ಪ್ರಧಾನಿ ಮೋದಿ, ಸಚಿವೆ ಸುಷ್ಮಾ ಸ್ವರಾಜ್​ರನ್ನು ಭೇಟಿ ಮಾಡಿದ ಪಾಕ್​ ಸಂಸದ

ನವದೆಹಲಿ: ಪಾಕಿಸ್ತಾನ ಸಂಸತ್ತಿನಲ್ಲಿರುವ ಹಿಂದೂ ಸಂಸದ ರಮೇಶ್​ ಕುಮಾರ್​ ವಂಕ್ವಾನಿ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್​ ಮತ್ತು ವಿ.ಕೆ.ಸಿಂಗ್​ ಅವರನ್ನು ಭೇಟಿಯಾಗಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

ವಂಕ್ವಾನಿ ಅವರು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಅವರ ಪಾಕಿಸ್ತಾನ್ ತಹ್ರೀಕ್-ಎ-ಇನ್ಸಾಫ್ ದ ಸದಸ್ಯರಾಗಿದ್ದು ಭಾರತಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಂತರ ಪ್ರಧಾನಿ, ಸಚಿವರನ್ನು ಭೇಟಿಯಾಗಿದ್ದಾರೆ. ಆದರೆ ಏನನ್ನು ಚರ್ಚಿಸಿದ್ದಾರೆ ಎಂದು ತಿಳಿದುಬಂದಿಲ್ಲ.

ನಂತರ ಮಾಧ್ಯಮ ಹೇಳಿಕೆ ನೀಡಿರುವ ಅವರು, ಪುಲ್ವಾಮಾದಲ್ಲಿ ಉಗ್ರರ ದಾಳಿಯಾದ ನಂತರ ಉಂಟಾಗಿರುವ ಬಿಕ್ಕಟ್ಟು ಪರಿಸ್ಥಿತಿಯನ್ನು ಕಡಿಮೆ ಮಾಡಲು ಎರಡೂ ದೇಶಗಳ ಸರ್ಕಾರದ ನಡುವೆ ಮಧ್ಯವರ್ತಿಯಾಗಿ ಇದ್ದು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಉಂಟಾಗಿರುವ ಆತಂಕದ ಸಂದರ್ಭದ ಬಗ್ಗೆ ಪಾಕಿಸ್ತಾನ ಸರ್ಕಾರಕ್ಕೆ ತಿಳಿಸುತ್ತೇನೆ. ಹಾಗೇ ಭಾರತದ ಪ್ರಧಾನಿ ನರೇಂದ್ರ ಮೋದಿ, ಸುಷ್ಮಾ ಸ್ವರಾಜ್​ ಅವರಿಗೂ ತಿಳಿಸುತ್ತೇನೆ ಎಂದಿದ್ದಾರೆ.

ಡಾ. ರಮೇಶ್​ಕುಮಾರ್​ ವಂಕ್ವಾನಿ ಅವರು ಪಾಕಿಸ್ತಾನ ಹಿಂದು ಕೌನ್ಸಿಲ್​ನ ಸಂಸ್ಥಾಪಕರು. ತಮಗೆ ಭಾರತದೊಂದಿಗೆ ಆಧ್ಯಾತ್ಮಿಕವಾಗಿ ಸಂಬಂಧವಿದೆ. ವರ್ಷದಲ್ಲಿ ಎರಡು ಬಾರಿಯಾದರೂ ಈ ದೇಶಕ್ಕೆ ಭೇಟಿ ನೀಡುತ್ತೇನೆ ಎಂದಿದ್ದಾರೆ. ಈಗಲೂ ಸಹ ಅವರು ತಮ್ಮ ವೈಯಕ್ತಿಕ ಪ್ರವಾಸಕ್ಕೇ ಬಂದಿದ್ದರು ಎನ್ನಲಾಗಿದೆ.