ಅಂದಾಜು 150 ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್​ ಷಾ ಮಾರ್ಚ್​ ಕೊನೆಯ ವಾರದಿಂದ ಹಿಡಿದು ಮೇ ಮಧ್ಯಭಾಗದವರೆಗೆ ದೇಶದಾದ್ಯಂತ ಆಯೋಜನೆಗೊಳ್ಳಲಿರುವ 125 ರಿಂದ 150 ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಇಬ್ಬರು ನಾಯಕರ ಚುನಾವಣಾ ಪ್ರಚಾರ ಕಾರ್ಯಕ್ರಮ ಪಟ್ಟಿ ಇತ್ತೀಚೆಗೆ ಅಂತಿಮಗೊಂಡಿರುವುದಾಗಿ ಬಿಜೆಪಿಯ ಮೂಲಗಳು ತಿಳಿಸಿವೆ. ಏ.11ರಿಂದ ಮೇ 19ರವರೆಗೆ ನಿಗದಿಯಾಗಿರುವ ಪ್ರತಿ ಸುತ್ತಿನ ಮತದಾನಕ್ಕೂ ಮುನ್ನ ಎಲ್ಲ ರಾಜ್ಯಗಳಿಗೂ ಭೇಟಿ ನೀಡುವ ರೀತಿಯಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಲಾಗಿದೆ.

ಭಾನುವಾರದಂದು ನವದೆಹಲಿಯ 200 ಸ್ಥಳಗಳಲ್ಲಿ ವಿಜಯ್​ ಸಂಕಲ್ಪ ಸಭೆಗಳನ್ನು ಆಯೋಜಿಸುವ ಮೂಲಕ ಬಿಜೆಪಿ 2019ರ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದೆ. ಮಾ.26ರಂದು ಇನ್ನೂ 250ಕ್ಕೂ ಹೆಚ್ಚು ಸ್ಥಳಗಳಲ್ಲಿ ವಿಜಯ್​ ಸಂಕಲ್ಪ ಸಭೆಗಳು ಆಯೋಜನೆಗೊಳ್ಳಲಿವೆ.

ಮಾ.28ರಂದು ಪ್ರಧಾನಿ ಮೋದಿ ಮೇರಠ್​ನಲ್ಲಿ ಮೊದಲ ಚುನಾವಣಾ ಸಭೆಯಲ್ಲಿ ಪಾಲ್ಗೊಳ್ಳುವರು. ಅಂದೇ ಜಮ್ಮುವಿನಲ್ಲಿ ಆಯೋಜನೆಗೊಳ್ಳಲಿರುವ ಸಭೆಯಲ್ಲಿ ಮಾತನಾಡುವರು. ಮಾ.29 ಮತ್ತು ಏ.1ರಂದು ಒಡಿಶಾದಲ್ಲಿ ಮಾ.30 ಮತ್ತು ಏ.3ರಂದು ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿರುತ್ತಾರೆ. ಇಟಾನಗರದಲ್ಲಿ ಮಾ.31 ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವ ಅವರು, ಮೈ ಭೀ ಚೌಕಿದಾರ್​ ಅಭಿಯಾನವನ್ನು ಬೆಂಬಲಿಸುವವರೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ.

ರ‍್ಯಾಲಿಗಳ ಶತಕ: ಲೋಕಸಭೆ ಚುನಾವಣೆಯ ದಿನಾಂಕ ಪ್ರಕಟವಾಗುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ 90 ದಿನಗಳಲ್ಲಿ ದೇಶದಾದ್ಯಂತ ಸಂಚರಿಸಿ 100 ಸಾರ್ವಜನಿಕ ಸಭೆಗಳನ್ನು ನಡೆಸಿದ್ದರು. (ಏಜೆನ್ಸೀಸ್​)