ಫೊನಿ ಹಾನಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ; 1000 ಕೋಟಿ ರೂ.ಗೆ ಪರಿಹಾರ ಹೆಚ್ಚಳ

ಭುವನೇಶ್ವರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಒಡಿಶಾದಲ್ಲಿ ಫೊನಿ ಚಂಡಮಾರುತದಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾಗಿರುವ ಪ್ರದೇಶಗಳ ವೈಮಾನಿ ಸಮೀಕ್ಷೆ ನಡೆಸಿದರು.

ಕಳೆದ ಶುಕ್ರವಾರ ಫೊನಿ ಚಂಡಮಾರು ಒಡಿಶಾ ಕರಾವಳಿಗೆ ಅಪ್ಪಳಿಸಿತ್ತು. 175 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದ್ದರ ಪರಿಣಾಮ ಕರಾವಳಿ ಮತ್ತು ಚಂಡಮಾರುತದ ಹಾದಿಯಲ್ಲಿ ಸಿಕ್ಕ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಹಾನಿಯುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಅವರೊಂದಿಗೆ ಮೋದಿ ಅವರು ಇಂದು ಪುರಿ, ಕಟಕ್​, ಖುದ್ರಾ, ಜಗತ್​ಸಿಂಗ್​ಪುರ್​, ಜಾಜ್​ಪುರ್​, ಕೇಂದ್ರಾಪರಾ, ಭದ್ರಕ್​, ಬಾಲಾಸೋರ್​ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.

ವೈಮಾನಿಕ ಸಮೀಕ್ಷೆಯ ನಂತರ ಮಾತನಾಡಿದ ಮೋದಿ, ‘ಒಡಿಶಾ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಸಂವಹನ ಉತ್ತಮವಾಗಿತ್ತು. ನಾನೂ ಖುದ್ದಾಗಿ ಚಂಡಮಾರುತದಿಂದ ಆದ ಹಾನಿಯ ಕುರಿತು ಮಾಹಿತಿ ಪಡೆಯುತ್ತಿದ್ದೆ. ಒಡಿಶಾದ ಜನರು ರಾಜ್ಯ ಸರ್ಕಾರದ ಮನವಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಸಾವು ನೋವಿನ ಪ್ರಮಾಣ ಹೆಚ್ಚಾಗದಂತೆ ತಡೆದಿದ್ದಾರೆ. ಕೇಂದ್ರ ಸರ್ಕಾರ ಈ ಮೊದಲು 381 ಕೋಟಿ ರೂ. ಪರಿಹಾರ ನೀಡುವುದಾಗಿ ತಿಳಿಸಿತ್ತು. ಆದರೆ ಚಂಡಮಾರುತದ ತೀವ್ರತೆ ಹೆಚ್ಚಿರುವುದು ತಿಳಿದು ಬಂದ ನಂತರ ಪರಿಹಾರ ಮೊತ್ತವನ್ನು 1000 ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.

ಒಡಿಶಾ ಸರ್ಕಾರ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಚಂಡಮಾರುತದಿಂದ ಹೆಚ್ಚು ಹಾನಿಗೊಳಗಾಗಿರುವ ಪುರಿ ಮತ್ತು ಖುದ್ರಾ ಜಿಲ್ಲೆಯ ಕೆಲವು ಭಾಗಗಳ ಪ್ರತಿ ಕುಟುಂಬಕ್ಕೆ 50 ಕೆ.ಜಿ. ಅಕ್ಕಿ, 2000 ರೂ. ಮತ್ತು ಪಾಲಿಥೀನ್​ ಶೀಟ್​ ವಿತರಿಸಲಿದೆ. ಕಡಿಮೆ ಹಾನಿಗೊಳಗಾಗಿರುವ ಪ್ರದೇಶಗಳ ಕುಟುಂಬಗಳಿಗೆ ಒಂದು ತಿಂಗಳ ಕೋಟಾದ ಅಕ್ಕಿ, 1000 ರೂ. ಮತ್ತು ಪಾಲಿಥೀನ್​ ಶೀಟ್​ಗಳನ್ನು ವಿತರಿಸಲಿದೆ ಎಂದು ಒಡಿಶಾ ಸಿಎಂ ನವೀನ್​ ಪಟ್ನಾಯಕ್​ ತಿಳಿಸಿದರು.

1999ರಲ್ಲಿ ಒಡಿಶಾಗೆ ಅಪ್ಪಳಿಸಿದ್ದ ಭೀಕರ ಚಂಡಮಾರುತಕ್ಕೆ ಸಿಲುಕಿ ಸುಮಾರು 9000 ಜನರು ಮೃತಪಟ್ಟಿದ್ದರು. ಆದರೆ ಈ ಬಾರಿ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಕೇವಲ 30 ಜನರು ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *