ಅಧಿಕಾರಕ್ಕೋಸ್ಕರ ಮನೋಹರ್​ ಪರಿಕ್ಕರ್​ ಮೋದಿಯವರನ್ನು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆ: ಮಾಜಿ ಸಚಿವ ಜಯಪಾಲ್​ ರೆಡ್ಡಿ ಆರೋಪ

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರು ಅನಾರೋಗ್ಯಪೀಡಿತರಾಗಿದ್ದರೂ ಅಧಿಕಾರದಲ್ಲಿ ಮುಂದುವರಿಯಲು ಪ್ರಧಾನಿ ಮೋದಿಯವರಿಗೆ ರಫೇಲ್​ ಒಪ್ಪಂದದ ಬಗ್ಗೆ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್​ ಮುಖಂಡ ಎಸ್​.ಜೈಪಾಲ್​ ರೆಡ್ಡಿ ಆರೋಪಿಸಿದ್ದಾರೆ.

ಮಾರ್ಗೋವದಲ್ಲಿ ಆಯೋಜಿಸಿದ್ದ ಜನಾಕ್ರೋಶ ರ್ಯಾಲಿಯಲ್ಲಿ ಮಾತನಾಡಿ, ರಫೇಲ್​ ಒಪ್ಪಂದದ ವೇಳೆ ಮನೋಹರ್​ ಪರಿಕ್ಕರ್​ ಅವರು ರಕ್ಷಣಾ ಮಂತ್ರಿಯಾಗಿದ್ದರು. ಈಗ ಇದೇ ವಿಚಾರದಲ್ಲಿ ಮೋದಿಯವರಿಗೆ ಬ್ಲ್ಯಾಕ್​ಮೇಲ್​ ಮಾಡಿಕೊಂಡು ಸಿಎಂ ಖುರ್ಚಿ ಭದ್ರಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಮನೋಹರ್​ ಅವರು ನೈತಿಕತೆ ಬಗ್ಗೆ ಮಾತನಾಡುತ್ತಾರೆ. ಆದರೆ ಇಷ್ಟೆಲ್ಲ ಅನಾರೋಗ್ಯವಿದ್ದರೂ ಜಿಗಣೆಯಂತೆ ಕುರ್ಚಿಗೆ ಅಂಟಿಕೊಂಡಿರುವುದು ಯಾವ ನೈತಿಕತೆ? ಪರಿಕ್ಕರ್​ ಅವರು ಮಹಾತ್ಮಗಾಂಧಿ, ಜವಾಹರ್​ಲಾಲ್​ ನೆಹರು, ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರಿಗಿಂತ ದೊಡ್ಡವರಾ? ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಕೆಳಗಿಳಿಸಲು ಸಾಧ್ಯವಿಲ್ಲವಾ, ಅಲ್ಲಿ ಬಿಜೆಪಿಯ ಬೇರೆ ನಾಯಕರು ಯಾರೂ ಇಲ್ಲವಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು