೋಸ್​ ಕೊಡುವ ಸಂದರ್ಭದಲ್ಲಿ ಯುಎಇ ರಾಜಕುಮಾರ ಮೋದಿಯವರ ಬಳಿ, ನೀವು ಈ ಪ್ರಶಸ್ತಿಗೆ ಅರ್ಹರಾಗಿದ್ದೀರಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

2019ರ ಏಪ್ರಿಲ್​ನಲ್ಲಿ ಈ ಬಾರಿಯ ‘ಆರ್ಡರ್​ ಆಫ್​ ಜಯೇದ್​’ ಪ್ರಶಸ್ತಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿತ್ತು. ಮುಸ್ಲಿಂ ಬಾಹುಳ್ಯದ ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಮಾಡಿದ ಬೆನ್ನಲ್ಲೇ ಪ್ರಮುಖ ಮುಸ್ಲಿಂ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ್ದು ಇನ್ನೂ ಹೆಚ್ಚಿನ ಮಾನ್ಯತೆ ಪಡೆದಿದೆ.

ಇದಕ್ಕೂ ಮೊದಲು ಅಲ್ಲಿನ ಪ್ರಸಿದ್ಧ ಪತ್ರಿಕೆಗೆ ಸಂದರ್ಶನ ನೀಡಿದ್ದು, ಗಡಿಯಾಚೆಗಿನ ಭಯೋತ್ಪಾದನೆ, ಕಾಶ್ಮೀರ ಸ್ಥಾನಮಾನ ರದ್ದು, ಭಾರತ- ಯುಎಇ ಸಮಗ್ರ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವ ಸೇರಿ ಹಲವು ವಿಚಾರಗಳ ಬಗ್ಗೆ ಮಾತಾಡಿದ್ದಾರೆ.

ಜಮ್ಮುಕಾಶ್ಮೀರದ ಅಭಿವೃದ್ಧಿಗೆ ಮಾರಕವಾಗಿದ್ದ ಪ್ರತ್ಯೇಕತೆಯನ್ನು ಕೊನೆಗೊಳಿಸುವ ದೃಷ್ಟಿಯಿಂದ ಆರ್ಟಿಕಲ್​ 370ನ್ನು ರದ್ದುಗೊಳಿಸಲಾಗಿದ್ದು, ಇದು ಪಾರದರ್ಶಕ ನಿರ್ಧಾರ. ಕೆಲವು ಪಟ್ಟಭದ್ರರು ತಮ್ಮ ಹಿತಾಸಕ್ತಿಗಾಗಿ ಜಮ್ಮುಕಾಶ್ಮೀರ ಪ್ರತ್ಯೇಕತೆಯನ್ನು ಬೆಂಬಲಿಸುತ್ತಿದ್ದರು ಎಂದು ಹೇಳಿದರು.

ಯುಎಇ ರಾಜಕುಮಾರ ಶೇಖ್​ ಮೊಹಮ್ಮದ್​ ಅವರ ಜತೆಗಿನ ಚರ್ಚೆಯಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಚರ್ಚಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ನಾಲ್ಕು ದಶಕಗಳಿಂದ ಈ ಗಡಿಯಾಚೆಗಿನ ಭಯೋತ್ಪಾದನೆಗೆ ಭಾರತ ಬಲಿಪಶುವಾಗಿದೆ. ಉಗ್ರರ ವಿರುದ್ಧ ಭಾರತ ತೆಗೆದುಕೊಂಡಿರುವ ಕಟ್ಟುನಿಟ್ಟಿನ ಕ್ರಮಗಳನ್ನು ಯುಎಇ ಅರ್ಥಮಾಡಿಕೊಂಡಿದ್ದು ಅದನ್ನು ಬೆಂಬಲಿಸಿದೆ. ಭಯೋತ್ಪಾದನೆಯನ್ನು ಪೋಷಿಸುತ್ತ, ಉಗ್ರರಿಗೆ ಆಶ್ರಯ ನೀಡುತ್ತಿರುವ ಶಕ್ತಿಗಳನ್ನು ವಿರೋಧಿಸಿ, ಅವರ ವಿನಾಶಕಾರಿ ಆಶಯಗಳನ್ನು ಕೈಬಿಡುವಂತೆ ಒತ್ತಾಯಿಸುವಲ್ಲಿ ಭಾರತ ಹಾಗೂ ಯುಎಇ ಸಮಾನ ಆಸಕ್ತಿಯನ್ನು ಹೊಂದಿವೆ ಎಂದರು.

ಹಾಗೇ ಆರ್ಟಿಕಲ್​ 370 ರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಭಾರತಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಗಲ್ಫ್​ ದೇಶಗಳು ಅರ್ಥ ಮಾಡಿಕೊಳ್ಳುತ್ತವೆ. ಕಾಶ್ಮೀರ ಸ್ಥಾನಮಾನ ರದ್ದು ವಿಚಾರ ನಮ್ಮ ಆಂತರಿಕ ವಿಷಯ. ಪ್ರಜಾಪ್ರಭುತ್ವ, ಮುಕ್ತ, ಪಾರದರ್ಶಕ ಮತ್ತು ಸಾಂವಿಧಾನಿಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಾಶ್ಮೀರದ ವಿಚಾರದಲ್ಲಿ ಸಂಯುಕ್ತ ಅರಬ್​ ಸಂಸ್ಥಾನದ ನಡೆಯನ್ನು ನಾನು ಶ್ಲಾಘಿಸುತ್ತೇನೆ. ನಮ್ಮ ನಿರ್ಧಾರವನ್ನು ಬೆಂಬಲಸಿದ್ದನ್ನು ಗೌರವಿಸುತ್ತೇನೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *