ಮೋದಿ ಮಂತ್ರ ಪರಿಣಾಮ ಬೀರುತ್ತಿಲ್ಲ, ಅಮಿತ್​ ಷಾ ಚಕ್ರವ್ಯೂಹ ಕೆಲಸ ಮಾಡುತ್ತಿಲ್ಲ: ಹೀಗೆ ಹೇಳಿದ್ದು ಬಿಜೆಪಿ ಮಾಜಿ ಸಚಿವ !

ಉತ್ತರ ಪ್ರದೇಶ: ಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಮಂತ್ರದಿಂದ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ ಎಂದು ಉತ್ತರ ಪ್ರದೇಶ ಹಿರಿಯ ಬಿಜೆಪಿ ಮುಖಂಡ, ಮಾಜಿ ಕೇಂದ್ರ ಸಚಿವ ಸಂಘ ಪ್ರಿಯಾ ಗೌತಮ್​ ಅವರು ಪಕ್ಷದ ಹಿರಿಯ ಕಾರ್ಯಕರ್ತರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಪಕ್ಷದ ಅಧ್ಯಕ್ಷರಾಗಿರುವ ಅಮಿತ್​ ಷಾ ಅವರನ್ನು ಬದಲಿಸಿ ಆ ಸ್ಥಾನಕ್ಕೆ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಅವರನ್ನು ನೇಮಕ ಮಾಡಬೇಕು. ಕೇಂದ್ರ ಸಚಿವ ನಿತಿನ್​ ಗಡ್ಕರಿಯವರನ್ನು ಡೆಪ್ಯುಟಿ ಪ್ರಧಾನ ಮಂತ್ರಿಯನ್ನಾಗಿ ನೇಮಕ ಮಾಡಬೇಕು. ಹಾಗೇ ಉತ್ತರ ಪ್ರದೇಶಕ್ಕೆ ರಾಜನಾಥ್​ ಸಿಂಗ್​ ಅವರು ಮುಖ್ಯಮಂತ್ರಿಯಾಗಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಗೌತಮ್​ ಅವರು ಎರಡು ಬಾರಿ ಉತ್ತರಪ್ರದೇಶದಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದಾರೆ. ಅಲ್ಲದೆ ಅಟಲ್​ ಬಿಹಾರಿ ವಾಜಪೇಯಿ ಸರ್ಕಾರವಿದ್ದಾಗ ಕೇಂದ್ರ ಸಚಿವರಾಗಿದ್ದರು.

ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಮೋದಿ ಮಂತ್ರ ಮತ್ತು ಅಮಿತ್​ ಷಾ ಅವರ ಚಕ್ರವ್ಯೂಹ ಏನೂ ಕೆಲಸ ಮಾಡಲಿಲ್ಲ. ಆ ರಾಜ್ಯಗಳ ಸೋಲಿನ ಹೊಣೆಯನ್ನು ಸಂಪೂರ್ಣವಾಗಿ ಅವರೇ ಹೊರಬೇಕು. ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್​ಗಢಗಳಲ್ಲಿ ಪಕ್ಷ ಅಧಿಕಾರ ಕಳೆದುಕೊಂಡಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷದಲ್ಲಿ ಕೆಲವು ಬದಲಾವಣೆಗಳು ಆಗಲೇಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು, ಮೋದಿಯವರೇ ಪ್ರಧಾನಿಯಾಗಬೇಕು ಎಂಬುದು ಆಶಯ. ಆದರೆ ಹೀಗಾಗಬೇಕು ಎಂದರೆ ಸರ್ಕಾರದಲ್ಲಿ, ಪಕ್ಷದಲ್ಲಿ ಕೆಲವು ಬದಲಾವಣೆಗಳು ಅವಶ್ಯಕವಾಗಿದೆ. ನಿತಿನ್ ಗಡ್ಕರಿಯವರನ್ನು ಡೆಪ್ಯುಟಿ ಪ್ರಧಾನಿಯನ್ನಾಗಿ ನೇಮಕ ಮಾಡಬೇಕು. ಯೋಗಿ ಆದಿತ್ಯನಾಥ್​ ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಶಿವರಾಜ್​ ಚೌಹಾಣ್​ ನೇಮಕ ಮಾಡಬೇಕು. ಇದರಿಂದ ಪಕ್ಷದ ಕಾರ್ಯಕರ್ತರಲ್ಲೂ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಗೌತಮ್​ ಹೇಳಿದ್ದಾರೆ.

Leave a Reply

Your email address will not be published. Required fields are marked *