ಪ್ರತಿಪಕ್ಷಗಳು ಮೋದಿಯನ್ನು ನಿಂದಿಸುವ ಕೆಲಸ ಬಿಟ್ಟು ಇನ್ನೇನೂ ಮಾಡುತ್ತಿಲ್ಲ: ಪ್ರಧಾನಿ ವಾಗ್ದಾಳಿ

ಪಟನಾ: ಪ್ರತಿಪಕ್ಷಗಳೆಲ್ಲ ಒಂದಾಗಿ ಮೋದಿ ಮುಕ್ತ ಭಾರತ ಮಾಡಲು ಪ್ರಯತ್ನಿಸುತ್ತಿವೆ. ಆದರೆ ನಾನು ದೇಶದಿಂದ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಹೋರಾಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಪಟನಾದಲ್ಲಿ ಹಮ್ಮಿಕೊಂಡಿದ್ದ ವಿಜಯಸಂಕಲ್ಪ ರ್ಯಾಲಿಯಲ್ಲಿ ಮಾತನಾಡಿ, ಪ್ರತಿಪಕ್ಷಗಳು ಮೋದಿಯನ್ನು ನಿಂದಿಸುವ ಕೆಲಸ ಬಿಟ್ಟು ಇನ್ನೇನೂ ಮಾಡುತ್ತಿಲ್ಲ. ಭಯೋತ್ಪಾದಕರನ್ನು ನಿರ್ಮೂಲನ ಮಾಡುವುದಕ್ಕೆ ಆದ್ಯತೆ ಕೊಡಬೇಕಲ್ಲವೇ? ದೇಶದಲ್ಲಿರುವ ಬಡತನ, ಭ್ರಷ್ಟಾಚಾರ, ಕಪ್ಪುಹಣ ತೊಡೆದು ಹಾಕಲು ಕೈ ಜೋಡಿಸಿ ಎಂದು ನಾನು ಮನವಿ ಮಾಡಿಕೊಳ್ಳುತ್ತಿದ್ದರೆ, ಅವರೆಲ್ಲ ಮೋದಿಯನ್ನೇ ತೊಡೆದು ಹಾಕಲು ಪ್ರಯತ್ನಿಸುತ್ತಿದ್ದಾರೆ. ಉದ್ಯೋಗಾವಕಾಶ ಹೆಚ್ಚಿಸಲು, ಅಪೌಷ್ಟಿಕತೆ ನಿಯಂತ್ರಣದಂತಹ ಕೆಲಸಕ್ಕೆ ವಿಪಕ್ಷಗಳೂ ಕೈಜೋಡಿಸಬೇಕಲ್ಲವೇ ಎಂದು ವಾಗ್ದಾಳಿ ನಡೆಸಿದರು.

ದಶಕಗಳ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಜತೆ ವೇದಿಕೆ ಹಂಚಿಕೊಂಡ ಮೋದಿ ಕಾಂಗ್ರೆಸ್​ ವಿರುದ್ಧ ಹರಿಹಾಯ್ದರು. ನಮ್ಮ ವಾಯುಪಡೆ ನಡೆಸಿದ ವೈಮಾನಿಕ ದಾಳಿ ಬಗ್ಗೆ ಕಾಂಗ್ರೆಸ್​ ಅನುಮಾನ ವ್ಯಕ್ತಪಡಿಸುತ್ತಿದೆ. ಈ ಮೊದಲು ಉರಿಯಲ್ಲಿ ನಡೆದಿದ್ದ ಸರ್ಜಿಕಲ್​ ಸ್ಟ್ರೈಕ್​ಗೆ ಪುರಾವೆ ಕೇಳಿದ್ದರು. ಈಗ ವಾಯುಪಡೆ ನಡೆಸಿದ ದಾಳಿಯ ಸಾಕ್ಷ್ಯ ಕೇಳುತ್ತಿದ್ದಾರೆ. ಈ ಮೂಲಕ ನಮ್ಮ ಸೈನ್ಯದ ನೈತಿಕತೆಯನ್ನೇ ಪ್ರಶ್ನಿಸುತ್ತಿದ್ದಾರೆ ಎಂದರು.

ಉಗ್ರರ ವಿರುದ್ಧ ಭಾರತ ಎಷ್ಟು ಬಲಿಷ್ಠ ಹೋರಾಟ ನಡೆಸುತ್ತದೆ ಎಂಬುದನ್ನು ನಾವು ತೋರಿಸಿದ್ದೇವೆ. ಈ ವಿಚಾರದಲ್ಲಿ ಇಡೀ ದೇಶದ ಜನರು ಸರ್ಕಾರದ ಜತೆ ನಿಂತಿದ್ದರೂ ಕಾಂಗ್ರೆಸ್​ ಮತ್ತು ಇತರ ಪಕ್ಷಗಳು ಕೇಂದ್ರ ಸರ್ಕಾರದ ನಡೆಯನ್ನು ಬೆಂಬಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.